ರಾಜ್ಯ

ಬೆಂಗಳೂರಿನಲ್ಲಿ ಕಲರಿಪಯಟ್ಟು ಕಲಿಯುತ್ತಿರುವ ವೇಲ್ಸ್‌ನ ಎಂಟು ಮಂದಿ

ಬೆಂಗಳೂರಿನಲ್ಲಿ ಕಲರಿಪಯಟ್ಟು ಕಲಿಯುತ್ತಿರುವ ವೇಲ್ಸ್‌ನ ಎಂಟು ಮಂದಿ

ಬೆಂಗಳೂರು, ನ. 22 : ಭಾರತ ಮತ್ತು ವೇಲ್ಸ್ ನಡುವಿನ ಸಾಂಸ್ಕೃತಿಕ ವಿನಿಮಯದ ಭಾಗವಾಗಿ, ವೇಲ್ಸ್‌ನ ಎಂಟು ಮಂದಿ ಬೆಂಗಳೂರಿನ ಆಯೋಧನ ಕಲರಿಪಯಟ್ಟು ಗುರುಕುಲದಲ್ಲಿ ಕೇರಳದ ಪಾರಂಪರಿಕ ಸಮರಕಲೆ ಕಲರಿಪಯಟ್ಟುವಿನ ಎರಡು ವಾರಗಳ ತರಬೇತಿ ಪಡೆಯುತ್ತಿದ್ದಾರೆ.

ರೆಕ್ಸಮ್ ಮೂಲದ ಪಾಲ್ಲಂ ಆರ್ಟ್ಸ್ ಸಂಸ್ಥೆಯು ಗುರುಕುಲದ ಸಹಯೋಗದಲ್ಲಿ ಈ ತರಬೇತಿಯನ್ನು ಆಯೋಜಿಸಿದೆ. ವೇಲ್ಸ್ ಸರ್ಕಾರದ ಅಂತರರಾಷ್ಟ್ರೀಯ ಕಲಿಕಾ ವಿನಿಮಯ ಕಾರ್ಯಕ್ರಮವಾದ ‘ಟೈತ್’ ಇದಕ್ಕೆ ಬೆಂಬಲ ನೀಡಿದೆ. ಭಾಗವಹಿಸುವವರು ಪಾರಂಪರಿಕ ಕಲರಿಪಯಟ್ಟು ಪಟುಗಳಿಂದ ನೇರವಾಗಿ ತರಬೇತಿ ಪಡೆಯುತ್ತಿದ್ದು, ಚಲನೆಯ ತಂತ್ರಗಳು, ಸಮರಕಲೆಯ ತತ್ತ್ವ ಮತ್ತು ಅದರ ಸಾಂಸ್ಕೃತಿಕ ಬೇರುಗಳನ್ನು ಅರಿಯುತ್ತಿದ್ದಾರೆ.

ನವೆಂಬರ್ 21ರಂದು ಗುರುಕುಲದಲ್ಲಿ ನಡೆದ ಸಾಂಪ್ರದಾಯಿಕ ‘ಕಚ್ಚಕೆಟ್ಟು’ ಸಮಾರಂಭದಲ್ಲಿ ವೃತ್ತಿಪರ ಕಲರಿಪಯಟ್ಟು ಪಟುಗಳು, ಗುರುಕುಲದ ವಿದ್ಯಾರ್ಥಿಗಳು ಹಾಗೂ ವೇಲ್ಸ್‌ನಿಂದ ಬಂದವರು ಕಲಾಪ್ರದರ್ಶನ ನೀಡಿದರು.

“ಕಲೆ ಮತ್ತು ಸಂಸ್ಕೃತಿಗೆ ಭೌಗೋಳಿಕ ಗಡಿಗಳಿಲ್ಲ. ಕಲಿಯುವ, ತಮ್ಮನ್ನು ಅಭಿವ್ಯಕ್ತಪಡಿಸುವ ಮತ್ತು ಪರಸ್ಪರ ಬೆರೆಯುವ ಬಯಕೆ ಎಲ್ಲ ಸಂಸ್ಕೃತಿಗಳ ಜನರಿಗೂ ಸಾಮಾನ್ಯವಾಗಿದೆ” ಎಂದು ಆಯೋಧನ ಕಲರಿಪಯಟ್ಟು ಗುರುಕುಲದ ಸಂಸ್ಥಾಪಕ ಹಾಗೂ ಕಲಾ ನಿರ್ದೇಶಕ ಮನೋಜ್ ಕುಮಾರ್ ಗುರುಕ್ಕಲ್ ಹೇಳಿದರು.

“ಈ ಪರಂಪರೆ ಜೀವಂತವಾಗಿರುವ ನೆಲೆಯಲ್ಲೇ, ಅದನ್ನು ಉಳಿಸಿಕೊಂಡು ಬಂದ ಕಲಾವಿದರಿಂದ ನಾವು ನೇರವಾಗಿ ಕಲಿಯುತ್ತಿದ್ದೇವೆ” ಎಂದು ಪಾಲ್ಲಂ ಆರ್ಟ್ಸ್ ನಿರ್ದೇಶಕಿ ಕೃಷ್ಣಪ್ರಿಯಾ ರಾಮಮೂರ್ತಿ ಹೇಳಿದರು.

ಈ ವಿನಿಮಯದಿಂದ ಭಾರತ ಮತ್ತು ವೇಲ್ಸ್‌ನ ಕಲಾವಿದರ ನಡುವೆ ಹೊಸ ಕಲಾ ಸಹಯೋಗಗಳು ಮೂಡಿಬರಲಿವೆ ಹಾಗೂ ಪರಸ್ಪರ ಕಲಿಕೆಗೆ ಮತ್ತಷ್ಟು ಅವಕಾಶಗಳು ದೊರೆಯಲಿವೆ ಎಂದು ಆಯೋಜಕರು ಆಶಿಸಿದ್ದಾರೆ.

ಸುದ್ದಿ ಓದಿ