ಬಳ್ಳಾರಿ

ಗುರುಕುಲ ಪುನಶ್ಚೇತನಕ್ಕೆ ಚಾಲನೆ

ಗುರುಕುಲ ಪುನಶ್ಚೇತನಕ್ಕೆ ಚಾಲನೆ

ರಂಭಾಪುರಿ ಪೀಠ (ಬಾಳೆಹೊನ್ನೂರು): ಪ್ರಾಚೀನ ಕಾಲದಲ್ಲಿದ್ದ ಗುರುಕುಲ ವ್ಯವಸ್ಥೆ ಇಂದಿನ ದಿನಗಳಲ್ಲಿ ಬಹಳ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಶ್ರೀ ಜಗದ್ಗುರು ರಂಭಾಪುರಿ ಪೀಠದ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಪುನಶ್ಚೇತನಗೊಳಿಸುವ ಸಂಕಲ್ಪದಿಂದ ನೂತನ ಕುಲಪತಿಗಳನ್ನು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ನಿಯುಕ್ತಿಗೊಳಿಸಿದರು. 

ಅವರು ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಪುನಶ್ಚೇತನಗೊಳಿಸಲು ಸಂಕಲ್ಪಿಸಿ ಆಶೀರ್ವಚನ ನೀಡುತ್ತಿದ್ದರು.  

ಪೂರ್ವಕಾಲದ ಗುರುಕುಲಗಳು ಭಾರತೀಯ ಸಂಸ್ಕೃತಿ ಮತ್ತು ಆದರ್ಶಗಳನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದವು. ಬ್ರಿಟಿಷರ ದಬ್ಬಾಳಿಕೆ ಮತ್ತು ಮೆಕಾಲೆ ಅಧಿಕಾರಿಗಳಿಂದ ಇಂಗ್ಲೀಷ ಶಿಕ್ಷಣಕ್ಕೆ ಒತ್ತುಕೊಟ್ಟು ಗುರುಕುಲ ಶಿಕ್ಷಣ ವ್ಯವಸ್ಥೆಯನ್ನು ಕೆಡಿಸಿದರು. ಇದರಿಂದ ಉತ್ಕೃಷ್ಟ ಸಂಸ್ಕೃತಿ ಧರ್ಮದ ಉದಾತ್ತವಾದ ಉದ್ದೇಶಗಳಿಗೆ ತೊಂದರೆಯಾಗಿದ್ದನ್ನು ಕಾಣುತ್ತೇವೆ. ಗುರುಕುಲ ಶಿಕ್ಷಣದಿಂದ ಸಂಸ್ಕಾರ, ಸದ್ವಿಚಾರ, ಪರೋಪಕಾರ, ಸೇವಾ ಮನೋಭಾವ ಬೆಳೆಸಲು ಸಹಕಾರಿಯಾಗುತ್ತದೆ. ಈ ಸದುದ್ದೇಶದಿಂದ ಶ್ರೀ ರಂಭಾಪುರಿ ಪೀಠದಲ್ಲಿ ಕಳೆದ 25 ವರುಷಗಳಿಂದ ಸ್ಥಾಪಿತಗೊಂಡು ಮುನ್ನಡೆಯುತ್ತಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲಕ್ಕೆ ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಗಂವಾರ ಹಿರೇಮಠದ ವೇದ ವಿದ್ವಾನ್ ವಿರೂಪಾಕ್ಷ ದೇವರನ್ನು ನಿಯುಕ್ತಿಗೊಳಿಸಿ ಶಾಲು ಹೊದಿಸಿ ಫಲ ಪುಷ್ಪವಿತ್ತು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಗುರುಕುಲದ ಕುಲಪತಿ ವಿರೂಪಾಕ್ಷ ದೇವರು ಮಾತನಾಡಿ ಶ್ರೀ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನದಂತೆ ಗುರುಕುಲಕ್ಕೆ ಕಾಯಕಲ್ಪ ಕಲ್ಪಿಸಿಕೊಡುವ ಕಾರ್ಯ ಮಾಡುವೆ. ನನ್ನಲ್ಲಿರುವ ವಿದ್ಯೆಯನ್ನು ಗುರುಕುಲ ಸಾಧಕರಿಗೆ ಬೋಧಿಸುವೆ ಎಂದರು.  

ಈ ಸಂದರ್ಭದಲ್ಲಿ ದೇವಾಪುರ ಶಿವಮೂರ್ತಿ ಶಿವಾಚಾರ್ಯರು, ತೊನಸನಹಳ್ಳಿ ರೇವಣಸಿದ್ಧ ಶಿವಾಚಾರ್ಯರು, ಮಳಲಿ ಸಂಸ್ಥಾನದ ಡಾ.ನಾಗಭೂಷಣ ಶಿವಾಚಾರ್ಯರು, ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯರು ಗುರುಕುಲದ ಬಗೆಗೆ ಮಾತನಾಡಿದರು. ಶ್ರೀ ಪೀಠದ ಆಡಳಿತಾಧಿಕಾರಿ ಎಸ್‌.ಬಿ.ಹಿರೇಮಠ ಸ್ವಾಗತಿಸಿದರು. ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರಸ್ವಾಮಿ ಅವರಿಂದ ಭಕ್ತಿಗೀತೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ಸ್ವಾಗತಿಸಿದರು. 


ಸುದ್ದಿ ಓದಿ