ಜನರ ಹಿತಕ್ಕಾಗಿ ಕೋವಿಡ್ ಆರೈಕೆ ಕೇಂದ್ರ ಸ್ಥಾಪನೆ
ಚಿಕ್ಕೋಡಿ19: ಗಡಿ ಭಾಗದಲ್ಲಿ ಸೋಂಕು ಹೆಚ್ಚಾಗುವ ನಿಟ್ಟಿನಲ್ಲಿ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನಿಪ್ಪಾಣಿ ವಿಧಾನಸಭೆ ಕ್ಷೇತ್ರದ ಕಾರದಗಾ ಗ್ರಾಮದಲ್ಲಿ ಕೋವಿಡ್ ಆರೈಕೆ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.ನಿಪ್ಪಾಣಿ ಮತಕ್ಷೇತ್ರದ ಕಾರದಗಾ ಗ್ರಾಮದಲ್ಲಿರುವ ಬಿಸಿಎಂ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಬಳಿಕ ಜೊಲ್ಲೆ ಉದ್ಯೋಗ ಸಮೂಹ ಹಾಗೂ ಸರ್ಕಾರಿ ಆಸ್ಪತ್ರೆಯ ಸಹಯೋಗದೊಂದಿಗೆ 20 ಹಾಸಿಗೆ ಸಾಮರ್ಥ್ಯದ ನೂತನ ಕೋವಿಡ್ ಆರೈಕೆ ಕೇಂದ್ರ ಸ್ಥಾಪನೆ ಮಡಲಾಗುತ್ತಿದೆ. ಇದರ ಉಪಯೋಗವನ್ನು ಸ್ಥಳಿಯರು ಪಡೆಯಬೇಕು ಎಂದರು.
ಕೋವಿಡ್ ಕೇರ್ ಸೆಂಟರ್ನಲ್ಲಿ ಅಗತ್ಯವಿರುವ ವೈದ್ಯರು, ನರ್ಸ್ ಹಾಗೂ ಡಿ ಗ್ರುಪ್ ಸಿಬ್ಬಂದಿಗಳನ್ನು ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯಿಂದಲೇ ನೇಮಿಸಿ, ಸೋಂಕಿತರ ಚಿಕಿತ್ಸೆಗೆ ಸಕಲ ಸೌಲಭ್ಯಗಳನ್ನು ಒದಗಿಸಲು ತಿರ್ಮಾನಿಸಲಾಗಿದೆ. ಜನತೆಯ ಆರೋಗ್ಯ ರಕ್ಷಣೆಗಾಗಿ ಸಕಲ ಸಹಕಾರ ನೀಡಲು ಸದಾ ಸಿದ್ದರಿದ್ದೇವೆ. ನಮ್ಮ ಈ ಕಾರ್ಯದಲ್ಲಿ ಕೈಜೋಡಿಸಿರುವ ಖಾಸಗಿ ವೈದ್ಯರಾದ ಡಾ. ನವನಾಥ ತೇಲಿ ಅವರ ಕಾರ್ಯ ಶ್ಲಾಘನೀಯ ಎಂದರು.ಸಂಸದ ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ವೈದ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ನೂತನ ಕೋವಿಡ್ ಆರೈಕೆ ಕೇಂದ್ರಕ್ಕೆ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.