ಕೊಣನಕೇರಿ ವಿಂಪ್ ಶುಗರ್ಸ್ ಪ್ಯಾಕ್ಟರಿಯಲ್ಲಿ ರೈತರಿಗೆ ಮೋಸ
ಶಿಗ್ಗಾವಿ 29: ರೈತ ಸಂಘದ ಮುಖಂಡರು ಹಾಗೂ ನೂರಾರು ರೈತರು ತಾಲೂಕಿನ ಕೋಣನಕೇರಿ ವಿಂಪ್ ಶುಗರ್ಸ್ ಪ್ಯಾಕ್ಟರಿಯಲ್ಲಿ ರೈತರ ಕಬ್ಬಿನ ದರದಲ್ಲಿ ಆಗುತ್ತಿರುವ ಅನ್ಯಾಯ ಹಾಗೂ ಕಬ್ಬು ಕಟಾವು ಮಾಡುವ ಗ್ಯಾಂಗ್ಮೆನ್ಗಳು ಮನಬಂದಂತೆ ಲಗಾನಿ ಕೇಳುತ್ತಿದ್ದು ಮತ್ತು ಕಮಿಷನ್ ನೆಪದಲ್ಲಿ ರೈತರ ಖಾತೆಗೆ ಕಡಿಮೆ ಹಣ ಸಂದಾಯ ಮಾಡುತ್ತಿದ್ದು ಈ ತಾರತಮ್ಯವನ್ನ ಸರಿಪಡಿಸುವಂತೆ ಒತ್ತಾಯಿಸಿ ಗೇಟ್ ಬಂದ್ ಮಾಡಿ ಬೃಹತ್ ಪ್ರತಿಭಟನೆಯನ್ನ ಹಮ್ಮಿಕೊಂಡಿದ್ದರು.
ರೈತ ಸಂಘದ ಜಿಲ್ಲಾದ್ಯಕ್ಷ ಹನುಮಂತಪ್ಪ ಹುಚ್ಚಣ್ಣವರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಇವರಿಗೆ ಪ್ಯಾಕ್ಟರಿ ನಡೆಸಲು ಜಾಗ, ವಿದ್ಯುತ್, ನೀರನ್ನ ನೀಡಿದವರು ಸ್ಥಳೀಯ ರೈತರು ಆದರೆ ಆ ಸ್ಥಳೀಯ ರೈತನಿಗೆ ಬೆಲೆ ನೀಡದೇ ಬೇರೆ ಜಿಲ್ಲೆಯವರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ಕಬ್ಬಿಗೆ ಹೆಚ್ಚಿನ ದರ ನಿಗದಿ ಮಾಡಲಾಗಿದೆ ಇದು ಎಷ್ಟು ಸರಿ ? ನಮ್ಮ ತಾಲೂಕಿನ ಕಬ್ಬು ಒಣಗುತ್ತಿದ್ದು ನಮಗೆ ಕಬ್ಬಿನ ತೂಕ ಕಡಿಮೆಯಾಗಿ ಒಂದು ಟನ್ ಕಬ್ಬು ಕಡಿಮೆ ತೂಕ ಬರುತ್ತಿದೆ ಇದರಲ್ಲಿಯೂ ಸಹಿತ ರೈತನಿಗೆ ಅನ್ಯಾಯವಾಗುತ್ತಿದೆ ಎಂದರು.
ಜಿಲ್ಲಾ ಉಪಾದ್ಯಕ್ಷ ಹನುಮಂತಪ್ಪ ದೊಡ್ಡಮನಿ ಮಾತನಾಡಿ ರೈತರ ಸಭೆಯಲ್ಲಿ 3073 ರೂ ದರವನ್ನು ನಿಗದಿಪಡಿಸಿ ಅದರಲ್ಲಿ 1 ಟನ್ ಕಟಾವಿನ ಬೆಲೆ 325ರೂ ಹಾಗೂ ಟ್ರಾನ್ಸಪೂರ್ಟ ಚಾರ್ಚ್ ಎಂದು 220ರೂ ಪಡೆಯಲಾಗುತ್ತದೆ ಎಂದು ಮಾಹಿತಿ ನೀಡಲಾಗಿತ್ತು, ಅಲ್ಲದೇ ರೈತರ ಸಭೆ ಕರೆದು ನಿರ್ಧಾರ ಮಾಡಿ ಪ್ರತಿ ಟನ್ಗೆ 2528ರೂ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು, ಆದರೆ ಈಗ ವಿಂಪ್ ಶುಗರ್ಸನವರು ರೈತರ ಖಾತೆಗೆ ಪ್ರತಿ ಟನ್ಗೆ 2415ರೂ ಹಾಕುತ್ತಿದ್ದಾರೆ, ಸರಕಾರದ ದರಕ್ಕಿಂತ 1ಟನ್ ಗೆ 113ರೂ ಗು ಹೆಚ್ಚು ರೈತನಿಗೆ ಅನ್ಯಾಯವಾಗುತ್ತಿದೆ, ಸರಕಾರದ ದರಕ್ಕಿಂತ ಬೇರೆ ಬೇರೆ ಜಿಲ್ಲೆಯಲ್ಲಿ ಹೆಚ್ಚಿನ ದರ ನಿಗದಿಪಡಿಸಿ ಖರೀದಿ ಮಾಡುತ್ತಿದೆ ಆದರೆ ಕೊಣನಕೇರಿಯ ವಿಂಪ್ ಶುಗರ್ಸ್ ಪ್ಯಾಕ್ಟರಿಯಲ್ಲಿ ರೈತರಿಗೆ ಮೋಸವಾಗುತ್ತಿದೆ, ಅಲ್ಲದೇ ಕಬ್ಬು ಕಡಿಯುವ ಗ್ಯಾಂಗ್ನವರು ಲಗಾನಿ ಮನಬಂದಂತೆ ಕೇಳುತ್ತಿದ್ದು ಇದು ರೈತನಿಗೆ ಹೊರೆಯಾಗುತ್ತಿದೆ ಎಂದು ಅಕ್ರೋಷ ವ್ಯಕ್ತಪಡಿಸಿದರು.
ತಹಶೀಲ್ದಾರ ಸಂತೋಷ ಹಿರೇಮಠ ಹಾಗೂ ಪೋಲೀಸ್ ಇಲಾಖೆಯ ಸುರೇಶ ಕುಂಬಾರ ಅವರುಗಳ ಸಮ್ಮುಖದಲ್ಲಿ ರೈತರ ಮನಒಲಿಸುವ ಕಾರ್ಯ ಮಾಡಿದರೂ ರೈತರು ನಮಗೆ ಪ್ಯಾಕ್ಟರಿಯ ಎಂ.ಡಿ ವಿವೇಕ್ ಹೆಬ್ಬಾರ ಅವರು ಸ್ಥಳಕ್ಕೆ ಬರಲೇಬೇಕು ಎಂದು ಪಟ್ಟು ಹಿಡಿದರು, ಪ್ರತಿಭಟನೆಯು ಮದ್ಯಾಹ್ನ 3 ಘಂಟೆಯಾದರೂ ರೈತರ ಮನಒಲಿಕೆ ಕಾರ್ಯ ಈಡೇರಲಿಲ್ಲ.
ಸಂಜೆಯಾಗುತ್ತಿದ್ದಂತೆ ತಹಶೀಲ್ದಾರ ಸಂತೋಷ ಹಿರೇಮಠ ಅವರು ಮನಒಲಿಕೆ ಕಾರ್ಯ ಮಾಡಿ ಬರುವ ಮಂಗಳವಾರದ ಒಳಗೆ ತಹಶೀಲ್ದಾರರು ಸಮ್ಮೂಖದಲ್ಲಿ ಎಂ.ಡಿ ವಿವೇಕ್ ಹೆಬ್ಬಾರ ಅವರ ನೇತೃತ್ವದಲ್ಲಿ ರೈತ ಮುಖಂಡರ ಸಭೆ ಕರೆದು ಬೇರೆ ತಾಲೂಕು ಮತ್ತು ಜಿಲ್ಲೆಗಳ ರೈತರಿಗೆ ನೀಡುತ್ತಿರುವ ದರದಂತೆ ಸ್ಥಳೀಯರ ರೈತರಿಗೆ ಆದ್ಯತೆ ನೀಡಿ ದರ ನಿಗದಿ ಮಾಡುವ ಬರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ತಾಲೂಕಾ ರೈತ ಸಂಘದ ಅದ್ಯಕ್ಷ ಆನಂದ ಕೆಳಗಿನಮನಿ, ಉಪಾದ್ಯಕ್ಷ ಶಂಕರಗೌಡ ಪಾಟೀಲ, ಈಶ್ವರಗೌಡ ಪಾಟೀಲ, ರುದ್ರ್ಪ ಬಳಿಗಾರ, ರಮೇಶ ದೊಡ್ಡೂರ, ಬಸಲಿಂಗಪ್ಪ ನರಗುಂದ, ಶಿವನಗೌಡ ಗಾಜಿಗೌಡ್ರ, ಗೀರೀಶಗೌಡ ಪಾಟೀಲ, ಉಮೇಶ ಚಿಗರಿ, ಅಶೋಕ ಮಡ್ಲಿ, ಚಂದ್ರು ನೆರ್ತಿ, ಗೌಡಪ್ಪಗೌಡ ಗೋಣಿಗೌಡ್ರ, ಉಮೆಶ ಗಾಳಿಗೌಡ್ರ, ಪಕ್ಕೀರಗೌಡ ಗಾಳಿಗೌಡ್ರ, ಕರಿಯಪ್ಪ ಆಳೂರ, ಶಿವಣ್ಣ ಗಬ್ಬೂರ, ಬಸಣ್ಣ ಗಂಗೆನೂರ, ದಯಾನಂದ ಮೆಣಸಿನಕಾಯಿ, ರಮೇಶ ಜೋಳದ, ನಿಂಗಣ್ಣ ಹರಿಜನ ಸೇರಿದಂತೆ ನೊಂದ ರೈತರು, ರೈತ ಮುಖಂಡರು ಇದ್ದರು.