ಪ್ರತಿಯೊಬ್ಬರೂ ಕಾನೂನು ಪಾಲಿಸಬೇಕು: ಕೇಶವ ಕೆ.
ಮುಂಡಗೋಡ:ಸಾಧನೆ ಎಂದರೆ ಕೇವಲ ಭೌತಿಕ ಸಂಪತ್ತು ಅಲ್ಲ ಪ್ರತಿಯೊಬ್ಬರೂ ಕಾನೂನು ಪಾಲಿಸಬೇಕು ಸಂವಿಧಾನವನ್ನು ಗೌರವಿಸಬೇಕು ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಇಲ್ಲಿನ ಜೆಎಮ್ಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಕೇಶವ ಕೆ. ಹೇಳಿದರು.
ಪಟ್ಟಣದ ಎಲ್.ವಿ.ಕೆ. ಸಭಾಭವನದಲ್ಲಿ ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿ ಇವರ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಜರುಗಿದ ಲಿಂಗ ಸಮಾನತೆ, ಮಾನವ ಹಕ್ಕುಗಳು, ಬಾಲ್ಯ ವಿವಾಹ ತಡೆ, ಪೊಕ್ಸೋ ವಿಷಯಗಳ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಸಾಬೆಲ್ಲಾ ಝೇವಿಯರ್ ಉಪನ್ಯಾಸ ನೀಡಿ ಪೋಕ್ಸೋ ಕಾಯಿದೆ ಮಹಿಳೆಯರ ಪ್ರತಿ ಹಂತದಲ್ಲಿ ರಕ್ಷಣೆಗೆ ಅವಶ್ಯವಾಗಿದೆ. ಹೆಣ್ಣು ಮಕ್ಕಳು ಸಮಾಜದಲ್ಲಿ ತಮ್ಮದೇ ಆದ ಹಕ್ಕುಗಳನ್ನು ಹೊಂದಿದ್ದು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನವೇ ಇದಕ್ಕೆ ಕಾರಣವಾಗಿದೆ. ಭಾರತ ದೇಶಕ್ಕೆ ಭಾರತದ ಸಂವಿಧಾನ ಧರ್ಮ ಗ್ರಂಥವಾಗಿದೆ. ಸಂವಿಧಾನದ ಹಕ್ಕು ಇದ್ದರು ಸಹ ಜಾತಿ ನಿಂದನೆ, ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ನಿರಂತರ ನಡೆಯುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಸಿಡಿಪಿಒ ದೀಪಾ ಬಂಗೇರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಗುಡ್ಡಪ್ಪ ಕಾತೂರ ಮತ್ತು ಆರ್.ಎಂ.ಮಳಗಿಕರ ಮಾತನಾಡಿದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಾನಪದ ಕಲಾವಿದ ಸಹದೇವಪ್ಪ ನಡಿಗೇರ, ಬೀಬಿಅಮೀನಾ ಅಂಬುರ ಮತ್ತು ಎಸ್.ಡಿ.ಮುಡೆಣ್ಣವರ ಇವರನ್ನು ಸನ್ಮಾನಿಸಲಾಯಿತು. ಈ ವೇಳೆ ನಾಗರಾಜ ನಾಯ್ಕ, ಎಸ್.ಬಿ.ಹೂಗಾರ, ಸಂಗಪ್ಪ ಕೋಳೂರು, ಸಾಯಿರಾಬಾನು, ರೋಟರಿ ಶಾಲೆ, ಆದಿಜಾಂಭವ ಪ್ರೌಢಶಾಲೆ, ಮೌಲಾನಾ ಆಜಾದ್ ಶಾಲೆ, ಲೋಟಸ್ ಬಾಲಕಿಯರ ಪ್ರೌಢಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜ್, ದಸ್ತಗೀರಿಯಾ ಉರ್ದು ಪ್ರೌಢಶಾಲೆಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕಗಳನ್ನು ಉಚಿತವಾಗಿ ಸಾಧನಾ ಸಂಸ್ಥೆ ವತಿಯಿಂದ ವಿತರಿಸಲಾಯಿತು. ರೋಟರಿ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಎಸ್.ಡಿ.ಮುಡೆಣ್ಣವರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸರ್ಕಾರಿ ಪದವಿಪೂರ್ವ ಕಾಲೇಜ್ನ ಸಹಶಿಕ್ಷಕ ರಮೇಶ ಪವಾರ ನಿರೂಪಿಸಿದರು. ಡಾ.ಇಸಾಬೆಲ್ಲಾ ಝೇವಿಯರ್ ವಂದಿಸಿದರು.