ಹನಿ ನೀರಾವರಿಯಿಂದ ಹಲವು ಲಾಭವಿದೆ: ನಾಯ್ಕ
ಲೋಕದರ್ಶನ ವರದಿ
ಮುಂಡಗೋಡ:ಬೆಳೆಗೆ ಅವಶ್ಯವಿರುವ ನೀರಿನ ಪ್ರಮಾಣ ಅರಿತುಕೊಂಡು ಸರ್ಕಾರ ನೀಡುವ ಸಹಾಯಧನ ಬಳಸಿ ಪ್ರತಿಯೊಬ್ಬರೂ ಹನಿ ನೀರಾವರಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಅಣ್ಣಪ್ಪ ನಾಯ್ಕ ಹೇಳಿದರು.
ತಾಲೂಕಿನ ಪಾಳಾ ಗ್ರಾಮದ ಸೊಸೈಟಿಯಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್.ಸೆಟಿ, ಪಾಳಾದ ರೈತ ಉತ್ಪಾದಕರ ಕಂಪನಿ ಲಿ., ದೊಡ್ಡ ಪ್ರಮಾಣದ ವ್ಯವಸಾಯ ಸೇವಾ ಸಹಕಾರಿ ಸಂಘ, ಶಿರಸಿ ಸ್ಕೊಡ್ವೇಸ್ ಸಂಸ್ಥೆ, ಹುಬ್ಬಳ್ಳಿಯ ಜೈನ್ ಇರಿಗೇಷನ್ ಕಂಪನಿ ಲಿ. ಮತ್ತು ತೋಟಗಾರಿಕಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಜರುಗಿದ ಡ್ರಿಪ್ ಇರಿಗೇಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹನಿ ನೀರಾವರಿಯಿಂದ ಹಲವು ಲಾಭವಿದೆ ಎಂದರು. ಪಾಳಾ ಕಂಪನಿಯ ನಿರ್ದೇಶಕ ಮಹೇಶ ಹೊಸಕೊಪ್ಪ ಮಾತನಾಡಿ ಇಂದು ಜಗತ್ತಿನ ಮುಂದುವರಿದ ದೇಶಗಳ ಜೊತೆ ಭಾರತ ಸ್ಪರ್ಧೆಗಿಳಿದಿದ್ದು ಮಾಹಿತಿ ಮತ್ತು ತಂತ್ರಜ್ಞಾನ ಅರಿತು ಕಾಲ-ಕಾಲಕ್ಕೆ ಕೃಷಿ ಹಾಗೂ ತೋಟಗಾರಿಕೆಯಲ್ಲಿ ಮುಂದುವರಿಯಬೇಕು ಎಂದರು. ಜೈನ್ ಇರಿಗೇಶನ್ ಕಂಪನಿಯ ಗೀರೀಶ ಮಾತನಾಡಿ ಅತಿಯಾದ ನೀರಿನ ಬಳಕೆ ಯಾವುದೆ ಬೆಳೆಗೆ ಪೂರಕವಾಗಲಾರದು. ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬೆಳೆಯಲು ಹಾಗೂ ವೈಜ್ಞಾನಿಕ ನೀರಿನ ಬಳಕೆಯಲ್ಲಿ ಹನಿ ನೀರಾವರಿ ಹೆಚ್ಚಿನ ಮಹತ್ವ ವಹಿಸುತ್ತದೆ ಎಂದರು. ಪಿಪಿಟಿ ಸಾಕ್ಷ್ಯಚಿತ್ರ ಸಮೇತ ಅವರು ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು.
ಪಾಳಾ ಕಂಪನಿಯ ಅಧ್ಯಕ್ಷ ರಮೇಶ ಜಿಗಳೇರ ಪ್ರಾಸ್ತಾವಿಕ ಮಾತನಾಡಿ 600 ಜನ ಸದಸ್ಯರಿರುವ ರೈತ ಕಲ್ಯಾಣ ಉದ್ಘಾಟನೆಗೊಂಡು ಮಾರುಕಟ್ಟೆಯತ್ತ ಹೆಜ್ಜೆ ಹಾಕಿದೆ. ಗೊಬ್ಬರ, ಮೆಡಿಸಿನ್ ಮತ್ತು ಬಿತ್ತನೆ ಬೀಜಗಳನ್ನು ರೈತರಿಗೆ ಪೂರೈಸಲಾಗುತ್ತಿದೆ. ಆಗಾಗ ಅವಶ್ಯಕ ತರಬೇತಿಯನ್ನು ರೈತರಿಗೆ ನೀಡಲಾಗುತ್ತಿದೆ ಎಂದರು. ಲಕ್ಷ್ಮೀಕಾಂತ್ ಸ್ವಾಗತಿಸಿದರು. ಶಿವಾನಂದ ದುಂಡಿಗೌಡ್ರ ನಿರೂಪಿಸಿದರು. ಗ್ರಾಮೀಣಾಭಿವೃದ್ಧಿ ಅಧಿಕಾರಿ ಮಹಾಬಲೇಶ್ವರ ನಾಯ್ಕ ವಂದಿಸಿದರು.