ಬಳ್ಳಾರಿ ನಾಲಾ ಕಾಮಗಾರಿ ಪೂರ್ಣಗೊಳಿಸುವಂತೆ; ಸಿಡಿದೆದ್ದ ರೈತರು, ರಸ್ತೆ ತಡೆದು ಪ್ರತಿಭಟನೆ
ಲೋಕದರ್ಶನ ವರದಿ
ಯರಗಟ್ಟಿ 18: ಬಳ್ಳಾರಿ ನಾಲಾ ಕಾಮಗಾರಿ ಹಾಗೂ ತಾಲೂಕಿನ ವಿವಿಧ ನೀರಾವರಿ ಯೋಜನೆ ಪೂರ್ಣಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸಂಘಟನೆ, ಕರವೇ ಸಂಘಟನೆ, ಮಾಜಿ ಸೈನಿಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ನೇತೃತ್ವದಲ್ಲಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಾವಿರಾರು ರೈತರು ಗುರುವಾರ ಬೆಳಗಾವಿ ಮತ್ತು ಬಾಗಲಕೋಟೆ, ಸವದತ್ತಿ ಮತ್ತು ಗೋಕಾಕ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಮಾತನಾಡಿ ಬಳ್ಳಾರಿ ನಾಲಾ ವಿಷಯದಲ್ಲಿ 20 ವರ್ಷಗಳಿಂದ ಸರಕಾರ ಕಣ್ಣು ಮುಚ್ಚಿಕೊಳ್ಳುತ್ತಿದ್ದೆ ಕಾಮಗಾರಿಗೆ ಸಾಕಷ್ಟು ಹಣವಿದ್ದರೂ ಕಾಮಗಾರಿಯನ್ನು ಆರಂಭಿಸದೆ ಅಧಿಕಾರಿಗಳು ರೈತರಿಗೆ ಮಲತಾಯಿ ಧೋರಣೆ ತೋರುತ್ತಿದ್ದಾರೆ ಕೂಡಲೇ ಅಧಿಕಾರಿಗಳು ಎಚ್ಚೆತ್ತು ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಬರುವ ದಿನಮಾನಗಳಲ್ಲಿ ರೈತರಿಂದ ಲಂಚ ಪಡೆಯುವುದು ಇನ್ನಿತರ ಕಾರ್ಯಗಳಿಗೆ ತೊಂದರೆ ಕೊಟ್ಟರೆ ಅಂತಹ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿ ಅಧಿಕಾರಿಗಳನ್ನು ಮನೆಗೆ ಕಳಿಸುವ ಎಚ್ಚರಿಕೆ ನೀಡಿದರು.