ಮೆಲಾಥಿಯಾನ್ ಔಷಧಿ ನೀಡದೆ ಕೃಷಿ ಅಧಿಕಾರಿಗಳು ಸತಾಯಿಸುತ್ತಿದ್ದಾರೆ: ರೈತರ ಆರೋಪ
ಮುಂಡಗೋಡ:ತಾಲೂಕಿನ ಕೆಲವು ಗ್ರಾಮಗಳಲ್ಲಿ ಪ್ರಸಕ್ತ ಭತ್ತದ ಬೆಳೆಗೆ ಕಂಡು ಬಂದ ತೆನೆ ತಿಗಣೆ ಬಾಧೆಗೆ ಅವಶ್ಯವಿರುವ ಮೆಲಾಥಿಯಾನ್ ಓಷಧಿಯನ್ನು ನೀಡದೆ ಕೃಷಿ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಕೆಲವು ರೈತರು ಆರೋಪಿಸಿದ್ದಾರೆ.
ಈಗಾಗಲೆ ಸಾಕಷ್ಟು ಗದ್ದೆಗಳಲ್ಲಿ ಭತ್ತದ ಬೆಳೆಗೆ ತೆನೆ ತಿಗಣೆ ಬಾಧೆ ಕಂಡು ಬಂದಿದ್ದು ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಬಾಧೆಯ ನಿರ್ವಹಣೆಗಾಗಿ ಅವರು ನಿರ್ದೇಶಿಸಿದ ಮೆಲಾಥಿಯಾನ್ ಓಷಧಿ ಕೇಳಿದರೆ ದಾಸ್ತಾನು ಇರುವುದಿಲ್ಲ 2-3 ದಿವಸ ಬಿಟ್ಟು ಬಂದು ಮೆಲಾಥಿಯಾನ್ ಓಷಧಿಯನ್ನು ತೆಗೆದುಕೊಂಡು ಹೋಗಿ ಎಂದು ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಮಳೆ ಕಡಿಮೆಯಾದ ಸಂದರ್ಭದಲ್ಲಿ ಓಷಧಿ ಸಿಂಪರಣೆ ಮಾಡಿದರೆ ಅನುಕೂಲವಾಗುತ್ತದೆ. ಸರಿಯಾದ ಸಮಯಕ್ಕೆ ಓಷಧಿ ಸಿಂಪರಣೆ ಮಾಡದೆ ಹೋದರೆ ಬಾಧೆಯಿಂದ ಭತ್ತದ ಬೆಳೆ ಹಾಳಾಗುತ್ತದೆ ಎಂದು ಹಳೂರ ಓಣಿಯ ರೈತ ಪರಶುರಾಮ ರಾಣಿಗೇರ ತಮ್ಮ ಅಳಲು ತೋಡಿಕೊಂಡರು.
ಎಮ್.ಎಸ್.ಕುಲಕರ್ಣಿ, ಸಹಾಯಕ ಕೃಷಿ ನಿರ್ದೇಶಕ:ಈಗಾಗಲೆ 150 ಲೀ. ಮೆಲಾಥಿಯಾನ್ ಓಷಧಿ ತರಿಸಿ ಪಟ್ಟಣ ಮತ್ತು ಪಾಳಾ ಭಾಗದ ರೈತರಿಗೆ ಸಹಾಯಧನದಲ್ಲಿ ನೀಡಲಾಗಿದ್ದು ಹೆಚ್ಚುವರಿ ಓಷಧಿಗಾಗಿ ಬೇಡಿಕೆ ಸಲ್ಲಿಸಲಾಗಿದೆ.