ವಿಜಯಪುರ

ಸಚಿವರ ನಡೆ "ಹಸೀರೀಕರಣ" ಕಡೆ... ಜಿಲ್ಲೆಯಲ್ಲಿನ ವಿದ್ಯಾರ್ಥಿಗಳಿಗೆ "ಹಸೀರೀಕರಣ" ಕುರಿತು ಪ್ರಬಂಧ ಸ್ಪರ್ಧೆ

ಸಚಿವರ ನಡೆ "ಹಸೀರೀಕರಣ" ಕಡೆ... ಜಿಲ್ಲೆಯಲ್ಲಿನ ವಿದ್ಯಾರ್ಥಿಗಳಿಗೆ "ಹಸೀರೀಕರಣ" ಕುರಿತು ಪ್ರಬಂಧ ಸ್ಪರ್ಧೆ

ವಿಜಯಪುರ 24: ಪರಿಸರ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್‌-2025 ರ ಅಂಗವಾಗಿ ನವೆಂಬರ್ 16 ರಂದು "ಚಿತ್ರಕಲೆ ಸ್ಪರ್ಧೆ" ಮತ್ತು  ನವೆಂಬರ್ 23  ರಂದು "ಹಸೀರೀಕರಣ" ಎಂಬ ವಿಷಯ ಕುರಿತು ನಿಬಂಧ ಸ್ಪರ್ಧೆ ಭಾನುವಾರ ನಗರದ ಪ್ರಾಚೀನ ಸ್ಮಾರಕ ಗಗನ ಮಹಲ್ ಆವರಣದಲ್ಲಿ ನಡೆಸಲಾಗಿದೆ. 

"ವೃಕ್ಷಥಾನ್"  ಹಿನ್ನಲೆ : ಈ ಆಯೋಜನೆಯು ಒಂದು ಬ್ರಹತ್ ಸಂಖ್ಯೆಯಲ್ಲಿ ಗಿಡಗಳನ್ನು ನೆಡುವ ಅಭಿಯಾನವಾಗಿದ್ದು, ಜಿಲ್ಲೆಯ ಉಸ್ತುವಾರಿ ಸಚಿವರಾದ ಎಂ. ಬಿ. ಪಾಟೀಲ್ ಅವರು "ಲಕ್ಷ ವೃಕ್ಷ ಆಂದೋಲನ" ಕ್ಕೆ ಚಾಲನೆ ನೀಡಿದ್ದಾರೆ. ವಿಜಯಪುರ ಜಿಲ್ಲೆಯ "ಕೋಟಿ ವೃಕ್ಷ ಅಭಿಯಾನ" ರಾಷ್ಟ್ರ ಮಟ್ಟದಲ್ಲಿ ಮಾದರಿಯಾಗಿದೆ. ಇದು ಪರಿಸರ ಸಂರಕ್ಷಣೆ ಮತ್ತು ಕೈಗಾರಿಕಾ ಅಭಿವೃದ್ಧಿಯ ನಡುವೆ ಸಮತೋಲನ ಕಾಪಾಡುವ ಗುರಿಯನ್ನು ಹೊಂದಿದೆ. ಡಿ-7 ರಂದು ನಡೆಯುವ  ವೃಕ್ಷಥಾನ್ ಹೆರಿಟೇಜ್ ರನ್ ನಲ್ಲಿ ದೇಶ-ವಿದೇಶ ಗಳ 15 ಸಾವಿರಕ್ಕೂ ಅಧಿಕ ಓಟಗಾರರು ಭಾಗವಹಿಸಲಿದ್ದಾರೆ ಎಂಬ ನೀರೀಕ್ಷೆಯನ್ನು ಹೊಂದಿದ್ದು, ಈ ಓಟವನ್ನು ಐತಿಹಾಸಿಕಗೊಳಿಸುವಲ್ಲಿ ಸಚಿವರು ಮುಖ್ಯ ಪಾತ್ರ ವಹಿಸಲಿದ್ದಾರೆ. ಅವರ ನೇತೃತ್ವದಲ್ಲಿ ಜರುಗಲಿರುವ ಈ ಒಂದು ಅಭಿಯಾನದಲ್ಲಿ ಜಿಲ್ಲೆಯ ಎಲ್ಲಾ ಭಾಗದವರು  ಪಾಲ್ಗೊಳ್ಳುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.ಹಸೀರೀಕರಣದತ್ತ ಹೆಜ್ಜೆ: ವಿಜಯಪುರ ಜಿಲ್ಲೆಯನ್ನು ಹಸಿರಾಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಮ್‌.ಬಿ. ಪಾಟೀಲ್ ಅವರು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. ಅವರು ಸತತವಾಗಿ 9 ವರ್ಷಗಳ ಕಾಲ ನಿರಂತರವಾಗಿ ಜಿಲ್ಲೆಯನ್ನು ಹಸಿರಾಗಿಸುವ ಕಾರ್ಯ ಪ್ರವೃತ್ತಿಯಲ್ಲಿದ್ದು, ಅದಕ್ಕೆ ತಕ್ಕ ಪ್ರತಿಫಲವಾಗಿ ನಮ್ಮ ದೇಶದಲ್ಲಿಯೇ ಶುದ್ಧ ಗಾಳಿಯನ್ನು ಪಡೆಯುವಲ್ಲಿ ನಮ್ಮ ನಾಡು 3 ನೇ ಸ್ಥಾನ ಹೊಂದಿದೆ ಅದರ ಜೊತೆಗೆ 0.17 ರಷ್ಟು ಇರುವ ಅರಣ್ಯ ಪ್ರದೇಶ ವನ್ನು ಈಗ 2.4 ರಷ್ಟು ವೃದ್ಧಿಸುವಲ್ಲಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. 

ಚಿತ್ರಕಲೆ ಸ್ಪರ್ಧೆ: ಹೆರಿಟೇಜ್ ರನ್ 21 ಕಿ. ಮೀ. ಓಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಓಡುವ ವಿಜಯಪುರ ನಗರದಲ್ಲಿರುವ ಪ್ರಾಚೀನ ಸ್ಮಾರಕಗಳಾದ ಗೋಳಗುಮ್ಮಟ, ಸುಂದರೇಶ್ವರ ಮಂದಿರ, ಗಗನ ಮಹಲ್, ಶ್ರೀ ನರಸಿಂಹ ದೇವಸ್ಥಾನ, ಬಾರಾಕಮಾನ, ಇಬ್ರಾಹಿಂ ರೋಜಾ, ಶಿಕ್ಷಣ ಸಂಸ್ಥೆಗಳಾದ ಸೈನಿಕ ಶಾಲೆ, ಬಿ.ಎಲ್‌.ಡಿ.ಇ ಸಂಸ್ಥೆ ಶಾಲೆಗಳು, ಜ್ಞಾನಯೋಗಾಶ್ರಮ ಹಾಗೂ ವಿಜಯಪುರ ನಗರದೇವತೆ ಶ್ರೀ ಸಿದ್ಧೇಶ್ವರ ದೇವಸ್ಥಾನ ಸ್ಮಾರಕಗಳ ಮಹತ್ವ ಸಾರುವ ಚಿತ್ರಗಳನ್ನು ಬಿಡಿಸುವ ವಿಷಯವನ್ನು ನೀಡಲಾಗಿತ್ತು.ಚಿಣ್ಣರು ಕೈಯಲ್ಲಿ ಕುಂಚ ಮತ್ತು ಬಣ್ಣ ಹಿಡಿದು ಬಿಳಿಯ ಹಾಳೆಯ ಮೇಲೆ ತಮಗೆ ಇಷ್ಟವಾದ ಸ್ಮಾರಕಗಳನ್ನು ಅಂದವಾಗಿ ಬಿಡಿಸಿದ ಒಂದೊಂದು ಚಿತ್ರಗಳು ಅದ್ಭುತವಾಗಿದ್ದವು.  

ಪ್ರಬಂಧ ಸ್ಪರ್ಧೆ: " ಹಸೀರೀಕರಣ " ಎಂಬ ವಿಷಯದ ಕುರಿತು ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಸುಮಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರತಿಯೊಬ್ಬ ವಿದ್ಯಾರ್ಥಿಯು ತಾವು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಸಂತೋಷವಾಗಿದ್ದು, ನಮ್ಮ ನಾಡಿನಲ್ಲಿ ಪರಿಸರ ಸಂರಕ್ಷಣೆ, ಪರಿಸರ ಕಾಳಜಿ ಹಾಗೂ ಗಿಡ ಮರಗಳನ್ನು ಬೆಳೆಸಿ ಉಳಿಸುವಲ್ಲಿ ನಮ್ಮ ಪಾತ್ರ, ಹಸರೀಕರಣ ಬಗ್ಗೆ ಪ್ರಬಂಧದಲ್ಲಿ ಬರೆದಿದ್ದೇವೆ ಎಂದರು. ಅದರಲ್ಲಿ ನಗರದ ಖಾಸಗಿ ಶಾಲೆ ವಿದ್ಯಾರ್ಥಿಗಳು ಮಾತ್ರ ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಎಲ್ಲಾ ಶಾಲೆ ಮಕ್ಕಳು ಮಾಧ್ಯಮದೊಂದಿಗೆ ತಮ್ಮ ಸಂತೋಷದ ಕ್ಷಣಗಳನ್ನು ಅವರ ಮಾತುಗಳಲ್ಲಿ ವ್ಯಕ್ತ ಪಡಿಸಿದರು.ಎಲ್ಲಾ ಮಕ್ಕಳಲ್ಲಿ ಪ್ರಬುದ್ಧವಾದ ಜ್ಞಾನ ಭಂಡಾರ ಇರುತ್ತದೆ ಆದರೆ ಅವರಲ್ಲಿರುವ ಪ್ರತಿಭೆ ಹೊರ ತರಲು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕಾರ್ಯ ಚಟುವಟಿಕೆಗಳನ್ನು ಏರಿ​‍್ಡಸಿದರೆ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಹೊಂದಿ ಅವರ ಜ್ಞಾನ ಇನ್ನೂ ಹೆಚ್ಚು ಉತ್ತಮಗೊಳಿಸಲು ಈ ಸ್ಪರ್ಧೆಗಳು ಪ್ರೇರಣೆಯಾಗುತ್ತವೆ.ಈ ಸ್ಪರ್ಧೆಗಳನ್ನು ಪ್ರಾಥಮಿಕ ವಿಭಾಗ, ಪ್ರೌಢ ವಿಭಾಗ ಹಾಗೂ ಪಿಯು ಕಾಲೇಜು ವಿಭಾಗ ಒಟ್ಟು ಮೂರು ವಿಭಾಗಗಳಲ್ಲಿ ನಡೆಸಿದ್ದು, ಇದರಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ವಿಶೇಷ ಸಂಗತಿ.ಬಹುಮಾನ ವಿವರ : ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ರೂ. 10000, ದ್ವಿತೀಯ ಸ್ಥಾನ ಪಡೆಯುವವರಿಗೆ ರೂ. 7000, ತೃತಿಯ ಸ್ಥಾನ ಪಡೆಯುವವರಿಗೆ ರೂ. 5000 ಹಾಗೂ ಇಬ್ಬರಿಗೆ ತಲಾ ರೂ. 2500 ಸಮಾಧಾನಕರ ನಗದು ಬಹುಮಾನ ನೀಡಲಾಗುವುದು ಎಂದು"ವೃಕ್ಷಥಾನ್" ಆಯೋಜನೆ ಸಿಬ್ಬಂದಿ ಮಾಹಿತಿ ಒದಗಿಸಿದ್ದಾರೆ.ಹವಾಮಾನ ಬದಲಾವಣೆ ಪರಿಸರ ಮಾಲಿನ್ಯದಿಂದ ಸಮಸ್ಯೆಗಳು ತೀವ್ರವಾಗಿವೆ. ಈ ಎಲ್ಲ ಸಮಸ್ಯೆಗೆ ಪರಿಹಾರ ಎಂದರೆ ಪ್ರತಿಯೊಬ್ಬರೂ ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿ ಪರಿಸರ ಸಮತೋಲನ ಕಾಪಾಡಬೇಕು. ಪರಿಸರ ಸಂರಕ್ಷಣೆ ಆರೋಗ್ಯದ ದೃಷ್ಟಿಯಲ್ಲಿ ನಾವು ಇನ್ನೂ ತಡ ಮಾಡಿದರೆ ಪರಿಸ್ಥಿತಿ ಗಂಭೀರವಾಗಲಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕು. 

ಇಂದಿನ ಯುಗದ ಜನರಿಗೆ ಪರಿಸರ ಮತ್ತು ಇತಿಹಾಸದ ಬಗ್ಗೆ ತಿಳಿವಳಿಕೆ ಮೂಡಿಸುವ ಹೆರಿಟೇಜ್ ರನ್ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಮ್‌. ಬಿ. ಪಾಟೀಲ್ ಅವರ ಈ ಅಭಿಯಾನಕ್ಕೆ ನಾವೆಲ್ಲರೂ ಕೈಜೋಡಿಸಬೇಕು. ಪ್ರಬಂಧ ಸ್ಪರ್ಧೆಯಲ್ಲಿ ನಮ್ಮ ಸರಕಾರಿ ಕನ್ನಡ ಶಾಲೆಯ ಮಕ್ಕಳು ಪಾಲ್ಗೊಂಡಿದ್ದಾರೆ. ಮಕ್ಕಳಿಗೆ ಇಂತಹ ಅವಕಾಶಗಳನ್ನು ಒದಗಿಸಿದರೆ  ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತವೆ. 

- ಮಹಾದೇವ ಹುಲ್ಲೂರ್  

ಮುಖ್ಯ ಶಿಕ್ಷಕರು ಎಂ.ಪಿ.ಎಸ್‌. ಶಾಲೆ  

ಚಿಕ್ಕರೂಗಿ 2. ನಮ್ಮ ಮಕ್ಕಳಿಗೆ ಶಾಲೆಯಲ್ಲಿನ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡುತ್ತೇವೆ. ಈ ಪ್ರಬಂಧ ಸ್ಪರ್ಧೆಯಲ್ಲಿ ಹೆಚ್ಚಿನ ಮಕ್ಕಳು  ಭಾಗವಹಿಸಿದ್ದು, ನಗರದಲ್ಲಿ ಇನ್ನೂ ಹೆಚ್ಚು ಇಂತಹ ಅವಕಾಶಗಳನ್ನು ನೀಡಿದಾಗ ಮಾತ್ರ ಮಕ್ಕಳಲ್ಲಿನ ಪ್ರತಿಭೆಯನ್ನು ಹೊರಹಾಕಲು ಸಹಕಾರಿಯಾಗುತ್ತದೆ.  

- ಸ್ವಪ್ನ ಮೆಡೆಗರ್,  

ವಿಜಯಪುರ 3. ನಾನು ಎಮ್‌.ಪಿ.ಎಸ್ ಸರಕಾರಿ ಶಾಲೆ ಚಿಕ್ಕರೂಗಿ ವಿದ್ಯಾರ್ಥಿನಿ. ಜಿಲ್ಲಾ ಉಸ್ತುವಾರಿ ಸಚಿವರಾದ ಎಮ್‌. ಬಿ. ಪಾಟೀಲ್ ಅವರು ಎಲ್ಲಾ ವಿದ್ಯಾರ್ಥಿಗಳಿಗಾಗಿ ಹಸೀರೀಕರಣ ಎಂಬ ವಿಷಯ ಕುರಿತು ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಿದ್ದು, ಇದರಲ್ಲಿ ನಾನು ಭಾಗವಹಿಸಿದ್ದು ತುಂಬಾ ಸಂತೋಷವಾಯಿತು. ಇದರಿಂದ ನಾವು "ಹಸಿರೇ ಉಸಿರು" ಎಂಬ ಘೋಷಣೆ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಂಡಿದ್ದೇವೆ. ನಮ್ಮ ಶಿಕ್ಷಕರು ನಮಗೆ ಇದರ ಬಗ್ಗೆ ಮಾರ್ಗದರ್ಶನ ಮಾಡಿ ನಮಗೆ ಬರೆಯಲು ಅವಕಾಶ ಮಾಡಿ ಕೊಟ್ಟಿದ್ದಾರೆ. ಇಂತಹ ಸ್ಪರ್ಧೆಗಳನ್ನು ಇನ್ನೂ ಹೆಚ್ಚು ಹೆಚ್ಚು ನಡೆಸಿದಾಗ ನಮಗೂ ಬೇರೆ ವಿಷಯಗಳನ್ನು ಕಲಿಯಲು ಆಸಕ್ತಿ ಬರುತ್ತದೆ ಅನುಕೂಲವಾಗುತ್ತವೆ. 

-  ಪ್ರತೀಕ್ಷಾ ಇಮ್ಮನ  

6 ನೇ ತರಗತಿ ವಿದ್ಯಾರ್ಥಿನಿ  

ಎಮ್‌.ಪಿ.ಎಸ್‌. ಶಾಲೆ ಚಿಕ್ಕರೂಗಿ  

-ಬರವಣಿಗೆ - ಶುಭಲಕ್ಷ್ಮಿ ಹೊಸಮನಿ, ಶಿವಣಗಿ 


ಸುದ್ದಿ ಓದಿ