ಆನೆಕಾಲು ರೋಗ ಸಮೀಕ್ಷೆ: 154 ಜನರ ರಕ್ತ ಲೇಪನ ಸಂಗ್ರಹ
ಮುದ್ದೇಬಿಹಾಳ 16: ಆನೆಕಾಲು ರೋಗವು ಪೈಲೇರಿಯಾ ಸೊಂಕುವುಳ್ಳ ಕ್ಯೂಲೆಕ್ಸ್ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಬಹು ಮುಖ್ಯವಾಗಿ ನಾವು ವಾಸಿಸುವ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಿದೆ. ರೋಗದ ನಿಯಂತ್ರಣಕ್ಕಾಗಿ ಹಾಗೂ ರೋಗಿಗಳ ಪತ್ತೆ ಮಾಡುವುದು ಅತ್ಯಂತ ಕಷ್ಟಕರವಾಗಿದ್ದು, ಆನೆಕಾಲು ರೋಗದ ಪತ್ತೆಗಾಗಿ ರಾತ್ರಿ ವೇಳೆಯಲ್ಲಿಯೇ ರಕ್ತದ ಮಾದರಿ ಸಂಗ್ರಹಿಸಬೇಕಾಗುತ್ತದೆ ಆರೋಗ್ಯ ಇಲಾಖೆಯ ನಿರ್ದೇಶನದಂತೆ ತಾಲೂಕಿನಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರವಾರು ಸಮೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ನೀರೀಕ್ಷಣಾಧಿಕಾರಿ ಎಮ್ ಎಸ್ ಗೌಡರ ಹೇಳಿದರು.
ತಾಲೂಕಿನ ಕೋಳೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಆನೇಕಾಲ ರೋಗ ಹರಡುವಿಕೆಯ ಕುರಿತು ಪತ್ತೆ ಹಚ್ಚಲು ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಡವಾಗಿ ಕಾಣಿಸಿಕೊಳ್ಳುವ ಸೋಂಕು: ಆನೆಕಾಲು ರೋಗದವರಿಗೆ ಕಚ್ಚಿದ ಸೊಳ್ಳೆ, ಆರೋಗ್ಯವಂತರಿಗೆ ಕಚ್ಚಿದರೂ ರೋಗ ಹರಡುತ್ತದೆ. ಈ ರೋಗವು ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಸೊಳ್ಳೆ ಕಚ್ಚಿ 5 ರಿಂದ 7 ವರ್ಷಗಳವರೆಗೆ ಸೋಂಕಿರುವುದು ಕಾಣುವುದಿಲ್ಲ. ಮೊದಲ ಹಂತದಲ್ಲಿ ಆಗಾಗ್ಗೆ ಜ್ವರ ಕಾಣಿಸಿಕೊಳ್ಳುತ್ತದೆ. ಹಂತ ಹಂತವಾಗಿ, ಕಾಲು, ಕೈ, ವೃಷಣ, ಸ್ತನಗಳಲ್ಲಿ ಊತ ಕಂಡು ಬರುತ್ತಿರುತ್ತದೆ. ರಕ್ತ ಪರೀಕ್ಷೆಯಲ್ಲಿ ಆನೆಕಾಲು ರೋಗದ ರೋಗಾಣು ಪತ್ತೆಯಾದಲ್ಲಿ ಅದನ್ನು ಡಿಇಸಿ ಮಾತ್ರೆಗಳ ಮೂಲಕ ನಿಯಂತ್ರಿಸಬಹುದು. ಮೊದಲ ಆರು ದಿನಗಳು ಮಧ್ಯ ಒಂದು ದಿನ ಬಿಟ್ಟು ನಂತರ ಆರು ದಿನಗಳ ಕಾಲ ಚಿಕಿತ್ಸೆ ನೀಡಲಾಗುತ್ತದೆ. ಒಟ್ಟು 13 ದಿನಗಳ ಕಾಲ ರೋಗಿಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಇದಕ್ಕಾಗಿ ಶಿಬಿರಗಳನ್ನು ಆಯೋಜಿಸಿ, ರೋಗಿಗಳನ್ನು ಗುರುತಿಸುವ ಕಾರ್ಯ ಮಾಡಲಾಗುತ್ತಿದೆ. ಈ ವೇಳೆ ರೋಗಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ ಈ ಕಾರ್ಯಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ತಂಗಡಗಿ ಸಿಬ್ಬಂದಿಗಳು ಕೋಳೂರ ಗ್ರಾಮದಲ್ಲಿ ರಾತ್ರಿ 8:30 ರಿಂದ ಮಧ್ಯರಾತ್ರಿ 12 ರತನಕ ಪರೀಕ್ಷೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸುಮಾರು 154 ಜನರ ರಕ್ತ ಲೇಪನಗಳನ್ನು ಸಂಗ್ರಹಿಸಿ ಅವುಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ತಲುಪಿಸಲಾಯಿತು. ಈ ಸಮೀಕ್ಷಾ ಕಾರ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಮಮ್ಮದ್ ರಫೀಕ್ ನಾಗರಳ ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ಬಿ ಎಸ್ ಶಿವಯೋಗಿಮಠ, ಎಸ್ ಐ ಕಮಲಪ್ಪನವರ ಐ ಬಿ ಹೂಗಾರ ಸಿ ಜಿ ಬಿದರಕುಂದಿ ಇಸ್ಮಾಯಿಲ್ ವಾಲಿಕಾರ ಎಸ್ ಆರ್ ಸಜ್ಜನ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದು ಕಾರ್ಯನಿರ್ವಹಿಸಿದರು