ದ್ರಾಕ್ಷಿ ಬೆಳೆಗಾರರ ಸಂಘದಿಂದ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ಭೀಮಸೇನ ಕೊಕರೆಯವರಿಗೆ ಸನ್ಮಾನ
ಲೋಕದರ್ಶನ ವರದಿ
ವಿಜಯಪುರ 09 : ಕೃಷಿ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಗುರುತಿಸಿ, ಬಬಲೇಶ್ವರದ ಭೀಮಸೇನ ಮಹದೇವಪ್ಪ ಕೊಕರೆ ಅವರಿಗೆ ನಾಡಿನ ಪ್ರತಿಷ್ಠಿತ ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ ವತಿಯಿಂದ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದು ದ್ರಾಕ್ಷಿ ಬೆಳೆಗಾರ ಸಮುದಾಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ದಿ.ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ವತಿಯಿಂದ ಭೀಮಸೇನ ಮಹದೇವಪ್ಪ ಕೊಕರೆ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಸಂಘದ ಅಧ್ಯಕ್ಷರಾದ ಡಾ. ಕೆ. ಎಚ್. ಮುಂಬಾರೆಡ್ಡಿ ಮಾತನಾಡಿ, ಕೃಷಿ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಕೊಕರೆ ಅವರು ಸಲ್ಲಿಸಿರುವ ಸೇವೆ ಯುವಜನತೆಗೆ ಪ್ರೇರಣೆಯಾಗಿದ್ದು, ಅವರಿಗೆ ದೊರೆತಿರುವ ರಾಜ್ಯಮಟ್ಟದ ಪ್ರಶಸ್ತಿ ಜಿಲ್ಲೆಯ ಹಾಗೂ ರೈತ ಸಮುದಾಯದ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಶ್ಲಾಘಿಸಿದರು. ಇದೇ ರೀತಿಯಾಗಿ ಇನ್ನಷ್ಟು ಸಾಧನೆಗಳನ್ನು ಮಾಡಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕೀರ್ತಿ ತರುವಂತಾಗಲಿ ಎಂದು ಹಾರೈಸಿ, ಭೀಮಸೇನ ಮಹದೇವಪ್ಪ ಕೊಕರೆ ಅವರಿಗೆ ತುಂಬು ಹೃದಯದ ಅಭಿನಂದನೆಗಳು ವೈಯಕ್ತಿಕವಾಗಿ ಹಾಗೂ ಸಂಘದ ಪರವಾಗಿ ಧನ್ಯವಾದಗಳನ್ನು ಅರ್ಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಚ್. ಆರ್. ಉಟಗಿ, ಎಸ್.ಎಚ್. ಛಾಯಾಗೋಳ (ವಕೀಲರು) ಖಜಾಂಚಿ ವಾಮನ್ ಮಹೀಷಿ, ವಿಶ್ವನಾಥ ಚೆನ್ನಾಳ, ಮಲ್ಲಪ್ಪ ತುಂಗಳ, ಉಮೇಶ ಮಲ್ಲನ್ನವರ, ಶ್ರೀಶೈಲಗೌಡ ಪಾಟೀಲ, ಮಹಾವೀರ ಕುಸನಾಳ, ಸುರೇಶ ಬಿರಾದಾರ, ಅಶೋಕ ಬಾಲಗಾಂವ ಮುಂತಾದವರು ಉಪಸ್ಥಿತರಿದ್ದು, ಪ್ರಶಸ್ತಿ ಪುರಸ್ಕೃತರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.