ಬಳ್ಳಾರಿ

ಸಮುದಾಯದ ಹೆಸರನ್ನು ಸರಿಯಾಗಿ ದಾಖಲಿಸಿ: ಡಾ. ಜಯರಾಮಯ್ಯ

ಸಮುದಾಯದ ಹೆಸರನ್ನು ಸರಿಯಾಗಿ ದಾಖಲಿಸಿ: ಡಾ. ಜಯರಾಮಯ್ಯ

ಬಳ್ಳಾರಿ 12: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಗೋಂಧಳಿ ಸಮಾಜದ ವಿವಿಧ  

ಪಂಗಡಗಳ ಜನರು ತಮ್ಮ ಸಮುದಾಯದ ಹೆಸರನ್ನು ಉಲ್ಲೇಖಿಸುವಾಗ ಸರಿಯಾಗಿ ದಾಖಲಿಸಬೇಕೆಂದು ಅಖಂಡ ಕರ್ನಾಟಕ ಗೋಂಧಳಿ ಸಮಾಜದ ರಾಜ್ಯಾಧ್ಯಕ್ಷ ಡಾ.ಕೆ.ಎಂ.ಜಯರಾಮಯ್ಯ ಹೇಳಿದರು. 

ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಂಧಳಿ ಸಮುದಾಯದ ಬುಡುಬುಡಿಕೆ, ಜೋಷಿ, ವಾಸುದೇವ ಮತ್ತು ಭಟ್ಟಂಗಿ ಎಂಬ ಸಮುದಾಯಗಳ ಜನರು ತಮ್ಮ ಜಾತಿ ದಾಖಲೀಕರಣದ ಸಮಯದಲ್ಲಿ ಸಮುದಾಯದ ಹೆಸರನ್ನು ತಪ್ಪಾಗಿ ದಾಖಲಿಸಬಾರದು ಎಂದರು.  

ಬುಡುಬುಡಿಕೆ ಪಂಗಡದವರು ಶಾಲೆಯ ಪ್ರವೇಶಾತಿ ದಾಖಲಾತಿ ವೇಳೆ ಮರಾಠಿ ಎಂದು ದಾಖಲಿಸಬಾರದು. ಹಾಗೆ ದಾಖಲಿಸುವುದು ತಪ್ಪು. ಬುಡುಬುಡಿಕೆ ಮತ್ತು ಇತರೆ ಜಾತಿಯವರು ಎಂದು ಹೇಳಿಕೊಳ್ಳಲು ಅವಮಾನ ಆಗುತ್ತದೆ ಎನ್ನುವ ಕಾರಣಕ್ಕೆ ಮರಾಠಿ ಎಂದು ದಾಖಲಿಸುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಜಾತಿ ಕಾಲಂನಲ್ಲಿ ಸರಿಯಾದ ಮಾಹಿತಿ ದಾಖಲಿಸಲು ಸಮಾಜದ ಜನರಲ್ಲಿ ಜಾಗೃತಿ ಮೂಡಿಸಲು ನಾವು ಹೊರಟಿದ್ದೇವೆ. ಈಗಾಗಲೇ ಕಲ್ಯಾಣ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಸಂಚರಿಸಿದ್ದೇವೆ. ಪ್ರತಿಯೊಂದು ಜಿಲ್ಲೆ ಮತ್ತು ನಗರ, ಹಳ್ಳಿಗಳಿಗೂ ತೆರಳಿ ನಮ್ಮ ಸಮುದಾಯದ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಡುತ್ತಿದ್ದೇವೆ. ಸರ್ಕಾರ ಕಳೆದೆರಡು ವರ್ಷಗಳ ಹಿಂದೆ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆದೇಶ ನೀಡಿದೆ. ಕುಲಶಾಸ್ತ್ರೀಯ ಅಧ್ಯಯನ ಆರಂಭವಾಗಬೇಕಿದೆ. ಇದರ ಲಾಭ ಜನರಲಿ ತಲುಪಬೇಕು ಎಂದರು.  

ಮೈಸೂರಿನ ಬುಡಕಟ್ಟು ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಬಸವನಗೌಡ ಅವರ ನೇತೃತ್ವದಲ್ಲಿ ಕುಲಶಾಸ್ತ್ರೀಯ ಅಧ್ಯಯನಕ್ಕೆ ಸಮಿತಿ ರಚಿಸಲಾಗಿದೆ. ರಾಜ್ಯದಲ್ಲಿ ಅಂದಾಜು 7 ಲಕ್ಷ ಜನರಿದ್ದಾರೆ. ಅವರೆಲ್ಲರೂ ಈ ಕುರಿತು ಜಾಗೃತರಾಗಬೇಕಿದೆ ಎಂದರು.  ಬುಡಬುಡಿಕೆ, ಗೋಂಧಳಿ, ವಾಸುದೇವ, ಜೋಷಿ, ಭಟ್ಟಂಗಿ ಎಂದು ಹೇಳಲು ಅವಮಾನ ಆಗುತ್ತದೆ ಎಂಬ ಕಾರಣಕ್ಕೆ ಮರಾಠ ಎಂದು ಜಾತಿ ಕಾಲಂ ತುಂಬಿರುವ ಜನರಿಗೆ ಅನ್ಯಾಯ ಆಗಬಾರದು. ಈ ಬಗ್ಗೆ ಸರ್ಕಾರ ಕ್ರಮ ವಹಿಸಬೇಕು. ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅಕ್ಕಪಕ್ಕದವರಿಂದ ಮಾಹಿತಿ ಪಡೆದು ನಿಜವಾಗಿ ಅವರ ಜಾತಿ ಯಾವುದೆಂದು ದಾಖಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.  ಗೋಂಧಳಿ ಸಮುದಾಯದ ಮುಖಂಡರಾದ ರಾಜಾ ಎಸ್‌.ಎನ್‌., ಬುಡಬುಡಿಕೆ ಲಿಂಗಪ್ಪ, ವಿನೋದ್ ರಾವ್ ಭೋರಾತ್ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿದ್ದರು. 


ಸುದ್ದಿ ಓದಿ