ಸಾಹಿತ್ಯ ಸೃಷ್ಟಿಗೆ ವಿಶಾಲ ಓದು, ವಾಚನಕ್ಕೆ ಲಯಗಾರಿಕೆ ಅಗತ್ಯ: ಡಾ.ಬಸು ಬೇವಿನಗಿಡದ
ಲೋಕದರ್ಶನ ವರದಿ
ಧಾರವಾಡ 29 : ಸಾಹಿತ್ಯದ ವಿವಿಧ ಪ್ರಕಾರಗಳ ಸೃಷ್ಟಿಗೆ ವಿಶಾಲ ಓದಿನ ಹದಗಾರಿಕೆ ಅಗತ್ಯ. ಹಾಗೆಯೇ ಕವನ ವಾಚನ ಮಾಡುವಾಗ ಲಯಗಾರಿಕೆಯ ಅರಿವು ಇರಬೇಕು ಎಂದು ಹಿರಿಯ ಸಾಹಿತಿ ಡಾ.ಬಸು ಬೇವಿನಗಿಡದ ಅಭಿಪ್ರಾಯಪಟ್ಟರು. ನಗರದ ಗಣಕರಂಗ ಸಂಸ್ಥೆಯು ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಪ್ರಯುಕ್ತಢ “ಸಂವಿಧಾನದ ಬೆಳಕಿನಲ್ಲಿ ಭಾರತ” ಕವನ ಸ್ಪರ್ಧೆ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತದ “ಸೈಬರ್ ಯುಗದೊಳ್ ಕನ್ನಡ ಸವಾಲುಗಳು” ಲೇಖನ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳು ಮತ್ತು ವಿಜೇತರ ಗೌರವ ಸಮರಾ್ಣ ಸಮಾರಂಭದಲ್ಲಿ ತೀಪುಗಾರರಾಗಿ ಮಾತನಾಡಿದರು. ಪ್ರತಿಭಾವಂತ ಮನಸ್ಸಿನಿಂದ ಹೊರಹೊಮ್ಮುವ ಸಾಹಿತ್ಯ ಕೇವಲ ಅಕ್ಷರಗಳ ಗುಚ್ಛವಾಗಿ ಉಳಿಯಬಾರದು.
ನಿರ್ಜೀವ ಅಕ್ಷರಗಳಿಗೆ ಜೀವ ತುಂಬಲು ನವರಸಗಳ ಅಭಿವ್ಯಕ್ತಿ ಹಾಗೂ ಭಾವಪೂರ್ಣ ವಾಚನ ಅಗತ್ಯ. ಸಾಹಿತ್ಯವನ್ನು ಭಾವಪೂರ್ಣವಾಗಿ ಪ್ರಸ್ತುತಪಡಿಸಿದಾಗ ಮಾತ್ರ ಅದು ಜೀವಕಳೆ ಪಡೆದು ಸರ್ವಜನರ ಮನಸ್ಸನ್ನು ತಲುಪಲು ಸಾಧ್ಯ ಎಂದು ಹೇಳಿದರು.ಸ್ಪರ್ಧೆಗಳ ಫಲಿತಾಂಶ ಪ್ರಕಟಿಸುವ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಕಲಾವಿದ ಡಾ. ಪ್ರಕಾಶ ಮಲ್ಲಿಗವಾಡ, ಸೃಜನಶೀಲ ಮನಸ್ಸಿನಿಂದ ಸೃಷ್ಟಿಯಾಗುವ ಸಾಹಿತ್ಯವು ಇತರ ಪ್ರದರ್ಶನ ಕಲೆಗಳ ಅಭಿವ್ಯಕ್ತಿಗೂ ಪೂರಕವಾಗಿರಬೇಕು. ಸಾಹಿತ್ಯವು ಸಮಾಜದ ಮುಂದೆ ವಿವಿಧ ಕಲಾ ಪ್ರಕಾರಗಳ ಮೂಲಕ ಅಭಿವ್ಯಕ್ತಿಗೊಂಡಾಗ ಅದರ ಸಾರ್ಥಕತೆ ಹೆಚ್ಚುತ್ತದೆ.
ಈ ನಿಟ್ಟಿನಲ್ಲಿ ಗಣಕರಂಗದ ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರತಿಭಾವಂತರು ಗಮನಹರಿಸಬೇಕು ಎಂದರು.ಗಣಕರಂಗ ಲೇಖನ ಸ್ಪರ್ಧೆಯ ಸಮಿತಿ ಅಧ್ಯಕ್ಷ ಸಿದ್ದರಾಮ ಹಿಪ್ಪರಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ‘ಸಂವಿಧಾನದ ಬೆಳಕಿನಲ್ಲಿ ಭಾರತ’ ಕವನ ಸ್ಪರ್ಧೆಯಲ್ಲಿ ಭಾಗವಹಿಸಿದ ಕವಿಗಳು ತಮ್ಮ ಕವನಗಳನ್ನು ವಾಚಿಸಿದರು. ಬಳಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಹಾಗೂ ವಿಜೇತರಿಗೆ ಪುಸ್ತಕ ಮತ್ತು ಪ್ರಮಾಣಪತ್ರ ನೀಡಿ, ಶಾಲು ಹಾಗೂ ಹಾರ ಹಾಕಿ ಗೌರವಿಸಲಾಯಿತು. ವೇದಿಕೆಯಲ್ಲಿದ್ದ ಹಿರಿಯ ಸಾಹಿತಿಗಳಾದ ಡಾ. ಬಸು ಬೇವಿನಗಿಡದ, ರಾಜೇಶ ಹೊಂಗಲ್, ಹಿರಿಯ ಕಲಾವಿದ ಡಾ. ಪ್ರಕಾಶ ಮಲ್ಲಿಗವಾಡ ಹಾಗೂ ನಾಟ್ಯವಿದುಷಿ ಸೀತಾ ಚಪ್ಪರ ಅವರನ್ನು ಸನ್ಮಾನಿಸಲಾಯಿತು. ಗಾಯಕ ಸಾಹಿತಿ ರವಿ ಚಲವಾದಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.