ಕ್ಷಯರೋಗ ನಿರ್ಮೂಲನೆಗಾಗಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಮುಖ್ಯ: ಡಾ.ಬಸರೆಡ್ಡಿ
ಬಳ್ಳಾರಿ 19: ಕ್ಷಯರೋಗ ನಿರ್ಮೂಲನೆಗಾಗಿ ಆರೋಗ್ಯ ಇಲಾಖೆ ಇಲಾಖೆಯ ಸಿಬ್ಬಂದಿಯ ಜೊತೆಗೆ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಹಾಗೂ ಸಹಕಾರ ತುಂಬಾ ಮುಖ್ಯ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಅವರು ಹೇಳಿದರು.
ನಗರದ ಮಿಲ್ಲರ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ವಾರಿಯರ್ ದಿ.ಕೆ.ಜೆ.ವಾಗೀಶ್ ಅವರ ಮೊದಲನೇ ಪುಣ್ಯ ಸ್ಮರಣೆಯ ನಿಮಿತ್ತ ಬುಧವಾರ ಏರಿ್ಡಸಿದ್ದ ಕ್ಷಯರೋಗಿಗಳಿಗೆ ಹಾಗೂ ಟಿ.ಬಿ ಚಾಂಪಿಯನ್ಗಳಿಗೆ ಆರೋಗ್ಯ ತಿಳಿವಳಿಕೆ ಶಿಬಿರ ಹಾಗೂ ಪೌಷ್ಠಿಕ ಆಹಾರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷಯರೋಗ ನಿರ್ಮೂಲನೆಗೆ ಸರ್ಕಾರದಿಂದ ತಪಾಸಣೆ ಮತ್ತು ಚಿಕಿತ್ಸೆ ಉಚಿತವಾಗಿ ನೀಡುತ್ತಿದ್ದು,ನಿಕ್ಷಯ್ ಪೋಷಣೆ ಅಡಿಯಲ್ಲಿ ಪ್ರತಿಯೊಬ್ಬ ರೋಗಿಗೆ ಮಾಸಿಕ 500 ರೂಗಳಂತೆ ಚಿಕಿತ್ಸೆ ಮುಗಿಯುವವರೆಗೂ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಇಂದ್ರಾಣಿ ಅವರು ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು,ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಸ್ಯಾನಿಟೈಸ್ ಬಳಸಿ ಎಂದು ಹೇಳಿದ ಅವರು ಪ್ರತಿಯೊಬ್ಬರು ಸರ್ಕಾರದಿಂದ ದೊರೆಯುತ್ತಿರುವ ಕೋವಿಡ್ ಲಸಿಕೆಯನ್ನು ಪಡೆಯಿರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಅನಿಲ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನ್ ಕುಮಾರಿ,ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸೌಜನ್ಯ,ಯುನಾನಿ ವೈದ್ಯಾಧಿಕಾರಿ ಡಾ.ಜೈನಾಲುದ್ದೀನ್, ಎನ್ಟಿಇಪಿಟಿಬಿ ಸೆಲ್ ವೈದ್ಯಾಧಿಕಾರಿ ಡಾ.ಪಾಂಡುರಂಗ ಸ್ವಾಮಿ,ನೋಡಲ್ ಡಿಆರ್ಟಿಬಿ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ,ಗೌತಮ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಹಾಗೂ ದಿ.ಕೆ.ಜೆ.ವಾಗೀಶ್ ಅವರ ಪುತ್ರಿಯರಾದ ಮೇಘನಾ, ಆರ್.ಎನ್.ಟಿ.ಸಿ.ಪಿ ಗುತ್ತಿಗೆ ನೌಕರರ ಸಂಘದ ಕೆ.ಚಂದ್ರಶೇಖರ್ ಸೇರಿದಂತೆ ಇನ್ನೀತರರು ಇದ್ದರು.