ಬಳ್ಳಾರಿ

ವೈದ್ಯರನ್ನು ಪ್ರತಿಯೊಬ್ಬರು ಗೌರವಿಸಿ: ಪತ್ರಕರ್ತ ಜಂಬುನಾಥ್

ವೈದ್ಯರನ್ನು ಪ್ರತಿಯೊಬ್ಬರು ಗೌರವಿಸಿ: ಪತ್ರಕರ್ತ ಜಂಬುನಾಥ್


ಬಳ್ಳಾರಿ 08: ಇಡೀ ಜಗತ್ತಿನಲ್ಲೇ ಕೊರೊನಾ ಎನ್ನುವ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿರುವ ಜನರನ್ನು ತಮ್ಮ ಪ್ರಾಣವನ್ನೇ ಬದಿಗಿಟ್ಟು ಗುಣಪಡಿಸಲು ವೈದ್ಯರು ಹಾಗೂ ಸಿಬ್ಬಂದಿಗಳು ಅತ್ಯಂತ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಶ್ರಮಿಸುತ್ತಿದ್ದು, ಪ್ರತಿಯೊಬ್ಬರೂ ಅವರನ್ನು ಗೌರವಿಸಿ ಸ್ಮರಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನೂತನ ಕಾರ್ಯಕಾರಣಿ ಸದಸ್ಯ, ಹಿರಿಯ ಪತ್ರಕರ್ತ ಜಂಬುನಾಥ್ ಎಂ.ಅವರು ಹೇಳಿದರು.  


ನಗರದ ಪ್ರತಿಷ್ಠಿತ  ಅನುಷ್ಕ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ನಿಮಿತ್ತ ಹೆಸರಾಂತ ವೈದ್ಯರಾದ ಡಾ. ಶ್ರೀನಿವಾಸ್ ಎನ್‌. ಹಾಗೂ ಡಾ. ಕೀರ್ತಿ ಶ್ರೀನಿವಾಸ್ ಅವರಿಗೆ ಶುಕ್ರವಾರ ಸನ್ಮಾನಿಸಿ, ಗೌರವಿಸಿ ಮಾತನಾಡಿದರು. ರೈತರು ಹಾಗೂ ಯೋಧರರಂತೆ ವೈದ್ಯರ ಪಾತ್ರವೂ ಕೂಡಾ ಈ ಜಗತ್ತಿನಲ್ಲಿ ಅತ್ಯಮೂಲ್ಯವಾಗಿದೆ. ಇವರಿಲ್ಲದ ಸಮಾಜವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯವಾಗಿದೆ. ಮಹಾಮಾರಿ ಕೊರೊನಾ ಇಡೀ ವಿಶ್ವವನ್ನೇ ಕಾಡುತ್ತಿದೆ, ಇಂತಹ ಸಂದರ್ಭದಲ್ಲಿ ವೈದ್ಯರು ರೋಗಿಗಳನ್ನು ಜವರಾಯನ ಮೃತ್ಯು ಬಾಯಿಗೆ ಸಿಲುಕದಂತೆ ಕಾಪಾಡುತ್ತಿದ್ದಾರೆ, ಇದರಲ್ಲಿ ಸಿಬ್ಬಂದಿಗಳ ಶ್ರಮವೂ ಅಮೂಲ್ಯವಾಗಿದೆ.  


ಸ್ವತಃ ನನಗೆ ಈ ಮಹಾಮಾರಿ ಕೊರೋನಾ ಸೊಂಕು ಆವರಿಸಿದಾಗ ಪಟ್ಟ ಕಷ್ಟ ದೇವರೇ ಬಲ್ಲ, ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಬೆಡ್‌ಗಾಗಿ ನಮ್ಮ ಕುಟುಂಬದ ಸದಸ್ಯರು ಅಲೆದಾಡಿದರೂ ಒಂದೂ ಬೆಡ್ ಸಿಕ್ಕಿರಲಿಲ್ಲ, ದೇವರ ರೂಪಿಯಾಗಿ ಈ ನಮ್ಮ ಅನುಷ್ಕ ಆಸ್ಪತ್ರೆಯಲ್ಲಿ ಡಾ. ಶ್ರೀನಿವಾಸ್ ಎನ್‌.ಅವರು ಬೆಡ್ ವ್ಯವಸ್ಥೆ ಮಾಡಿ, ಚಿಕಿತ್ಸೆ ಕಲ್ಪಿಸಿ ನನ್ನ ಪ್ರಾಣವನ್ನು ರಕ್ಷಿಸಿದರು. ಇವರನ್ನು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳನ್ನು ಕೊನೆ ಉಸಿರು ಇರುವವರೆಗೂ ಮರೆಯೋಲ್ಲ, ಚಿಕಿತ್ಸೆ ಕೈ ಮೀರಿ ಹೋದರೂ ಮತ್ತೆ ಪ್ರಯತ್ನಿಸಿ, ಎಂದು ಸಿಬ್ಬಂದಿಗಳಿಗೆ ಆಕ್ಸಿಜನ್ ಅಳವಡಿಸಿ ಎಂದು ಕಾಲಕಾಲಕ್ಕೆ ಸೂಚನೆ ನೀಡುವ ಮೂಲಕ ನನ್ನ ಪ್ರಾಣವನ್ನು ರಕ್ಷಿಸಿದ ನಮ್ಮ ಕುಟುಂಬದ ಪಾಲಿನ ದೇವರು ಇವರು ಎಂದು ಬಾವುಕರಾದರು. ಯಾವುದೇ ಖಾಯಿಲೆ ಇರಲಿ ತಮ್ಮ ಪ್ರಾಣವನ್ನೇ ಬದಿಗಿಟ್ಟು ರೋಗಿಗಳ ಜೀವ ಉಳಿಸುತ್ತಿರುವ ವೈದ್ಯರನ್ನು ಪ್ರತಿಯೋಬ್ಬರೂ ಸ್ಮರಿಸಿ ಗೌರವಿಸಬೇಕು ಎಂದರು.  

ವೈದ್ಯರಾದ ಡಾ. ಶ್ರೀನಿವಾಸ್ ಎನ್‌., ಹಾಗೂ ಡಾ. ಕೀರ್ತಿ ಶ್ರೀನಿವಾಸ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳ್, ಪತ್ರಕರ್ತ ವೆಂಕಟೇಶ ದೇಸಾಯಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ