ಧಾರವಾಡ - ಹುಬ್ಬಳ್ಳಿ

ರಾಣಿ ಚೆನ್ನಮ್ಮಗೆ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಗೌರವ ನೀಡಲು ಆಗ್ರಹ

ರಾಣಿ ಚೆನ್ನಮ್ಮಗೆ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಗೌರವ ನೀಡಲು ಆಗ್ರಹ

ಲೋಕದರ್ಶನ ವರದಿ 


             ಚನ್ನಮ್ಮನ ಕಿತ್ತೂರು 29 : ರಾಣಿ ಚನ್ನಮ್ಮ ಅವರನ್ನು ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಅಧಿಕೃತವಾಗಿ ಘೋಷಿಸಬೇಕು ಹಾಗೂ ಕಿತ್ತೂರು ಸಂಸ್ಥಾನದ ಸ್ಮಾರಕಗಳನ್ನು ರಾಷ್ಟ್ರೀಯ ಸ್ಮಾರಕಗಳನ್ನಾಗಿ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಗ್ರಹಿಸಿ ಬರುತ್ತಿರುವ ಕೂಗಿಗೆ ರಾಜ್ಯ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಒತ್ತಾಯಿಸಿದರು. 

                ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ನಮ್ಮ ಪಕ್ಷದ ಸದಸ್ಯರು ಧ್ವನಿ ಎತ್ತಲಿದ್ದಾರೆ. ಪಕ್ಷಾತೀತವಾಗಿ ಎಲ್ಲ ಶಾಸಕರು ಚನ್ನಮ್ಮನವರಿಗೆ ಸೂಕ್ತ ಗೌರವ ಕಲ್ಪಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಮಾತನಾಡಬೇಕು ಎಂದರು. 

              ರಾಣಿ ಚನ್ನಮ್ಮನವರಿಗೆ ಸೂಕ್ತ ಗೌರವ ದೊರಕಿಸುವುದು ಎಲ್ಲರ ಕರ್ತವ್ಯವಾಗಿದೆ. ಈ ಹಿಂದೆ ಬಿಜೆಪಿ  ಸರ್ಕಾರದ ಅವಧಿಯಲ್ಲಿ ರಾಣಿ ಚನ್ನಮ್ಮನವರ ಪ್ರತಿರೂಪ ಅರಮನೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದರೂ ಸಹ ಸರಕಾರ ವಿಳಂಬ ಮಾಡುತ್ತಿದೆ.  ರಾಜ್ಯ ಸರ್ಕಾರ ಈ ವಿಷಯ ಗಂಭಿರವಾಗಿ ಪರಿಗಣಿಸಿ ಕೋಟೆ ನಿರ್ಮಾಣ ಕಾರ್ಯಕ್ಕೂ ಮುಂದಾಗಬೇಕು ಎಂದು ಆಗ್ರಹಿಸಿದರು.                  ಈ ಎಲ್ಲ ವಿಷಯಗಳ ಕುರಿತು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪಕ್ಷದಿಂದ ಡಿಸೆಂಬರ್ 3ರಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

              ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಹಾಗೂ ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಡಿಸೆಂಬರ್ 3ರಂದು ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರ​‍್ಪ, ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಹೋರಾಟ ನಡೆಯಲಿದೆ.

             ರಾಜ್ಯ ಸರ್ಕಾರದ ಬೆಲೆ ಏರಿಕೆ ಸೇರಿದಂತೆ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ನಡೆಯುವ ಹೋರಾಟದಲ್ಲಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು  ಮನವಿ ಮಾಡಿದರು.

               ಬಿಜೆಪಿ ಮಂಡಳ ಅಧ್ಯಕ್ಷ ಶ್ರೀಕರ್ ಕುಲಕರ್ಣಿ, ಬಿಜೆಪಿ ಮುಖಂಡರಾದ ರಾಜೇಂದ್ರ ಇನಾಮದಾರ, ರವಿರಾಜ ಇನಾಮದಾರ, ಬಸನಗೌಡ ಸಿದ್ರಾಮನಿ,  ಬಸವರಾಜ ಮಾತನವರ, ರಾಜೇಶ ಹೊಸಟ್ಟಿ, ಕಿರಣ ಪಾಟೀಲ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ