ಪ್ರಧಾನಿಯಿಂದ ಕೃಷಿ ಕ್ಷೇತ್ರ ಸುಧಾರಣೆಗಳ ಸಮರ್ಥನೆ
ನವದೆಹಲಿ, ಡಿ 12 : ತಮ್ಮ ಸರ್ಕಾರ ಆರಂಭಿಸಿರುವ ಕೃಷಿ ಕ್ಷೇತ್ರದ ಸುಧಾರಣೆಗಳನ್ನು ಪ್ರಧಾನಿ ನರೇಂದ್ರ ಮೋದಿ ಸಮರ್ಥಿಸಿಕೊಂಡಿದ್ದಾರೆ. ಹೊಸ ಸುಧಾರಣೆಗಳಿಂದ ರೈತರಿಗೆ ವ್ಯಾಪಕ ಮಾರುಕಟ್ಟೆ ಮತ್ತು ಕೃಷಿ ವಲಯದಲ್ಲಿ ಹೆಚ್ಚಿನ ಹೂಡಿಕೆ ತಂತ್ರಜ್ಞಾನದ ಅನುಕೂಲಗಳು ಸಿಗುತ್ತವೆ ಎಂದು ಅವರು ಹೇಳಿದ್ದಾರೆ.ಕೃಷಿ ಕುರಿತ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿರುವ ಪ್ರಧಾನಿ, ಸುಧಾರಣೆಗಳು ಆರ್ಥಿಕತೆಯ ಪ್ರಮುಖ ವಲಯ ಮತ್ತು ಸಂಬಂಧಿತ ಕ್ಷೇತ್ರಗಳಾದ ಆಹಾರ ಸಂಸ್ಕರಣೆ ಮತ್ತು ಶೈತ್ಯಾಗಾರಗಳ ಸ್ಥಾಪನೆಗೆ ಇರುವ ಅಡೆತಡೆಗಳನ್ನು ತೆಗೆದುಹಾಕುತ್ತವೆ. ಸರ್ಕಾರ ವಲಯದಲ್ಲಿನ ಅಂತರವನ್ನು ನಿವಾರಿಸುತ್ತಿದೆ. ಅಲ್ಲದೆ, ರೈತರಿಗೆ ಹೊಸ ಮಾರುಕಟ್ಟೆಗಳು ಮತ್ತು ಅವಕಾಶಗಳನ್ನು ಒದಗಿಸುತ್ತಿದೆ. ಮತ್ತು ಹೂಡಿಕೆಗಳನ್ನುಆಕರ್ಷಿಸುತ್ತಿದೆ ಎಂದು ಹೇಳಿದ್ದಾರೆ.
ಫಿಕ್ಕಿಯ 93 ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ವಿಡಿಯೋ-ಕಾನ್ಫರೆನ್ಸಿಂಗ್ ಮೂಲಕ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ರೈತರಿಗೆ ಹೊಸ ಮಾರುಕಟ್ಟೆಗಳು ಮತ್ತು ಅವಕಾಶಗಳು ಸೃಷ್ಟಿಯಾಗುವಂತಾಗಲು ಅಂತರಗಳನ್ನು ತೊಡೆದುಹಾಕುವುದಕ್ಕೆ ಸರ್ಕಾರ ಕ್ರಮ ತೆಗೆದುಕೊಂಡಿದೆ. ಖಾಸಗಿ ವಲಯವೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನದನ್ನು ಮಾಡಬೇಕಿದೆ. ಇದರಿಂದ ರೈತರ ಉತ್ಪನ್ನಗಳಿಗೆ ಹೆಚ್ಚು ಲಾಭ ದೊರೆಯಲಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಜಾರಿಗೆ ತಂದ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ 17 ನೇ ದಿನಕ್ಕೆ ಕಾಲಿಟ್ಟಿದ್ದು, ರೈಲು ಮತ್ತು ಹೆದ್ದಾರಿಗಳ ತಡೆ ನಡೆಸುವುದಾಗಿ ಸಂಘಟನೆಗಳು ಬೆದರಿಕೆ ಹಾಕಿರುವ ನಡುವೆ ಮೋದಿ ಈ ಹೇಳಿಕೆ ನೀಡಿದ್ದಾರೆ.