ಸರ್ವಜನ ಸ್ನೇಹಿ ವೇ. ಮೂ. ಲಷ್ಕರಿ ಕೇಶವ ಭಟ್ಟರು
ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬೆಳಗಾವಿಯ ಹಿರಿಯ ಸಾಹಿತಿ ಪತ್ರಕರ್ತರಾದ ಎಲ್. ಎಸ್. ಶಾಸ್ತ್ರಿ ಅವರಿಗೆ ಲೋಕವಿಕಾಸ ಪ್ರತಿಷ್ಠಾನ ವೇ. ಮೂ. ಲಷ್ಕರಿ ಕೇಶವ ಭಟ್ಟರ ಜನ್ಮಶತಮಾನೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.
ವೇದಮೂರ್ತಿ ಕೇಶವ ಭಟ್ಟರ ಮನೆತನದ ಒಬ್ಬರು ಹಿರಿಯರು ಸುಮಾರು 200 ವರ್ಷ ಹಿಂದೆ ಸೇನೆಯಲ್ಲಿದ್ದ ಕಾರಣಕ್ಕೆ ಅವರ ಕುಟುಂಬಕ್ಕೆ ಈ ಲಷ್ಕರಿ ಶಬ್ದ ಅಂಟಿಕೊಂಡಿತೆನ್ನಲಾಗಿದೆ. ಅದು ಮೂಲತಃ ಕೊಡ್ವಕೆರೆ ಮನೆತನದವರು. 1900 ಫೆಬ್ರುವರಿ 19 ರಂದು ಜನಿಸಿದ ಕೇಶವ ಭಟ್ಟರು ಕೃಷಿ ಮತ್ತು ಪೌರೋಹಿತ್ಯ ಕೆಲಸ ಮಾಡುತ್ತಲೇ ಸಮಾಜ ಸೇವೆಗೆ ತಮ್ಮನ್ನು ತೊಡಗಿಸಿಕೊಂಡವರು. ತಮ್ಮ ಸುತ್ತಲಿನ ಜನರಿಗೆ ಹಲವು ಬಗೆಯಲ್ಲಿ ನೆರವಾಗುತ್ತ ಸಮಾಜಜೀವಿಯಾಗಿ ಬದುಕಿದವರು. ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಿ ಸರ್ವಜನಸ್ನೇಹಿಯೂ ಸರ್ವ ಜನಹಿತೈಷಿಯೂ ಆಗಿ ಬಾಳಿದವರು. 1979 ರಲ್ಲಿ ಅವರು ನಿಧನರಾದರು.
ಕೇಶವ ಭಟ್ಟರ ಪುತ್ರರಾದ ಶ್ರೀ ಎಸ್. ಜಿ. ಕೃಷ್ಣ ಅವರು ಶಿಕ್ಷಣಾಧಿಕಾರಿಯಾಗಿ ನಿವೃತ್ತರಾಗಿದ್ದು ಅವರು ತಮ್ಮ ತಂದೆಯವರ 100 ನೆಯ ವರ್ಷದ ಸಂದರ್ಭದಲ್ಲಿ ಅವರ ನೆನಪನ್ನು ಚಿರಸ್ಥಾಯಿಯಾಗಿಸಲು ಲಷ್ಕರಿ ಕೇಶವ ಭಟ್ಟ ಜನ್ಮಶತಮಾನೋತ್ಸವ ಪ್ರಶಸ್ತಿ ಸ್ಥಾಪಿಸಿದರು. ಅವರ ಲೋಕವಿಕಾಸ ಪ್ರತಿಷ್ಠಾನದ ವತಿಯಿಂದ ಪ್ರತಿ ವರ್ಷ ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಾಧನೆ ಗೈದ ಒಬ್ಬರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. 2001 ರಲ್ಲಿ ಪ್ರಾರಂಭವಾದ ಈ ಪ್ರಶಸ್ತಿಯನ್ನು ಈವರೆಗೆ 22 ಜನ ಸಾಧಕರು ಪಡೆದಿದ್ದು ಅವರಲ್ಲಿ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ಟ, ಶ್ರೀ ಸುಬ್ರಾಯ ಚೊಕ್ಕಾಡಿ, ಡಾ. ನಾ. ಮೊಗಸಾಲೆ, ಡಾ. ಸಾರಾ ಅಬೂಬಕರ್, ಡಾ. ರಮಾನಂದ ಬನಾರಿ, ಗಂಗಾ ಪಾದೇಕಲ್, ಕೋಳ್ಯೂರು ರಾಮಚಂದ್ರರಾವ್, ಡಾ. ರಾಮ ಭಟ್ಟ ಉಪ್ಪಂಗಳ ಮೊದಲಾದವರಿದ್ದಾರೆ. 23 ನೆಯ ವರ್ಷದ ಪ್ರಶಸ್ತಿಗೆ ಸಾಹಿತ್ಯ , ಪತ್ರಿಕೆ, ಕಲೆ ಸಂಸ್ಕೃತಿಗಳ ಕ್ಷೇತ್ರದಲ್ಲಿ ಸುಮಾರು ಆರು ದಶಕಗಳ ನಿರಂತರ ಚಟುವಟಿಕೆಗಳನ್ನು ನಡೆಸಿದ ಹೊನ್ನಾವರ ಮೂಲದ ಲಕ್ಷ್ಮೀನಾರಾಯಣ ಶಾಸ್ತ್ರಿ ನಾಜಗಾರ ಅವರನ್ನು ಕೆ. ಜಯರಾಜ ಆಚಾರ್ ಅವರ ಅಧ್ಯಕ್ಷತೆಯ ಲೋಕ ವಿಕಾಸ ಪ್ರತಿಷ್ಠಾನ ಆಯ್ಕೆ ಮಾಡಿದೆ.
80 ವರ್ಷ ವಯಸ್ಸಿನ ಶಾಸ್ತ್ರಿಯವರು ಪತ್ರಿಕೆ, ಸಾಹಿತ್ಯ, ಸಂಗೀತ, ನಾಟಕ, ಯಕ್ಷಗಾನ, ಗಮಕ, ಸಾಂಸ್ಕೃತಿಕ ಸಂಘಟನಾ ಕ್ಷೇತ್ರಗಳಲ್ಲಿ ವೈವಿಧ್ಯಮಯ ಸೇವೆ ಸಲ್ಲಿಸುತ್ತ ಬಂದಿದ್ದು ನೂರಕ್ಕೂ ಹೆಚ್ಚು ಸಾಹಿತ್ಯ ಕೃತಿ ರಚನೆ, 40 ಸಾವಿರಕ್ಕೂ ಹೆಚ್ಚು ಬಿಡಿ ಬರೆಹಗಳು, ಐದು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳ ಸಂಘಟನೆ, ಸಂಗೀತ ನಾಟಕ ಯಕ್ಷಗಾನ ಕಲಾಪ್ರದರ್ಶನ, ರಾಜ್ಯ ಮಟ್ಟದ ಪತ್ರಿಕಾ/ ಸಾಹಿತ್ಯ ಸಮ್ಮೇಳನಗಳು, ಅಸಂಖ್ಯಾತ ಯುವ ಪ್ರತಿಭಾವಂತರ ಬೆಳವಣಿಗೆಗೆ ಉತ್ತೇಜನ ಮೊದಲಾದವುಗಳ ಮೂಲಕ ಖ್ಯಾತಿ ಮತ್ತು ಅಪಾರ ಜನಪ್ರಿಯತೆ ಪಡೆದಿದ್ದಾರೆ. ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪುಸ್ತಕ ಪ್ರಶಸ್ತಿ, ಪಾಂಡೇಶ್ವರ ಪ್ರಶಸ್ತಿ, ಸೂರಿ ಕರ್ಕಿ ವೆಂಕಟರಮಣ ಶಾಸ್ತ್ರಿ ಪ್ರಶಸ್ತಿ , ವಿಪ್ರಶ್ರೀ/ ವಿಪ್ರ ಸಾಧಕ ಪ್ರಶಸ್ತಿ ಸಹಿತ 25 ಕ್ಕೂ ಹೆಚ್ಚು ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಶಾಸ್ತ್ರಿಯವರಿಗೆ ಇಂದು ಲಷ್ಕರಿ ಪ್ರಶಸ್ತಿ ನೀಡುತ್ತಿರುವುದಕ್ಕಾಗಿ ಬೆಳಗಾವಿಯ ಸಾಹಿತ್ಯ ಪತ್ರಿಕೆ ಸಾಂಸ್ಕೃತಿಕ ಕ್ಷೇತ್ರಗಳ ಹಿರಿಯರಾದ ಶ್ರೀ ಜಿನದತ್ತ ದೇಸಾಯಿ, ಡಾ. ಎಂಜಿ. ಆರ್. ಅರಸ್ ಮೈಸೂರು, ಶ್ರೀ ಶಾ. ಮಂ. ಕೃಷ್ಣರಾವ್ ಬೆಂಗಳೂರು, ಡಾ. ಶ್ರೀಪಾದ ಶೆಟ್ಟಿ ಹೊನ್ನಾವರ, ಡಾ. ಬಸವರಾಜ ಜಗಜಂಪಿ, ಪಿ. ಬಿ. ಸ್ವಾಮಿ, ಶರಶ್ಚಂದ್ರ ದೇಸಾಯಿ, ಅಶೋಕ ಮಳಗಲಿ, ಶ್ರೀ ಬಿ. ಎಸ್. ಗವಿಮಠ, ಪ್ರೊ. ಎಂಎಸ್. ಇಂಚಲ, ಡಾ. ಪಿ. ಜಿ. ಕೆಂಪಣ್ಣವರ, ಡಾ. ಸಿ. ಕೆ. ಜೋರಾಪೂರ, ಗುಂಡೇನಟ್ಟಿ ಮಧುಕರ, ಆರ್. ಬಿ. ಕಟ್ಟಿ, ದೀಪಿಕಾ ಚಾಟೆ, ರಾಜೇಶ್ವರಿ ಹೆಗಡೆ, ಎ. ಎ. ಸನದಿ, ಬಸವರಾಜ ಗಾರ್ಗಿ, ಆನಂದ ಪುರಾಣಿಕ, ಮಮತಾ ಶಂಕರ, ಅನ್ನಪೂರ್ಣಾ ಹಿರೇಮಠ, ಸುನಂದಾ ಮುಳೆ ಮೊದಲಾದವರು ಇದು ಬೆಳಗಾವಿಗೆ ಹೆಮ್ಮೆಯ ಸಂಗತಿಯೆಂದು ಅವರನ್ನು ಅಭಿನಂದಿಸಿದ್ದಾರೆ.
- ಎಂ. ಎ. ಪಾಟೀಲ
ಬೆಳಗಾವಿ