ಪ್ರವಾಸೋದ್ಯಮ ಚೇತರಿಕೆಗೆ ಬೇಕಿದೆ ಪ್ರೋತ್ಸಾಹ
ಪ್ರವಾಸ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ನೋಡೋಣ. ಎಲ್ಲರೂ ಸೇರಿ ಪ್ರವಾಸಕ್ಕೆ ಹೋಗಬೇಕು, ಜಲಪಾತದಲ್ಲಿ ಸ್ನಾನ ಮಾಡಬೇಕು, ಆ ನದಿಯಲ್ಲಿ ಮಿಂದು ಬರಬೇಕು, ಆ ಬೀಚ್ಗೆ ಭೇಟಿ ನೀಡಬೇಕು ಹೀಗೆ ಪ್ರವಾಸದ ಕುರಿತು ಸಾಲು ಸಾಲು ಪಟ್ಟಿ ಬೆಳೆಯುತ್ತದೆ. ದಿನನಿತ್ಯದ ಜೀವನದಲ್ಲಿ ಸ್ವಲ್ಪಮಟ್ಟಿಗೆ ವಿರಾಮ ತೆಗೆದುಕೊಂಡು ಪ್ರವಾಸಕ್ಕೆ ತೆರಳಿ ಮೋಜು ಮಸ್ತಿ ಮಾಡಬೇಕು ಅನಿಸುತ್ತದೆ. ನಿಸರ್ಗದಲ್ಲಿನ ವಿಸ್ಮಯಕಾರಿ ಸ್ಥಳಗಳಲ್ಲಿ ಬೆರೆತು ಹೋಗಬೇಕು ಎಂದೆನಿಸುತ್ತದೆ. ಐತಿಹಾಸಿಕ ದೇವಾಲಯಗಳು ಮತ್ತು ಸ್ಮಾರಕಗಳನ್ನು ನೋಡಿದಾಗ ಇವುಗಳನ್ನು ಆ ಕಾಲದಲ್ಲಿ ಹೇಗೆ ನಿರ್ಮಾಣ ಮಾಡಿರಬೇಕು ಎಂದು ಬಾಯಿಯ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡುವುದಂತೂ ಸತ್ಯ. ಕಡಲಿನ ಅಲೆಗಳ ಭೋರ್ಗೆರತಕ್ಕೆ ದೇಹವನ್ನು ಒಡ್ಡಿ ನಿಲ್ಲಬೇಕು ಎಂದು ಅನಿಸುವುದಂತೂ ನಿಜ.
ಪ್ರವಾಸದ ಮಹತ್ವ ಹಾಗೂ ಐತಿಹಾಸಿಕ, ಪಾರಂಪರಿಕ ಸ್ಮಾರಕಗಳು, ದೇವಾಲಯಗಳು, ವಾಸ್ತುಶಿಲ್ಪಗಳು, ವನ್ಯಜೀವಿ ಸಂರಕ್ಷಣೆ, ಉದ್ಯಾನವನಗಳ ರಕ್ಷಣೆ ಸೇರಿದಂತೆ ಪ್ರವಾಸ ಸಂಬಂಧಿತ ಅಭಿವೃದ್ಧಿಗಾಗಿ ಪ್ರತಿ ವರ್ಷ ಜ.25 ರಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಣೆ ಮಾಡಲಾಗುವುದು. 1980ರಿಂದ ಸೆಪ್ಟೆಂಬರ್ 27ರಂದು "ವಿಶ್ವ ಪ್ರವಾಸೋದ್ಯಮ ದಿನ" ವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ವಿಶ್ವ ವ್ಯಾಪಾರ ಸಂಘಟನೆಯು ವಿಶ್ವ ಪ್ರವಾಸೋದ್ಯಮ ದಿನವನ್ನು ಆಯೋಜಿಸುತ್ತದೆ. 2019ರಲ್ಲಿ ಭಾರತವು ವಿಶ್ವ ಪ್ರವಾಸೋದ್ಯಮ ದಿನದ ಆತಿಥ್ಯ ದೇಶವಾಗಿತ್ತು. 2017ನೇ ವರ್ಷವನ್ನು ಅಂತರಾಷ್ಟ್ರೀಯ ಅಭಿವೃದ್ದಿಗಾಗಿ ಸುಸ್ಥಿರ ಪ್ರವಾಸೋದ್ಯಮ ವರ್ಷ ಎಂದು ಆಚರಿಸಲಾಗಿತ್ತು. ದೇಶದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲು 1948ರಲ್ಲಿ ಟೂರಿಸ್ಟ್ ಟ್ರಾಫಿಕ್ ಕಮೀಟಿಯನ್ನು ರಚನೆ ಮಾಡಲಾಯಿತು. ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಚೆನ್ನೈ ನಗರಗಳಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಲಾಯಿತು. 1958ರಲ್ಲಿ ಪ್ರವಾಸೋದ್ಯಮ ಸಚಿವಾಲಯ ಆರಂಭಗೊಂಡಿತು. ಅಂದಹಾಗೆ ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಪ್ರತಿ ವರ್ಷ ಧೇಯವಾಕ್ಯದೊಂದಿಗೆ ಆಚರಣೆ ಮಾಡಲಾಗುವುದು. 2021ರಲ್ಲಿ ದೇಖೋ ಅಪ್ನಾ ದೇಶ್ ಧೇಯವಾಕ್ಯದಲ್ಲಿ ಆಚರಿಸಲಾಯಿತು. ಈ ವರ್ಷ "ಅಜಾದಿ ಕಾ ಅಮೃತ್ ಮಹೋತ್ಸವ" ಧೇಯವಾಕ್ಯದಲ್ಲಿ ಆಚರಣೆ ಮಾಡಲಾಗುತ್ತಿದೆ.
ಯುನೆಸ್ಕೋ ವಿಶ್ವದಲ್ಲಿನ ಐತಿಹಾಸಿಕ, ಪಾರಂಪರಿಕ ಹಾಗೂ ನೈಸರ್ಗಿಕ ತಾಣಗಳನ್ನು ಗುರುತಿಸಿ, ಅವುಗಳ ಸಂರಕ್ಷಣೆಗೆ ಮುಂದಾಗುತ್ತದೆ. 167 ದೇಶಗಳ 1,121 ತಾಣಗಳನ್ನು ಈಗಾಗಲೇ ಘೋಷಣೆ ಮಾಡಿ ಸಂರಕ್ಷಣೆ ಮಾಡಲಾಗುತ್ತಿದೆ. ಇಟಲಿ ದೇಶವು 58 ತಾಣಗಳನ್ನು ಹೊಂದುವ ಮೂಲಕ ಅತೀ ಹೆಚ್ಚು ಯುನೆಸ್ಕೋ ತಾಣ ಹೊಂದಿದ ದೇಶ ಎಂಬ ದಾಖಲೆಯನ್ನು ಪಡೆದಿದೆ. ಚೀನಾ 55 ತಾಣಗಳನ್ನು ಹೊಂದಿರುತ್ತದೆ. ಅಂದ ಹಾಗೆ ಭಾರತದಲ್ಲಿ 40 ಯುನೆಸ್ಕೋ ತಾಣಗಳನ್ನು ಗುರುತಿಸಲಾಗಿದೆ. 32 - ಸಾಂಸ್ಕೃತಿಕ, 7 - ನೈಸರ್ಗಿಕ ಮತ್ತು ಒಂದು ಮಿಶ್ರ ತಾಣವಾದ ಕಾಂಚನಜುಂಗಾ ರಾಷ್ಟ್ರೀಯ ಉದ್ಯಾನವು ಸೇರಿ ಒಟ್ಟು 40 ತಾಣಗಳಿವೆ. 1983ರಲ್ಲಿ ಅಜಂತ, ಎಲ್ಲೋರ ಗುಹೆಗಳು, ಆಗ್ರಾ ಕೋಟೆಗಳು ಮತ್ತು ತಾಜ್ ಮಹಲ್ ಮೊದಲ ಬಾರಿಗೆ ಯುನೆಸ್ಕೋ ತಾಣಗಳ ಪಟ್ಟಿಗೆ ಸೇರಿಸಲಾಯಿತು. ಈಚೆಗೆ ತೆಲಂಗಾಣದ ಕಾಕತೀಯ ಅರಸರ ಕಾಲಕ್ಕೆ ಸೇರಿದ ರಾಮಪ್ಪ ದೇವಾಲಯ ಹಾಗೂ ಹರ್ಪ ನಾಗರಿಕತೆಯ ಕಾಲದ ಗುಜರಾತಿನ ಧೋಲವೀರಾ ತಾಣಗಳು ಯುನೆಸ್ಕೋ ಪಟ್ಟಿಗೆ ಸೇರಿಸಲಾಯಿತು. ಮಹಾರಾಷ್ಟ್ರ ರಾಜ್ಯವು 5 ತಾಣಗಳನ್ನು ಹೊಂದುವ ಮೂಲಕ ಅತೀ ಹೆಚ್ಚು ಯುನೆಸ್ಕೋ ತಾಣಗಳನ್ನು ಹೊಂದಿದ ರಾಜ್ಯವಾಗಿದೆ. ಕರ್ನಾಟಕವು 3 ತಾಣಗಳನ್ನು ಹೊಂದಿದೆ. ಹಂಪಿ, ಪಟ್ಟದಕಲ್ಲು ಹಾಗೂ ಪಶ್ಚಿಮ ಘಟ್ಟಗಳು ಆ ತಾಣಗಳಾಗಿವೆ. ದೇಶದಲ್ಲಿ ಸುಮಾರು 35ಕ್ಕೂ ಹೆಚ್ಚು ರಾಷ್ಟ್ರೀಯ ಉದ್ಯಾನಗಳಿವೆ. ಅದರಲ್ಲೂ ಕರ್ನಾಟಕದಲ್ಲಿ ಬಂಡೀಪುರ, ನಾಗರಹೊಳೆ, ಅಂಶಿ, ಬನ್ನೇರುಘಟ್ಟ ಮತ್ತು ಕುದುರೆಮುಖ ಎಂಬ ಐದು ರಾಷ್ಟ್ರೀಯ ಉದ್ಯಾನಗಳಿವೆ. ಅಲ್ಲದೇ ಕಾಳಿ, ಭದ್ರಾ, ಬಂಡೀಪುರ, ನಾಗರಹೊಳೆ ಮತ್ತು ಬಿಆರ್ಟಿ ಹುಲಿ ಅಭಯಾರಣ್ಯಗಳಿವೆ. ಭಾರತವು ಹಲವು ರಾಮಸರ್ ತಾಣಗಳನ್ನು ಸಹ ಹೊಂದಿದೆ. ಕರ್ನಾಟಕದ ಪಡುಬಿದ್ರೆ ಮತ್ತು ಕಾಸರಕೋಡು ಇತ್ತೀಚೆಗೆ ರಾಮಸರ್ ತಾಣಗಳ ಪಟ್ಟಿಗೆ ಸೇರಿವೆ.
ಪ್ರವಾಸಿ ತಾಣಗಳಲ್ಲಿ ಹೀಗೆ ಮಾಡದಿರಿ :
ಪ್ರವಾಸಿ ತಾಣಗಳಲ್ಲಿ ಮಾದಕ ವಸ್ತುಗಳ ಬಳಕೆ, ಮಾರಾಟ, ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ಮುಂತಾದ ಚಟುವಟಿಕೆಗಳು ಕಾನೂನು ಬಾಹಿರವಾಗಿವೆ. ಅನುಮತಿಯಿಲ್ಲದೆ ಡ್ರೋನ್ಗಳನ್ನು ಉಡಾಯಿಸುವುದು ಮತ್ತು ಯಾವುದೇ ಸ್ಥಳೀಯ ನಿಯಮ, ನಿಬಂರ್ಧಗಳನ್ನು ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧಕ್ಕೆ ಎಡೆ ಮಾಡಿ ಕೊಡುತ್ತವೆ. ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡಲು ಮುಂದಾಗಬೇಡಿ, ವಿವಿಧ ಜಲಪಾತ, ಕೊಳಗಳನ್ನು ಕೊಳಕು ಮಾಡದಂತೆ ಎಚ್ಚರಿಕೆ ವಹಿಸಬೇಕು. ಅರಣ್ಯ ನಾಶ ಹಾಗೂ ಪ್ರಾಣಿ ಪಕ್ಷಿಗಳನ್ನು ಬೇಟೆಯಾಡುವುದನ್ನು ನಿಷೇಧಿಸಲಾಗಿದೆ. ಸಾಹಸಮಯ ಕ್ರೀಡೆಗಳನ್ನು ಆಡುವಾಗ ಅಪಾಯದ ಬಗ್ಗೆ ಎಚ್ವರಿಕೆ ವಹಿಸಬೇಕು.
ಪ್ರವಾಸ ಕೈಗೊಳ್ಳುವ ಕಾಲ :
ಅಕ್ಟೋಬರ್ನಿಂದ ಫೆಬ್ರವರಿ ಪ್ರವಾಸಕ್ಕೆ ಹೇಳಿ ಮಾಡಿಸಿದ ಸಮಯವಾಗಿದೆ. ಕಡಿಮೆ ಮಳೆ, ಕಡಿಮೆ ಬಿಸಿಲು, ಮುಂಗಾರು ನಂತರದ ಹಚ್ಚ ಹಸಿರು ವಾತಾವರಣದಲ್ಲಿ ಕಾಲ ಕಳೆಯಬಹುದು. ಮಾರ್ಚ್ ನಿಂದ ಮೇ ವರೆಗೆ ಗಿರಿಧಾಮಗಳು ತಂಪಾಗಿರುತ್ತವೆ. ಇನ್ನೂ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್, ಮೊಬೈಲ್ ಫೋನ್ ಜೊತೆಗೆ
ಸ್ವಲ್ಪ ಹಣವನ್ನು ತೆಗೆದುಕೊಂಡು ಹೋಗುವುದು ಉತ್ತಮ. ಋತುವಿಗೆ ಅನುಗುಣವಾಗಿ ಉಡುಗೆ ತೊಡುಗೆಗಳು, ವಸ್ತುಗಳು ಮತ್ತು ಸಲಕರಣೆಗಳನ್ನು (ಕೊಡೆ, ಜಾಕೆಟ್, ಮೊಬೈಲ್ ಚಾರ್ಜರ್, ಸ್ನಾಕ್ಸ್, ಕುರುಕಲು ತಿಂಡಿಗಳು ಇತರೆ) ತೆಗೆದುಕೊಂಡು ಹೋಗುವುದು. ಅಗತ್ಯವಿರುವ ಓಷಧಿ ಮತ್ತು ಮಾತ್ರೆಗಳನ್ನು ಬ್ಯಾಗಿನಲ್ಲಿ ಇರಿಸಿಕೊಳ್ಳುವುದು ಉತ್ತಮ.
ವಿವಿಧ ಪ್ರವಾಸೋದ್ಯಮ ಚಟುವಟಿಕೆಗಳ ಮೂಲಕ ಜನರಿಗೆ ಪ್ರವಾಸೋದ್ಯಮದ ಬಗ್ಗೆ ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ. ಅಲ್ಲದೆ ಈ ಪ್ರವಾಸೋದ್ಯಮ ಎಂಬುದು ಬೇರೆ ಬೇರೆ ಸಂಸ್ಕೃತಿ, ಭಾಷೆ, ಆಹಾರ ಪದ್ದತಿ, ಉಡುಗೊ ತೊಡುಗೆ, ಆಚರಣೆ, ಧರ್ಮಗಳ ಬಗ್ಗೆ ತಿಳಿದುಕೊಳ್ಳಲು ಇರುವ ಅವಕಾಶವಾಗಿದೆ. ಜನರು ತಮ್ಮ ಅಂತಸ್ತು, ಜಾತಿ ಮತ ಭೇದಗಳನ್ನು ಮರೆತು ಎಲ್ಲರೊಂದಿಗೆ ಸ್ನೇಹಯುತವಾಗಿ ಬೆರೆಯುತ್ತಾರೆ. ಹೀಗಾಗಿ ಪ್ರವಾಸೋದ್ಯಮ ಇಂದು ಇಷ್ಟು ಬೆಳೆಯಲು ಕಾರಣವಾಯಿತು. ಇದರಿಂದ ಸೇವಾ ವಲಯಕ್ಕೆ ಹೆಚ್ಚಿನ ಆದಾಯ ಬರುವುದು. ದೇಶದ ವ್ಯಾಪಾರದ ಜೊತೆಗೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿಸುವಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ. ಕಳೆದ ಎರಡು ವರ್ಷಗಳ ಕಾಲದಲ್ಲಿ ಕೋವಿಡ್ ಹಾವಳಿಯಿಂದ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದಿದ್ದೆ. ಅಲ್ಲದೇ ಪ್ರವಾಸಿ ತಾಣಗಳು ಪ್ರವಾಸಿಗರು ಇಲ್ಲದೇ ಬಣಗುಡುತ್ತಿವೆ. ಒಟ್ಟಿನಲ್ಲಿ ಪ್ರವಾಸೋದ್ಯಮ ಮತ್ತೆ ಮೊದಲ ರೀತಿಯಲ್ಲಿ ಬೆಳೆಯಬೇಕಾಗಿದೆ.
- ನಾಗಪ್ಪ ಕೆ ಮಾದರ
ಹಾಲಕುಸುಗಲ್ ನವಲಗುಂದ ಧಾರವಾಡ