ರೈತ ಹೋರಾಟ ವಿರೋಧಿಕೃತ ಎಸಗಿದವರನ್ನು ಬಂಧಿಸಲು ಆಗ್ರಹ
ಬಳ್ಳಾರಿ 30 : ಕೇಂದ್ರ ಸರ್ಕಾರದ ಕರಾಳ ಕಾಯ್ದೆಗಳು, ರೈತರ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ಹಾಗೂ ರೈತರ ಹೆಸರಲ್ಲಿ ಕೆಂಪುಕೋಟೆ ಒಳಗೆ ನುಸುಳಿ ದಾಂದಲೆ ನಡೆಸಿದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿ ಉಗ್ರ ಶಿಕ್ಷೆ ನೀಡಲು ಒತ್ತಾಯಿಸಿ ಶನಿವಾರ ಜಿಲ್ಲೆಯ ಕೋಳೂರು ಹಾಗೂ ಮದಿರೆ ಗ್ರಾಮದಲ್ಲಿ ರೈತ-ಕೃಷಿ ಕಾರ್ಮಿಕರ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಜಿಲ್ಲಾ ಕಾರ್ಯದರ್ಶಿ ಹನಮಂತಪ್ಪ ಮಾತನಾಡಿ, ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳುವಳಿ ನಮ್ಮ ದೇಶದ ದುಡಿಯುವ ಜನತೆಯಲ್ಲಿ ಭರವಸೆಯ ಬೆಳಕನ್ನು ಮೂಡಿಸಿದೆ. ಈ ಚಳುವಳಿಯಲ್ಲಿ 153 ಜೀವಗಳು ಪ್ರಾಣಾರ್ಪಣೆ ಮಾಡಿದಂತಹ ಹಿಂದೆಂದೂ ಕೇಳರಿಯದ ಘಟನೆಗೆ ಸಾಕ್ಷಿಯಾದರು. ಇದೆಲ್ಲಾ ನಡೆದದ್ದು ಮೂರು ರೈತ ವಿರೋಧಿ, ಕಾರ್ಪೋರೇಟ್ ಪರ ಕೃಷಿ ಕಾಯ್ದೆಗಳು ಹಾಗೂ ವಿದ್ಯುತ್ಕಾಯ್ದೆ 2020 ಅನ್ನು ಹಿಂತೆಗೆದುಕೊಳ್ಳುವಂತೆ ಬಿಜೆಪಿ ಸರ್ಕಾರವನ್ನು ಒತ್ತಾಯಿಸಲಾಗಿದೆ. ಕೇಂದ್ರದ ಬಿಜೆಪಿ ಸರ್ಕಾರವು ಚಳುವಳಿಯನ್ನು ಹತ್ತಿಕ್ಕಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ.
2021ರ ಜನವರಿ 26ರಂದು ನಡೆಸಿದ ಕೃತ್ಯ ಬಹಳ ಅಪಾಯಕಾರಿ. ನಮ್ಮ ರಾಷ್ಟ್ರೀಯ ಜೀವನದ ಅತ್ಯಂತ ಪ್ರಮುಖವಾದ ದಿನವೇ ಬಿಜೆಪಿ ಸರ್ಕಾರವು ಕೆಲವು ಪ್ರಚೋದಕರನ್ನು ಚಳುವಳಿಯೊಳಗೆ ನುಸುಳುವಂತೆ ಮಾಡಿತು. ಈ ಸಶಸ್ತ್ರ ಫ್ಯಾಸಿಸ್ಟ್ ಶಕ್ತಿಯು ಸಿಂಘು, ಟಿಕ್ರಿ, ಗಾಜಿಪೂರ್, ಮುಂತಾದಗಡಿ ಭಾಗಗಳಲ್ಲಿರುವ ರೈತರ ಮೇಲೆ ದಾಳಿ ನಡೆಸುತ್ತಿದೆ. ಬಿಜೆಪಿ ಸರ್ಕಾರದ ಫ್ಯಾಸಿಸ್ಟ್ ವಿನ್ಯಾಸವನ್ನು ಪ್ರತಿರೋಧಿಸಲು ಮತ್ತು ಚಳುವಳಿಯನ್ನು ವಿಜಯ ಗೊಳಿಸಲು ಮುಂದೆ ಬರಬೇಕೆಂದು ದೇಶದಜನರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರು ಗೋವಿಂದ್, ಪಂಪಾಪತಿ, ಬಸಣ್ಣ, ಮುಂತಾದವರಿದ್ದರು.