ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಮನವಿ
ಬಳ್ಳಾರಿ 11: ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಹಾಗೂ ಹೋಬಳಿ ಮಟ್ಟದಲ್ಲಿ ತಕ್ಷಣವೇ ರೈತರ ಹಿಂಗಾರು ಬೆಳೆ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಮಾಧವರೆಡ್ಡಿ ಕರೂರು ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಇಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವರ್ಷಅತಿವೃಷ್ಟಿಯಿಂದ ರೈತರ ಸಾಕಷ್ಟು ಬೆಳೆಹಾನಿಯಾಗಿದೆ. ಉಳಿದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಮಾರಲು ಹೋದರೆ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ದರ ಹಾಕುತ್ತಿದ್ದಾರೆ. ಕೃಷಿ ಉತ್ಪನ್ನಗಳನ್ನು ಬೆಳೆಯುವುದಕ್ಕೆ ಬಳಸುವ ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕಗಳ ಬೆಲೆಗಳು ಗಗನಕ್ಕೇರಿವೆ. ಇದರಿಂದ ರೈತರ ಕುಟುಂಬದ ನಿರ್ವಹಣಾ ವೆಚ್ಚವು ವರ್ಷದಿಂದ ವರ್ಷಕ್ಕೆ ದುಪ್ಪಟ್ಟು ಹೆಚ್ಚಾಗುತ್ತಿದೆ. ಕುಟುಂಬದ ನಿರ್ವಹಣೆ ಮಾಡುವುದಕ್ಕೆ ಕಷ್ಟ ಸಾಧ್ಯವಾಗಿದೆ. ಹೀಗೆ ರೈತ ಮಾಡಿದ ಸಾಲಗಳು ತೀರಿಸಲಾಗಿದೇ ಸಾಲದ ಸುಳಿಯಲ್ಲಿ ಸಿಲುಕಿ ಸಾಕಷ್ಟು ಜನ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಪಂಜಾಬ್ ರಾಜ್ಯದಲ್ಲಿ ಎಂ.ಎಸ್.ಪಿ. ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿ ಮಾಡಿದರೆ ಮತ್ತು ಮಾರಾಟ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಕಾಯಿದೆಯನ್ನು ಜಾರಿಗೆ ತಂದಿದ್ದಾರೆ. ರಾಜ್ಯದಲ್ಲೂ ಈ ಕಾಐದೆ ಜಾರಿಗೊಳಿಸಬೇಕು. ಕೇರಳ ರಾಜ್ಯದಲ್ಲಿ ತರಕಾರಿ ಬೆಳೆಗಳಿಗೆ ಬೆಲೆ ನಿಗದಿ ಮಾಡಿರುವಂತೆ ರಾಜ್ಯದಲ್ಲಿ ನಿಗದಿ ಮಾಡಬೇಕೆಂದು ಹಾಗೂ ಪಂಜಾಬ್ ಇತರೆ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡುವುದನ್ನು ನಿಲ್ಲಿಸಬೇಕು. ತಕ್ಷಣವೇ ಎಲ್ಲಾ ಬೆಳೆಗಳಿಗೆ ಖರೀದಿ ಕೇಂದ್ರಗಳನ್ನು ಶಾಶ್ವತವಾಗಿ ತೆಗೆಯಬೇಕೆಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖ ಹಕ್ಕೊತ್ತಾಯಗಳಾದ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ ರೈತರಿಗೆ ಮರಣಶಾಸನವಾಗಿರುವ ಕಾಯ್ದೆಗಳನ್ನು ತಕ್ಷಣ ಹಿಂಪಡೆಯಬೇಕು, ಪ್ರತಿ ರೈತರಿಂದ 150 ಕ್ವಿಂಟಾಲ್ ಭತ್ತವನ್ನು ಖರೀದಿ ಮಾಡಬೇಕು.ಭತ್ತಕ್ಕೆ ಬೆಂಬಲ ಬೆಲೆ 5000 ರೂ., ಹತ್ತಿಗೆ 20000 ರೂ., ಮೆಣಸಿನಕಾಯಿಗೆ 30000 ರೂ. ದರ ನಿಗದಿಪಡಿಸಬೇಕು. ನವಣೆಗೆ 3000 ರೂ. ಸಜ್ಜೆಗೆ 3000ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು. ಜೋಳಕ್ಕೆ 5000 ಬೆಂಬಲ ಬೆಲೆ ನಿಗದಿಪಡಿಸಿ ಪ್ರತಿ ರೈತರಿಂದ 100 ಕ್ವಿಂಟಾಲ್ ಜೋಳ ಖರೀದಿ ಮಾಡಬೇಕು. ಇನ್ನಿತರ ಬೇರೆ ಬೇರೆ ಬೆಳೆಗಳಿಗೆ ಬೆಲೆ ನಿಗದಿಪಡಿಸಬೇಕು ಹಾಗೂ ರೈತರ ಖಾತೆಗಳಿಗೆ ತಕ್ಷಣ ವರ್ಗಾಯಿಸಬೇಕು. ಈ ವರ್ಷ ಅತಿವೃಷ್ಟಿಯಿಂದ ರೈತರು ನಷ್ಟ ಹೊಂದಿದ್ದು, ಈ ಸಮಯದಲ್ಲಿ ಬೆಳೆ ಸಾಲ ತೆಗೆದುಕೊಂಡವರಿಗೆ ಬ್ಯಾಂಕ್ ಅಧಿಕಾರಿಗಳು ಸಾಲ ಕಟ್ಟುವಂತೆ ಕಿರುಕುಳ ನೀಡುವುದನ್ನು ತಡೆಯಬೇಕು. ತುಂಗಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಅತೀ ಶೀಘ್ರದಲ್ಲೇ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ 2ನೇ ಬೆಳೆಗೆ ನೀರು ಕೊಡಲು ತೀರ್ಮಾನಿಸಬೇಕು ಎಂದರು.
ಈ ಸಂದರ್ಭದಲ್ಲಿ ರೈತ ಸಂಘ ಮುಖಂಡರಾದ ಹಳ್ಳಪ್ಪ, ತಿಮ್ಮನಗೌಡ, ಬಿ.ಹುಲುಗಪ್ಪ, ಲೇಪಾಕ್ಷಿ ಅಸುಂಡಿ, ವಾ. ಹುಲುಗಯ್ಯ, ಗೋವಿಂದಪ್ಪ, ಮಂಜುನಾಥ ಆಚಾರಿ, ಬಸವರಾಜಸ್ವಾಮಿ, ಜಿ.ಪಂಪಾಪತಿ, ಹಾಗಲೂರಪ್ಪ, ಲಕ್ಷ್ಮಿಕಾಂತರೆಡ್ಡಿ, ಎಂ.ಮಲ್ಲಿಕಾರ್ಜುನಗೌಡ, ಅಹ್ಮದ್ ಹುಸೇನ್ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.