ಡ್ರಗ್ಸ್ ಸೇವಿಸಿದರೆ ಜೈಲು ... ಕುಡುಕರನ್ನು ಏಕೆ ಜೈಲಿಗೆ ಕಳುಹಿಸುವುದಿಲ್ಲ...!
ಮುಂಬೈ, ಅ 28: - ಡ್ರಗ್ಸ್ ಸೇವಿಸುವವರನ್ನು ಜೈಲಿಗೆ ಕಳುಹಿಸದೆ, ಅವರು ವ್ಯಸನ ಮುಕ್ತಗೊಂಡು ಸುಧಾರಣೆಗೊಳ್ಳಲು ಸಾಧ್ಯವಾಗುವಂತೆ ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಬೇಕು ಎಂದು ಕೇಂದ್ರ ಸಚಿವ ರಾಂದಾಸ್ ಅಠಾವಳೆ ಅಭಿಪ್ರಾಯಪಟ್ಟಿದ್ದು, ಈ ಸಂಬಂಧ ಕಾನೂನುಗಳಲ್ಲಿ ಬದಲಾವಣೆ ತರಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಆರ್ಥರ್ ರೋಡ್ ಜೈಲಿನಲ್ಲಿರುವ ಶಾರುಖ್ ಪುತ್ರ ಆರ್ಯನ್ ಖಾನ್ ದೃಷ್ಟಿಯಲ್ಲಿರಿಸಿಕೊಂಡು ಅಠಾವಳೆ ಈ ಹೇಳಿಕೆ ನೀಡಿದ್ದಾರೆ.
ಮದ್ಯ ಸೇವಿಸುವವರು ಜೈಲಿಗೆ ಹೋಗುವುದಿಲ್ಲ. ಆದರೆ, ಮಾದಕ ವ್ಯಸನಿಗಳನ್ನು ಮಾತ್ರ ಜೈಲಿಗೆ ಕಳುಹಿಸಲು ಕಾನೂನುಗಳಿವೆ. ಹಾಗಾಗಿ ಕಾನೂನುಗಳನ್ನು ಬದಲಾಯಿಸಬೇಕಾಗಿದೆ ಎಂದು ಹೇಳಿದ್ದಾರೆ.
ಹದಿಹರೆಯದಲ್ಲಿ ಡ್ರಗ್ಸ್ ಸೇವನೆ ಮಾಡುವುದು ಸೂಕ್ತವಲ್ಲ. ಆರ್ಯನ್ ಖಾನ್ ಗೆ ಉಜ್ವಲ ಭವಿಷ್ಯವಿದೆ. ಆರ್ಯನ್ ನನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವಂತೆ ನಾನು ಶಾರುಖ್ಗೆ ಸೂಚಿಸುತ್ತೇನೆ. ಜೈಲಿನಲ್ಲಿರುವುದಕ್ಕಿಂತ .. 1-2 ತಿಂಗಳು ಅಲ್ಲಿದ್ದರೆ ಸುಧಾರಣೆ ಕಂಡುಬಂದು ಮಾದಕ ವ್ಯಸನದಿಂದ ಹೊರಬರಲಿದ್ದಾನೆ. ದೇಶದಲ್ಲಿ ಇಂತಹ ಹಲವು ಕೇಂದ್ರಗಳಿವೆ ಎಂದು ಅಠಾವಳೆ ಹೇಳಿದ್ದಾರೆ
ಈ ತಿಂಗಳ 2 ರಂದು ಮುಂಬೈನಲ್ಲಿ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲೆ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿ ಅದರಲ್ಲಿದ್ದ ಆರ್ಯನ್ ಸೇರಿದಂತೆ ಹಲವರನ್ನು ಬಂಧಿಸಿತ್ತು. ಪ್ರಕರಣದಲ್ಲಿ ಆರ್ಯನ್ ಖಾನ್ ಗೆ ಇನ್ನೂ ಜಾಮೀನು ಸಿಕ್ಕಿಲ್ಲ.