ಆಶ್ರಮ ವಾಸಿಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ
ಬಳ್ಳಾರಿ 28: ಹಿರಿಯ ನಾಗರಿಕರಿಗೆ ಆಶ್ರಯಧಾಮ ಕೃಷ್ಣ ಸನ್ನಿಧಿಯಲ್ಲಿ ಇಂದು ಬಳ್ಳಾರಿ ಹಾಗೂ ಸುತ್ತಮುತ್ತಲಿನ ಗ್ರಾಮದವರಿಗೆ ಆಂಬ್ಯುಲೆನ್ಸ್ ಸೇವೆ ಹಾಗೂ ಹಿರಿಯ ನಾಗರಿಕರಿಗೆ ಅವರು ದೈನಂದಿನ ಕಾರ್ಯಗಳನ್ನು ನಿರ್ವಹಿಸಲು ಅಂದರೆ ಬ್ಯಾಂಕಿನ ವಹಿವಾಟು, ಅಂಚೆ ಕಛೇರಿಯ ವಹಿವಾಟು, ದೇವಾಲಯಗಳಿಗೆ, ಮಾರುಕಟ್ಟೆ ಸೇರಿದಂತೆ ಮುಂತಾದ ಕಡೆಗಳಿಗೆ ಹೋಗಲು ವಾಹನ ಸೌಲಭ್ಯ ಸೇವೆಯನ್ನು ಇಂದು ಬಳ್ಳಾರಿ ಹಿರಿಯ ವೈದ್ಯರಾದ ಡಾ. ಬಿ.ಕೆ.ಸುಂದರ್ ಹಾಗೂ ಡಾ. ಎಸ್.ಕೆ.ಅರುಣ್, ಡಾ. ಬಿ.ಕೆ.ಶ್ರೀಕಾಂತ್ ಅವರು ಚಾಲನೆ ನೀಡಿದರು. ಡಾ. ಸುಂದರ್ ಅವರು ಮಾತನಾಡುತ್ತಾ, ಈ ಕೃಷ್ಣ ಸನ್ನಿಧಿಯಲ್ಲಿ ಹಿರಿಯ ನಾಗರಿಕರಿಗೆ ತಮ್ಮ ಜೀವತಾವಧಿಯ ಆಶ್ರಯವನ್ನು ಹಾಗೂ ಆಶ್ರಮ ವಾಸಿಗಳಿಗೆ ಉಚಿತ ವೈದ್ಯಕೀಯ ಸೌಲಭ್ಯವನ್ನು ಉಚಿತ ಫಿಜಿಯೋಥೆರಪಿ, ಧ್ಯಾನ ಮತ್ತು ಮೆಡಿಟೇಷನ್ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಡಾ. ನಾಗರತ್ನ ದಂಪತಿಗಳು ಹಿರಿಯರ ಸೇವೆಯನ್ನು ತಮ್ಮ ಮಾತಾ ಪಿತೃಗಳಿಗೆ ಸೇವೆ ಮಾಡಿದಂತಾಗುತ್ತದೆ ಎಂದು ಭಾವಿಸಿ 24 ತಾಸುಗಳ ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು. ಡಾ. ಅರುಣ್ ಅವರು ಮಾತನಾಡಿ, ಈ ಸನ್ನಿಧಿಯಲ್ಲಿ ನೌಕರಿಯಲ್ಲಿರುವ ದಂಪತಿಗಳಿಗೆ ತಾವು ಪರಸ್ಥಳಕ್ಕೆ ಹೋಗುವಾಗ ತಮ್ಮ ಮನೆಯಲ್ಲಿರುವ ಹಿರಿಯರನ್ನು ಸೀಮಿತ ಅವಧಿಯವರೆಗೆ ತಾತ್ಕಾಲಿಕವಾಗಿ ಆಶ್ರಯ ನೀಡುತ್ತಿರುವುದು ಬಹಳ ಹೆಮ್ಮೆಯ ವಿಷಯ ಎಂದು, ಇದಕ್ಕೆ ಬೇಕಾದಲ್ಲಿ ನಮ್ಮ ಸೇವೆಯನ್ನೂ ಕೂಡಾ ಬಳಸಿಕೊಳ್ಳಲು ಕೇಳಿಕೊಂಡರು. ಡಾ. ನಾಗರತ್ನ ಮತ್ತು ಸುಯಜ್ಞ ಜೋಷಿ ಅವರು ಅನಿರತ ಸೇವೆಗಳನ್ನು ಹಿರಿಯರಿಗೆ ಮಾಡುತ್ತಿರುವುದು ನಮ್ಮ ವೈದ್ಯಕೀಯ ವೃತ್ತಿಗೆ ದೊಡ್ಡ ಸಾಹಸ ಎಂದು, ಅವರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಬಂದಿರುವುದು ವೈದ್ಯರೆಲ್ಲರಿಗೂ ಸಂತೋಷವಾಗಿದೆ ಎಂದು ತಿಳಿಸಿದರು. ಡಾ. ನಾಗರತ್ನ ಅವರು ಸ್ವಾಗತಿಸಿದರು. ಗೋಪಾಲಕೃಷ್ಣ ವಂದಿಸಿದರು.