ಅಧ್ಯಾತ್ಮ

"ಮನೆ ಮನಗಳನ್ನು ಬೆಳಗುವ ಶ್ರಾವಣದ ಸಂಭ್ರಮ"

"ಮನೆ ಮನಗಳನ್ನು ಬೆಳಗುವ ಶ್ರಾವಣದ ಸಂಭ್ರಮ"

- ಪ್ರೊ. ಸುಧಾ ಹುಚ್ಚಣ್ಣವರ, ಉಪನ್ಯಾಸಕರು, ಗದಗ 

ಹಿಂದೂ ಸಂಪ್ರದಾಯದಂತೆ ಭಾರತೀಯ ಜನಜೀವನದ ಅವಿಭಾಜ್ಯ ಅಂಗವೇ  ಹಬ್ಬಗಳು,ಉತ್ಸವಗಳು ಆಚರಣೆಗಳು.ಜಗತ್ತಿನ ಬೇರೆ ಯಾವ ದೇಶದಲ್ಲಿಯೂ ಸಹ ಭಾರತೀಯ ಜನ ಜೀವನದಲ್ಲಿರುವ ಸಾಂಪ್ರದಾಯಿಕ ವೈಶಿಷ್ಟ್ಯತೆಗಳನ್ನು ಕಾಣಲಾಗದು.ಧಾಮರ್ಿಕ ಪ್ರಜ್ಞೆ ಯಷ್ಟೇ ಅಲ್ಲ ಸಾಮಾಜಿಕವಾಗಿ  ಪೌರಾಣಿಕವಾಗಿ ಆಧ್ಯಾತ್ಮಿಕ, ಸಾಂಸ್ಕೃತಿಕ ಹಿನ್ನೆಲೆ ಈ ಹಬ್ಬಗಳಿಗಿದೆ.

ಬೇರೆ ಬೇರೆ ಮಾಸಗಳಲ್ಲಿ ಬರುವ ಪ್ರಮುಖ ಹಬ್ಬಗಳನ್ನು ಸತ್ ಸಂಪ್ರದಾಯದಂತೆ ಆಚರಿಸಿಕೊಂಡು ಬರುವ ರೀತಿ ರಿವಾಜುಗಳನ್ನು ನಮ್ಮ ಹಿರಿಯರು ರೂಡಿಸಿಕೊಂಡು ಬಂದಿದ್ದಾರೆ.ಅದರಲ್ಲೂ ವಿಶೇಷವಾಗಿ ಶ್ರಾವಣ ಮಾಸ ಎನ್ನುವುದು ಸಕಲ ದೇವ ದೇವತೆಗಳನ್ನು ಆರಾಧಿಸುವ ಕಾಲ. ಈ ಮಾಸದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಆಚರಿಸುವ ವಿಧಿ ವಿಧಾನಗಳು ಸಾಂಪ್ರದಾಯಿಕ ಆಚರಣೆಗಳು ಎಲ್ಲರ ಮನೆ ಮನಗಳನ್ನು ಬೆಳಗುವ ಹಾಗೂ ಸಂಭ್ರಮಿಸುವ ಕಾಲವೇ ಈ ಶ್ರಾವಣ ಮಾಸ .ಸೌಹಾರ್ದತೆ ಧಾಮರ್ಿಕತೆ ಏಕತೆ ಯನ್ನುಂಟು ಮಾಡುವುದರ ಜೊತೆಗೆ ವ್ಯಕ್ತಿಯ ದೈಹಿಕ ಮಾನಸಿಕ ಆರೋಗ್ಯ, ಇಂದ್ರಿಯ ನಿಗ್ರಹ ಶಾಂತಿ ಸಮಾಧಾನ ಇವೆಲ್ಲವುಗಳ ಮೂಲಕ ವೈಜ್ಞಾನಿಕ ಹಿನ್ನೆಲೆಯನ್ನು  ಶ್ರಾವಣ ಮಾಸದ ಸಾಲು ಸಾಲು ಹಬ್ಬಗಳು  ಒಳಗೊಂಡಿವೆ. 

              ನಾಗರ ಅಮಾವಾಸ್ಯೆಯಿಂದ ಬೆನಕನ ಅಮವಾಸ್ಯೆಯ ವರೆಗೆ ಒಂದು ತಿಂಗಳ ಕಾಲ ಹಲವಾರು ಸಾಂಪ್ರದಾಯಿಕ ವಿಧಿವಿಧಾನಗಳ ಮೂಲಕ ಶ್ರಾವಣ ಮಾಸ ನಿಜಕ್ಕೂ ಸಂಭ್ರಮಿಸುವ  ಭರವಸೆಗಳ ಬೆಳಕಾಗಿದೆ. ಭೂತಾಯಿಯು ಹಸಿರುಟ್ಟ ಸೀರೆಯಂತಿರುವ ಪ್ರಕೃತಿ ಸೌಂದರ್ಯದೊಂದಿಗೆ ಭಕ್ತಿ ಭಾವಗಳಿಂದ ನೆರವೇರುವ "ನಾಗರ ಪಂಚಮಿ" ಹಬ್ಬ ಹೆಂಗಳೆಯರ ಪಾಲಿಗೆ ತವರೂರಿನ ಪ್ರೀತಿ ವಾತ್ಸಲ್ಯ ಸಂಭ್ರಮ ಸಡಗರ ಎಲ್ಲವನ್ನೂ ನೆನಪಿಸುವ ಹಬ್ಬ.

ಶ್ರಾವಣ ಸೋಮವಾರ, ಮಂಗಳಗೌರಿ, ಶುಕ್ರವಾರ ಲಕ್ಷ್ಮಿ, ಶ್ರಾವಣ ಮಾಸದ ಎರಡನೇ ಶುಕ್ರವಾರ ಬರುವ "ವರಮಹಾಲಕ್ಷ್ಮಿ ಪೂಜೆ"ಹಾಗೂ ಶ್ರಾವಣ ಮಾಸದ ಹುಣ್ಣಿಮೆಯಾದ "ನೂಲ ಹುಣ್ಣಿಮೆ" ಅತಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ.ನೂಲನ್ನು ಪೂಜಿಸುವ ವೈದಿಕ ಪರಂಪರೆಯಲ್ಲಿ ಜನಿವಾರ ಧರಿಸುವ ದಿನವೆಂದು ಆಚರಿಸಲಾಗುತ್ತಿದೆ.ಯಾವುದೇ ಸಾಂಪ್ರದಾಯಿಕ ಯಜ್ಞೆ ರಥೋತ್ಸವ ಮದುವೆ ಮುಂತಾದ ಸಂದರ್ಭಗಳಲ್ಲಿ ಧಾಮರ್ಿಕ ವಿಧಿಯ ಅಂಗವಾಗಿ ಕಂಕಣ (ರಕ್ಷೆಯ ದಾರ)ವನ್ನು ಕಟ್ಟುವ ಸಂಪ್ರದಾಯವಿದೆ.

ಈ ಹಿಂದೆ ಯುದ್ಧಕ್ಕೆ ಹೋಗುವ ವೀರರಿಗೆ ಈ ರಕ್ಷೆಯ ದಾರವನ್ನು ಕಟ್ಟಿ ಕಳುಹಿಸುವ ಸಂಪ್ರದಾಯವಿತ್ತು.ಈ ಸಂಪ್ರದಾಯವೇ ಇಂದು ಸಾಮಾಜಿಕ ಸ್ವರೂಪವನ್ನು ಪಡೆದುಕೊಂಡು ರಕ್ಷಾ ಬಂಧನವಾಗಿ ಮಾರ್ಪಟ್ಟಿದೆ.ಹಿಂದೂ ಸಂಪ್ರದಾಯದಂತೆ ಪರಸ್ಪರ ರಾಖಿಯನ್ನು ಕಟ್ಟಿಕೊಳ್ಳುವ ಮೂಲಕ ಬಾಂಧವ್ಯದ ಸವಿನೆನಪನ್ನು ಉಂಟುಮಾಡುತ್ತದೆ.

ಎಲ್ಲರೂ ಪರಸ್ಪರ ಸ್ನೇಹ ಬಾಂಧವ್ಯ ವಾತ್ಸಲ್ಯದಿಂದ ಒಬ್ಬರಿಗೊಬ್ಬರು ರಕ್ಷಣೆ ಪಡೆಯುವುದು ಪರಮ ಕರ್ತವ್ಯ ಎಂಬ ಸಾಮಾಜಿಕ ಸಂದೇಶವನ್ನು ಈ ರಕ್ಷಾ ಬಂಧನದ ಆಚರಣೆಯಲ್ಲಿದೆ.ಹಾಗೆ ವಿಶೇಷವಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಶ್ರಾವಣ ಮಾಸದಲ್ಲಿ ಆಚರಿಸಲ್ಪಡುವ ವಿಶಿಷ್ಟವಾದ ಹಾಗೂ ಯಾವುದೇ ಜಾತಿ ಮತ ಲಿಂಗಗಳ ಭೇದವಿಲ್ಲದೆ ಎಲ್ಲರ ಮನೆ ಮನಗಳನ್ನು ಆವರಿಸಿಕೊಳ್ಳುವ ಪೌರಾಣಿಕ ಹಿನ್ನೆಲೆಯುಳ್ಳ ಸಡಗರದ ಆಚರಣೆ. 

ಈ ವಿಶೇಷವಾದ ಮಾಸದಲ್ಲಿ ಮನೆಯಲ್ಲಿ ನಿತ್ಯ ವಿಶೇಷವಾಗಿ  ಜರುಗುವ ದೇವರ ಆರಾಧನೆ 'ಗಂಟೆ ಜಾಗಟೆಗಳ ಸದ್ದು,  ಮನೆ ಮನಗಳನ್ನು ಬೆಳಗುವ ನಂದಾದೀಪ ,ಮನೆಯ ಮುಂದಿನ ರಂಗೋಲಿಯ ಚಿತ್ತಾರ, ಧಾಮರ್ಿಕ ಭಾವನೆಯೊಂದಿಗೆ ನೈವೇದ್ಯಕ್ಕೆಂದು ಮಾಡುವ ಸಿಹಿ ಭಕ್ಷ್ಯ ಭೋಜನ, ಪಂಚಮಿಯ ತರತರಹದ  ಉಠಡಿಗಳು, ಹಾಗೂ ಜೀವನದ ಜೋಕಾಲಿಯಲ್ಲಿ ಸುಖ ದುಃಖ ನೋವು ನಲಿವು ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂಬ ದಿವ್ಯ ಸಂದೇಶವನ್ನು ಸಾರುವ "ಜೋಕಾಲಿಯ ಸಡಗರ" ವಿಶೇಷವಾಗಿ ಎಲ್ಲ ಹೆಂಗಳೆಯರು ಸೇರಿ ಆಚರಿಸುವ ಧಾಮರ್ಿಕ ಸಾಂಪ್ರದಾಯಿಕ ಆಚರಣೆಗಳು ಈ ಎಲ್ಲ ಶ್ರಾವಣದ ಸಂಭ್ರಮ ಎಲ್ಲರಲ್ಲಿ ಅಡಗಿರುವ ಭಕ್ತಿಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಸುಸಮಯವಿದು.

ಈ ಎಲ್ಲ ಸಂಭ್ರಮಗಳನ್ನು ನೆನಪಿಸಿಕೊಳ್ಳುವ ಮುನ್ನ ಒಂದಿಷ್ಟು ಬದಲಾವಣೆಯನ್ನು ಜಾಗೃತಗೊಳಿಸಿ ಕೊಳ್ಳೋಣ ಇಡೀ ವಿಶ್ವವೇ ಇಂದು ಮಹಾಮಾರಿ ಕರೋನಾದ ದುಷ್ಟ ಕಪಿಮುಷ್ಟಿಗೆ ಒಳಗಾಗಿರುವುದರಿಂದ ಇಂದು ಪ್ರತಿಯೊಬ್ಬರ ಆದ್ಯ ಕರ್ತವ್ಯ ನಮ್ಮ ನಮ್ಮ ವೈಯಕ್ತಿಕ ರಕ್ಷಣೆ ಕಾಳಜಿಯೊಂದಿಗೆ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.

ಸಾಮಾಜಿಕ ಅಂತರ ಅನಿವಾರ್ಯವಾಗಿದ್ದು ನಮ್ಮ ನಮ್ಮ ಮನೆಗಳಲ್ಲಿ ಆಚರಣೆ ವಿಧಿವಿಧಾನಗಳನ್ನು ಭಕ್ತಿ ಭಾವಗಳೊಂದಿಗೆ ವೈಜ್ಞಾನಿಕವಾಗಿ ಪಾಲನೆ ಮಾಡೋಣ.ಎಂತಹದೇ ಸಂದಿಗ್ಧ ಪರಿಸ್ಥಿತಿಗಳನ್ನು ಎದುರಿಸುವ  ಮನೋಧೈರ್ಯ ಆ ಭಗವಂತ ಎಲ್ಲರಿಗೂ ಕರುಣಿಸಲಿ. ಈ ಶ್ರಾವಣದ ಸಂಭ್ರಮ ನಮ್ಮ ಇತಿಮಿತಿಯೊಳಗೆ ನಮ್ಮ ನಮ್ಮ ಮನೆ ಮನಗಳನ್ನು ಬೆಳಗುವಂತಾಗಲಿ.


ಸುದ್ದಿ ಓದಿ