ರಾಜ್ಯ ಹೆದ್ದಾರಿ ರಸ್ತೆ ತಡೆದು ರೈತರ ಬೃಹತ್ ಪ್ರತಿಭಟನೆ
ಬಳ್ಳಾರಿ 06: ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ವತಿಯಿಂದ ಫೆ. 6ರಂದು ದಿಲ್ಲಿಯಲ್ಲಿ ಹೋರಾಟ ನಿರತ ರೈತರ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ದೌರ್ಜನ್ಯ, ದಬ್ಬಾಳಿಕೆ ಖಂಡಿಸಿ ಹಾಗೂ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಬಳ್ಳಾರಿ ಜಿಲ್ಲೆಯ ಕೋಳೂರು ಕ್ರಾಸ್ ಬಳಿ ಸೋಮಸಮುದ್ರ, ಕೋಳೂರು, ದಮ್ಮೂರು, ಬೈಲೂರು, ವದ್ದಟ್ಟಿ ಬಾದನಹಟ್ಟಿ ಮತ್ತಿತರ ಹಳ್ಳಿಗಳಿಂದ ರೈತರು ರಾಜ್ಯ ಹೆದ್ದಾರಿ ರಸ್ತೆ ತಡೆ ಹೋರಾಟ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘಟನೆ(ಹಸಿರು ಸೇನೆ) ರಾಜ್ಯ ಕಾರ್ಯ ಅಧ್ಯಕ್ಷ ಆರ್.ಮಾದವ ರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರದ ಮೂರು ಕೃಷಿ ಸಂಬಂಧಿತ ಕಾನೂನುಗಳನ್ನು ರದ್ದು ಮಾಡಬೇಕು, ವಿದ್ಯುತ್ ಮಸೂದೆ-2020ನ್ನು ವಾಪಸು ಪಡೆಯಬೇಕು ಹಾಗೂ ಎಲ್ಲಾ ಕೃಷಿ ಉತ್ಪನ್ನಗಳಿಗೆ ಡಾ. ಎಂ.ಎಸ್. ಸ್ವಾಮಿನಾಥನ್ ವರದಿಯನ್ವಯ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿ ಮಾಡುವ ಕಾನೂನನ್ನು ರಚಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘಟನೆ(ಹಸಿರು ಸೇನೆ)ಯ ಜಿಲ್ಲಾ ಗೌರವ ಅಧ್ಯಕ್ಷ ಸಂಘನಕಲ್ಲು ಕೃಷ್ಣಪ್ಪ, ಆರ್.ಕೆ.ಎಸ್. ಸಂಘಟನೆ ಮುಖಂಟರಾದ ಬಸಣ್ಣ, ಪಂಪಾಪತಿ, ಎಐಎಂಎಸ್ಎಸ್ ಜಿಲ್ಲಾ ಮುಖಂಡರು ವಿದ್ಯಾವತಿ, ಎಐಡಿಎಸ್ಓ ಮುಖಂಡರಾದ ರವಿಕಿರಣ್.ಜೆ.ಪಿ, ಶಾಂತಿ.ಎಂ, ಕಂಬಳಿ ಮಂಜುನಾಥ, ಎಐಡಿವೈಓ ಮುಖಂಡರಾದ ಜಗದೀಶ್ ನೇಮಕಲ್ ಹಾಗೂ ದಲಿತ ಸಂಘಟನೆಯ ಮುಖಂಡರು ಮತ್ತು ನೂರಾರು ರೈತರು ಭಾಗವಹಿಸಿದ್ದರು.