ಬಿತ್ತನೆಗೆ ಸಿದ್ಧತೆ ಮಾಡಿಕೊಂಡು ಮಳೆಗಾಗಿ ಕಾದು ಕುಳಿತ ರೈತರು
ಶಶಿಧರ ಕುಲಕರ್ಣಿ
ಮುಂಡಗೋಡ:ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದ ಭೂಮಿಗೆ ತುಸು ಹದ ಸಿಕ್ಕು ಕೆಲವು ರೈತರು ಬಿತ್ತನೆ ಕಾರ್ಯ ಮುಗಿಸಿ ಸಾಕಷ್ಟು ರೈತರು ಭೂಮಿಯನ್ನು ಹದಗೊಳಿಸಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡು ಮಳೆಗಾಗಿ ಕಾದು ಕುಳಿತಿದ್ದಾರೆ.
ತಾಲೂಕಿನಲ್ಲಿ ಭತ್ತ ಬಿತ್ತನೆ ಕ್ಷೇತ್ರ ಒಟ್ಟು 7500 ಹೆಕ್ಟೇರ್ ಪ್ರದೇಶದಷ್ಟು ಗುರಿ ಇದ್ದು ಇಲ್ಲಿಯವರೆಗೆ ಸುಮಾರು 185 ಹೆಕ್ಟೇರ್ ಪ್ರದೇಶದಷ್ಟು ಮಾತ್ರ ಒಣ ಬಿತ್ತನೆ ಕಾರ್ಯ ಮುಗಿದಿದೆ. ತಗ್ಗು ಪ್ರದೇಶ ಮತ್ತು ಕೆರೆ ದಂಡೆಗಳಲ್ಲಿ ಇರುವ ಗದ್ದೆಗಳಲ್ಲಿ ರೈತರು ಭತ್ತ ಬಿತ್ತನೆ ಮಾಡಿದ್ದಾರೆ. ಶೇ.85ರಷ್ಟು ಪ್ರದೇಶದಲ್ಲಿ ಇನ್ನೂ ಭತ್ತ ಬಿತ್ತನೆಯಾಗಬೇಕು. ಇನ್ನು ಗೋವಿನ ಜೋಳ 4200 ಹೆಕ್ಟೇರ್ ಪ್ರದೇಶದಷ್ಟು ಬಿತ್ತನೆ ಗುರಿ ಇದ್ದು 685 ಹೆಕ್ಟೇರ್ ಪ್ರದೇಶದಷ್ಟು ಬಿತ್ತನೆ ಕಾರ್ಯ ಮುಗಿದಿದೆ. ಗೋವಿನ ಜೋಳ ಶೇ.65ರಷ್ಟು ಪ್ರದೇಶದಲ್ಲಿ ಬಿತ್ತನೆ ಬಾಕಿ ಇದೆ. 850 ಹೆಕ್ಟೇರ್ ಪ್ರದೇಶದಷ್ಟು ಕಬ್ಬು ನಾಟಿ ಕಾರ್ಯ ಮುಗಿದಿದೆ. ಹತ್ತಿ ಮತ್ತು ಸೋಯಾಬಿನ್ 15 ಹೆಕ್ಟೇರ್ ಪ್ರದೇಶದಷ್ಟು ಬಿತ್ತನೆ ಗುರಿ ಇದೆ.
ಶಿವಾನಂದ ದೊಡ್ಡಮನಿ, ಬಾಚಣಕಿ ರೈತ:ಕೆಲವು ಕಡೆಗಳಲ್ಲಿ ಆದ ಮಳೆಯಿಂದ ರೈತರು ಬಿತ್ತನೆ ಕಾರ್ಯ ಮುಗಿಸಿದ್ದು ಇನ್ನು ಹಲವು ಕಡೆಗಳಲ್ಲಿ ಮಳೆಯಾಗದೆ ಬಿತ್ತನೆಗೆ ಚೆನ್ನಾಗಿ ಹದ ಸಿಕ್ಕಿಲ್ಲ. ಭೂಮಿಯನ್ನು ಹದಗೊಳಿಸಿ ಮಳೆಗಾಗಿ ಕಾಯುತ್ತಿದ್ದಾರೆ.
ಎಮ್.ಎಸ್.ಕುಲಕರ್ಣಿ, ಸಹಾಯಕ ಕೃಷಿ ನಿರ್ದೇಶಕ:ತಾಲೂಕಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಕಾರ್ಯ ಬಾಕಿ ಉಳಿದಿದ್ದು ಮಳೆಯ ಅವಲೋಕನ ಮಾಡುತ್ತಾ ರೈತರು ಹದಕ್ಕಾಗಿ ಕಾಯುತ್ತಿದ್ದಾರೆ. ರೈತರು ಬೀಜೋಪಾಚಾರ ಮಾಡಿ ಮಳೆಯ ಸ್ಥಿತಿ-ಗತಿ ನೋಡಿ ಬಿತ್ತನೆ ಮಾಡಬೇಕು. ಭತ್ತ ಮತ್ತು ಗೋವಿನ ಜೋಳದ ಬೀಜಗಳ ದಾಸ್ತಾನು ಸಾಕಷ್ಟು ಇದ್ದು ರಿಯಾಯತಿ ದರದಲ್ಲಿ ರೈತರಿಗೆ ವಿತರಣೆ ಮಾಡಲಾಗುತ್ತಿದೆ. ರಸಗೊಬ್ಬರ ಹಂತ-ಹಂತವಾಗಿ ಸರಬರಾಜು ಆಗುತ್ತಿದೆ. 850 ಮೆಟ್ರಿಕ್ ಟನ್ ರಸಗೊಬ್ಬರ, 420 ಕ್ವಿಂಟಾಲ್ ಭತ್ತದ ಬೀಜ, 220 ಕ್ವಿಂಟಾಲ್ ಗೋವಿನ ಜೋಳ ಬೀಜದ ದಾಸ್ತಾನು ಇದೆ. ರೈತರು ಡಿಎಪಿ ಗೊಬ್ಬರಕ್ಕೆ ಮಾತ್ರ ಮುಗಿ ಬೀಳದೆ ಇತರೆ ಕಾಂಪ್ಲೆಕ್ಸ್ ಗೊಬ್ಬರಗಳನ್ನು ಯೂರಿಯಾದೊಂದಿಗೆ ಮಿಶ್ರಣ ಮಾಡಿ ಬಿತ್ತನೆ ಮಾಡಿದರೆ ಉತ್ತಮ.