ಮುದ್ದೆಬಿಹಾಲ್

ಪರಿಸರ ಸಂರಕ್ಷಣೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ: ಸಿ.ಎಸ್‌.ನಾಡಗೌಡ್ರ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ: ಸಿ.ಎಸ್‌.ನಾಡಗೌಡ್ರ

ಮುದ್ದೇಬಿಹಾಳ 06: ಪರಿಸರ ಸಂರಕ್ಷಣೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ ಆಗಿದೆ. ಗಿಡಗಳನ್ನು ನೆಡುವ, ಬೆಳೆಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡೋಣ ಎಂದು ಶಾಸಕ, ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್‌.ನಾಡಗೌಡ್ರ ಅಪ್ಪಾಜಿ ಹೇಳಿದರು.  

ಅವರು ಬುಧವಾರ ಪಟ್ಟಣದ ಹುಡ್ಕೋ ಬಡಾವಣೆಯ ಹಸಿರು ತೋರಣ ಉದ್ಯಾನವನದಲ್ಲಿ  ಹಸಿರು ತೋರಣ ಗೆಳೆಯರ ಬಳಗ, ಪುರಸಭೆ, ಅರಣ್ಯ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಯಾವುದೇ ಗಿಡ ಮರಗಳು ಅದೃಷ್ಟ, ದುರದೃಷ್ಟ ತರುವುದಿಲ್ಲ. ಎಲ್ಲವೂ ಪರಿಸರದ ಸಮತೋಲನ ಕಾಪಾಡುತ್ತವೆ. ನಾವು ಮೌಢ್ಯಗಳಿಗೆ ದಾಸರಾಗದೇ ಪರಿಸರ ಪ್ರೀತಿಸುವ ಕೆಲಸ ಮಾಡಬೇಕು. ಹಸಿರು ತೋರಣ ಗೆಳೆಯರ ಬಳಗ ಈ ನಿಟ್ಟಿನಲ್ಲಿ ಮಾಡುತ್ತಿರುವ ಕೆಲಸ ಪ್ರಶಂಸನೀಯ ಎಂದರು. ಅತಿಥಿಗಳಾಗಿದ್ದ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಿ.ಐ.ಬಿರಾದಾರ ಮಾತನಾಡಿ, ಜೀವ ವೈವಿಧ್ಯತೆ ಇದ್ದರೆ ಮಾತ್ರ ನಾವು ಉಳಿಯುತ್ತೇವೆ. ಹೆಚ್ಚು ಫಸಲು ಪಡೆಯುವ ದುರಾಶೆಯಿಂದ ಕೀಟ ನಾಶಕ, ರಾಸಾಯನಿಕ ಗೊಬ್ಬರ ಬಳಸುತ್ತ ನಡೆದಿರುವುದರಿಂದ ಸೂಕ್ಷ್ಮ ಜೀವ ಸಂಕುಲ ನಾಶವಾಗುತ್ತಿದೆ. ನಮ್ಮ ಭೂಮಿ, ನಮ್ಮ ಭವಿಷ್ಯ ಈಗಿನ ಧ್ಯೇಯವಾಗಿದ್ದು ಭೂಮಿಯ ಸಂರಕ್ಷಣೆ ಕೆಲಸ ಎಲ್ಲ ಸೇರಿ ಮಾಡೋಣ ಎಂದರು.   

ತಾಲೂಕು ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್‌.ಜಿ.ಸಂಗಾಲಕ ಮಾತನಾಡಿ, ಅರಣ್ಯ ಸಂಪತ್ತು ಕ್ರಮೇಣ ಕಡಿಮೆಯಾಗುತ್ತಿದೆ. ನಾವೂ ಉಳಿಯಬೇಕು. ನಮ್ಮ ಭವಿಷ್ಯದ ಪೀಳಿಗೆಯ ಉಳಿವಿಗೆ ಅರಣ್ಯ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸಮತೋಲನದ ಅರಣ್ಯ ಇಲ್ಲದಿದ್ದರೆ ಕರಾಳ ದಿನಗಳು ಬರಲಿವೆ ಎಂಬ ಎಚ್ಚರಿಕೆ ನಿತ್ಯ ನೋಡುತ್ತಿದ್ದೇವೆ. ಅರಣ್ಯ ಇಲಾಖೆ ಮಾಡುತ್ತಿರುವ ಕೆಲಸಕ್ಕೆ ಜನರ ಸಂಘ, ಸಂಸ್ಥೆಗಳ ಸಹಕಾರ ಅವಶ್ಯಕ ಎಂದರು. ವೇದಿಕೆಯಲ್ಲಿ ಕೆಬಿಜೆಎನ್ನೆಲ್ ವಲಯ ಅರಣ್ಯಾಧಿಕಾರಿ ಯಶವಂತ ರಾಠೋಡ, ಪುರಸಭೆಯ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಇದ್ದರು.   

ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷರಾದ ಡಾ.ವೀರೇಶ ಇಟಗಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರ ಸಂರಕ್ಷಣೆಗಾಗಿ ಪಟಾಕಿ ಬೇಡ ಅಭಿಯಾನ, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ ಬೇಡ ಅಭಿಯಾನ, ನೀರು ಉಳಿಸಿ ಅಭಿಯಾನಗಳ ಜೊತೆಗೆ ಮೌಲ್ಯಗಳನ್ನು ಕಳೆದು ವೈಚಾರಿಕತೆ ಮೂಡಿಸುವ ಕೆಲಸವನ್ನು ಬಳಗ ಹತ್ತು ವರ್ಷಗಳಿಂದ ಮಾಡುತ್ತ ಬಂದಿದೆ ಎಂದರು.

ಪರಿಸರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ರೇಶ್ಮಾ ಇಕ್ಬಾಲ ಮಾಳನೂರ,  ಶಿವಪ್ಪ ಸೋಮಲೆಪ್ಪ ರಾಠೋಡ, ಸುರೇಶ ತಾಳಿಕೋಟಿ, ಮೌಲಾಸಾಬ ಜಂಗ್ಲೀಸಾಬ ನದಾಫ ಅವರಿಗೆ  "ಪರಿಸರ ರಕ್ಷಕ" ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಸಂಪತ್ತಕುಮಾರ ಢವಳಗಿ ಪ್ರಥಮ, ಪ್ರಿಯಾ ಆನಂದ ಚಿನಿವಾರ ದ್ವಿತೀಯ, ಗಂಗೋತ್ರಿ ಕುಂಬಾರ ತೃತೀಯ ಅವರಿಗೆ ಬಹುಮಾನ ವಿತರಿಸಲಾಯಿತು. ಕಲಾವಿದ ಸಿದ್ದರಾಜ ಹೊಳಿ ನಿರ್ಣಾಯಕರಾಗಿದ್ದರು.   

ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ನಾಲತವಾಡ, ಬಿ.ವಿ.ಕೋರಿ, ರುದ್ರೇಶ ಕಿತ್ತೂರು, ಹಸಿರು ತೋರಣ ಬಳಗದ ಉಪಾಧ್ಯಕ್ಷ ಬಸವರಾಜ ಬಿಜ್ಜೂರ, ಮಾಜಿ ಅಧ್ಯಕ್ಷರಾದ ಕೆ.ಆರ್‌.ಕಾಮಟೆ, ಬಿ.ಎಸ್‌.ಮೇಟಿ, ಅಶೋಕ ರೇವಡಿ, ರಾಜಶೇಖರ ಕಲ್ಯಾಣಮಠ, ರವಿ ಗೂಳಿ, ಮನೆಯಲ್ಲಿ ಮಹಾಮನೆ ಬಳಗದ ಸದಸ್ಯರು, ವೈದ್ಯರ ಸಂಘ, ನಿವೃತ್ತ ನೌಕರರ ಸಂಘದ ಸದಸ್ಯರು ಪಾಲ್ಗೊಂಡಿದ್ದರು.  

ಶ್ರೀದೇವಿ ಖೈನೂರ ಮತ್ತು ಪ್ರಿಯಾ ಚಿನಿವಾರ ಪ್ರಾರ್ಥಿಸಿದರು.  ನಾಗಭೂಷಣ ನಾವದಗಿ ಸ್ವಾಗತಿಸಿದರು. ಸಂಚಾಲಕ ಮಹಾಬಲೇಶ್ವರ ಗಡೇದ ನಿರೂಪಿಸಿದರು. ವೀರೇಶ ಢವಳಗಿ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ಬಿ.ಎಚ್‌.ಬಳಬಟ್ಟಿ ವಂದಿಸಿದರು. 


ಸುದ್ದಿ ಓದಿ