ಉಚಿತ ಪಠ್ಯ ಪುಸ್ತಕ ವಿತರಣಾ ವಾಹನಕ್ಕೆ ಚಾಲನೆ
ಇಂಡಿ 27: ಕೋವಿಡ್ ಕಾರಣದಿಂದ ಶೈಕ್ಷಣಿಕ ರಂಗಕ್ಕೆ ಸಾಕಷ್ಟು ಹಾನಿಯಾಗಿದೆ. : ಸಧ್ಯ ಸರಕಾರ ವಿದ್ಯಾರ್ಥಿಗಳಿಗೆ ಪ್ರಸ್ತುತ ಸಾಲಿನ ಪಠ್ಯಪುಸ್ತಕ ನೀಡಿದ್ದು ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಪುಸ್ತಕಗಳನ್ನು ಬಳಕೆ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ಶೈಕ್ಷಣಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.
ಸೋಮವಾರ ಪಟ್ಟಣದ ಕ್ಷೇತ್ರ ಶಿಕ್ಷಾಧಿಕಾರಿಗಳ ಕಾರ್ಯಾಲಯದ ವತಿಯಿಂದ ತಾಲೂಕಿನ ಎಲ್ಲ ಪ್ರಾಥಮಿಕ ಶಾಲೆಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆಯ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳೆದೆರಡು ವರ್ಷದಿಂದ ವಿದ್ಯಾರ್ಥಿಗಳಿಗೆ ಪುಸ್ತಕಗಳೇ ಲಭಿಸಿಲ್ಲ. ಹೀಗಾಗಿ ಅವರ ಓದು ನಿಂತು ಹೋಗಿದೆ. ಹಲವಾರು ವಿದ್ಯಾರ್ಥಿಗಳು ಹಳೆಯ ವಿದ್ಯಾರ್ಥಿಗಳ ಕಡೆಯಿಂದ ಪಠ್ಯಪುಸ್ತಕಗಳನ್ನು ಪಡೆದುಕೊಂಡು ಓದಿದರೆ ಇನ್ನಿತರ ವಿದ್ಯಾರ್ಥಿಗಳಿಗೆ ಓದಲು ಪುಸ್ತಕಗಳೇ ಸಿಕ್ಕಿಲ್ಲ. ಇಲಾಖೆಯಿಂದ ನಾವು ಸಹ ಹಳೆ ವಿದ್ಯಾರ್ಥಿಗಳ ಪುಸ್ತಕ ಸಂಗ್ರಹ ಮಾಡಿ ಇತರ ವಿದ್ಯಾರ್ಥಿಗಳಿಗೆ ನೀಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಮ್.ಬಂಡಗಾರ ಮಾತನಾಡಿದರು.
ತಾಲೂಕ ಪಠ್ಯ ಪುಸ್ತಕ ನೋಡಲ್ ಅಧಿಕಾರಿ ಎಂ.ಬಿ.ಡೇಂಬ್ರೆ, ಶಿಕ್ಷಣ ಸಂಯೋಜಕರಾದ ಪ್ರಕಾಶ ನಾಯಕ, ಎಸ್.ವೈ.ಬಿರಾದಾರ, ಬಸವರಾಜ ಗೊರನಾಳ, ಆರ್.ಎಸ್.ಸುರಗಿಹಳ್ಳಿ, ಎಸ್.ಎಮ್.ಮಲ್ಲೇಶಗೊಂಡ, ಡಿ.ಎಸ್.ಕಣಮಸ, ಮಂಜುನಾಥ ನಾಯ್ಕೋಡಿ ಹಾಗೂ ಸಿದ್ದಣ್ಣ ಹಿಪ್ಪರಗಿ ಉಪಸ್ಥಿತರಿದ್ದರು.