ಹಗರಿಬೊಮ್ಮನಹಳ್ಳಿ

ಕೃಷಿ ಹೊಂಡದಲ್ಲಿನ ಚರಂಡಿ ನೀರೆತ್ತಲು ಮೋಟಾರ್ ಮೋರೆ ಹೋದ ರೈತ

ಕೃಷಿ ಹೊಂಡದಲ್ಲಿನ ಚರಂಡಿ ನೀರೆತ್ತಲು ಮೋಟಾರ್ ಮೋರೆ ಹೋದ ರೈತ

ಆಧಿಕಾರಿ,ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ|ಸಮಸ್ಯೆಗಳಿಗೆ ಸ್ಫಂದಿಸದಿದ್ದರೆ ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ ಎಚ್ಚರಿಕೆ

ಹಗರಿಬೊಮ್ಮನಹಳ್ಳಿ 25: ತಾಲೂಕಿನ ಏಣಿಗಿ ಗ್ರಾಮದಲ್ಲಿ ಚರಂಡಿಗಳ ನೀರು ಸರಾಗವಾಗಿ ಹರಿದು ಗ್ರಾಮದ ಪುಣಿಕೇರಿ ಹುಲುಗಣ್ಣನವರ ದಾಳಂಬರಿ ಬೆಳೆ ಬೆಳೆಯುತ್ತಿರವ ಹೊಲದ ಕೃಷಿ ಹೊಂಡಕ್ಕೆ ಸೇರುತ್ತಿದೆ,ಇದನ್ನು ಕಂಡು ರೈತ ಹುಲುಗಣ್ಣ ಹತ್ತು ಹಲವುಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಮಾತ್ರ ಕಿವಿಗೊಡುತ್ತಿಲ್ಲ ಇದರಿಂದ ನಿರಾಸೆಗೊಂಡ ರೈತ ಸ್ವತಃ ತಮ್ಮ ಡಿಸೇಲ್ ಮೋಟಾರ್ ಬಳಸಿ ಕೊಳಚೆ ನೀರನ್ನು ಬೇರೆಡೆ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು ಅಧಿಕಾರಿಗಳು ಇದರ ಗೋಜಿಗೆ ಹೋಗದಿರುವುದು ದುರಂತವೇ ಸರಿ.

ಚರಂಡಿ ಜೋಡಣೆಗೆ ಅಧಿಕಾರಿಗಳ ಹಿಂದೇಟು: ಸದ್ಯ ಗ್ರಾಮದಲ್ಲಿ ಬಳಸಿ ಬಿಟ್ಟ ಕೊಳಚೆ ನೀರಿ ಸೇರುತ್ತಿರುವ ಸ್ಥಳದಿಂದ ಅನತಿ ದೂರದಲ್ಲಿಯೇ ಮಗದಂದು ಚರಂಡಿ ಇದ್ದು ಶೇಖರಣೆಯಾಗುತ್ತಿರವ ನೀರನ್ನು ಸರಾಗವಾಗಿ ಸಾಗುವಂತೆ ಮಾಡಲು ಪರ್ಯಾಯ ವ್ಯೆವಸ್ಥೆಯಾಗಿ ಚರಂಡಿಗಳ ಜೋಡಣೆ ಕಾರ್ಯ ಮಾಡಿದರೆ ಸೂಕ್ತವೆಂದು ಅಲ್ಲಿನ ನಿವಾಸಿಗಳ ವಾದಕ್ಕೆ ಅಧಿಕಾರಿಗಳ ಸೇರಿದಂತೆ ಜನಪ್ರತಿನಿಧಿಗಳು ಹಿಂದೇಟು ಹಾಕುತ್ತಿದ್ದಾರೆ.

ಮೋಟಾರ್ ವ್ಯವಸ್ಥೆ: ಕೊಳಚೆ ನೀರು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಪ್ರಮಾಣದಲ್ಲಿ ಶೇಖರಣೆಯಾಗುತ್ತಿದ್ದ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದು ಬೇಸಗೊಂಡ ರೈತ ಹುಲುಗಪ್ಪ ಸ್ವಂತ ಖರ್ಚಿನಲ್ಲಿ ಮೋಟರ್ ವ್ಯೆವಸ್ಥೆ ಮಾಡಿಕೊಂಡು ಕೊಳಚೆ ನೀರನ್ನು ಸಾಗಿಸುವ ಕೆಲಸವನ್ನು ಕಳೆದ 2ವರ್ಷಗಳಿಂದ ಮಾಡುತ್ತಿದ್ದು ಅಧಿಕಾರಿಗಳು ಇತ್ತ ಗಮನ ಹರಿಸದಿರುವುದು ಶೋಚನೀಯ.

ಸ್ವಲ್ಪ ಹೊಲ ಬೀಳು: ಕೊಳಚೆ ನೀರು ಕೃಷಿ ಹೊಂಡದಲ್ಲಿ ಶೇಖರಣೆಯಾಗುತ್ತಿದ್ದು, ಹೊಂಡದ ಪಕ್ಕದ ಸುಮಾರು 100ಅಡಿ ಜಾಗವನ್ನು ಯಾವುದೆ ಬೆಳೆ ಬಿತ್ತದೆ ಬೀಳು ಬಿಟ್ಟಿರುವುದನ್ನು ಕಾಣಬಹುದು, ಮುಂದಿನ ದಿನಗಳಲ್ಲಿ ಈ ಕೊಳಚೆ ನೀರು ಹೊಲಕ್ಕೆಲ್ಲ ಪಸರಿಸಿದರೆ ಸಂಪೂರ್ಣ ಹೊಲವು ಫಲವತ್ತತೆಯನ್ನು ಕಳೆದುಕೊಳ್ಳುವುದರಲ್ಲಿ ಎರೆಡು ಮಾತಿಲ್ಲ.

ಆರೋಗ್ಯದ ಮೇಲೆ ದುಷ್ಪರಿಣಾಮ: ಗ್ರಾಮದ ಹತ್ತಾರು ಮನೆಗಳ ಕೊಳಚೆ ನೀರು ಕೃಷಿ ಹೊಂಡಕ್ಕೆ ಸೇರುವುದು ಒಂದೆಡೆಯಾದರೆ ಇನ್ನು ಹತ್ತಾರು ಕುಟುಂಬಗಳು ವಾಸಿಸುವ ಜನನಿಬೀಡ ಸ್ಥಳಕ್ಕೂ ನುಗ್ಗುತ್ತಿದ್ದು ಮುಂದಿನ ದಿನಗಳಲ್ಲಿ ಗ್ರಾಮಸüರಿಗೆ ರೋಗಗಳ ಕೂಪಕ್ಕೆ ತಳ್ಳುಲು ಸಜ್ಜಾಗಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ.

ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ : ಗ್ರಾಮಸ್ಥರು ಅನೇಕ ಬಾರಿ ಹಂಪಸಾಗರ ಗ್ರಾಮ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ಈ ವಿಷಯ ತಿಳಿಸಿದರೂ ಗಮನಹರಿಸದೇ,ಕೇವಲ ಹಬ್ಬ ಹರಿದಿನಗಳಲ್ಲಿ ನಿಲುಕಿದಷ್ಟು ಸ್ವಚ್ಛತೆಯನ್ನು ಮಾಡುತ್ತಾ ಕಾಲ ಕಳೆದಿದ್ದಾರೆ ಎಂದು ಇಲ್ಲಿನ ರೈತ ಮುಖಂಡ ಮಾಬುಸಾಬ್ ಪತ್ರಿಕೆಗೆ ತಿಳಿಸಿದ್ದಾರೆ.

2019-20ರಲ್ಲೇ ಸಿಸಿ ಚರಂಡಿಗೆ ಅಸ್ತು : 2019-20ರ ಅವಧಿಯಲ್ಲಿಯೇ ಸಿಸಿ ಚರಂಡಿ ನಿರ್ಮಿಸುವ ಕಾರ್ಯಕ್ಕೆ ನರೇಗಾ ಯೋಜನೆಯಡಿ ಹಸಿರು ನಿಶಾನೆ ಸಿಕ್ಕರೂ 2021ಕ್ಕೆ ಕಾಲಿಟ್ಟರೂ ಕಾಣುತ್ತಿಲ್ಲ ಕಾಮಗಾರಿ.

ಒಟ್ಟಾರೆಯಾಗಿ ಹಂಪಸಾಗರ ಗ್ರಾಮ ಪಂಚಾಯತಿ ಏಣಿಗಿ ಗ್ರಾಮವು ಹಲವಾರು ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಜಾತ್ರೆ,ಹಬ್ಬ ಹರಿದಿನಗಳಲ್ಲಿ ಮಾತ್ರ ಸ್ವಚ್ಛತೆಯ ಕಾರ್ಯ ಕಂಡುಬರುತ್ತದೆ ಎಂದು ಸಾರ್ವಜನಿಕರು ಪತ್ರಿಕೆಗೆ ತಿಳಿಸಿದ್ದಾರೆ.ಗ್ರಾಮ ಪಂಚಾಯತಿ ಅಭಿವೃಧ್ಧಿ ಅಧಿಕಾರಿಗೆ ಕೊಳಚೆ ನೀರಿಂದ ತುಂಬಿದ ಕೃಷಿ ಹೊಂಡದ ವಿಷಯವೇ ತಿಳಿದಿಲ್ಲವೆಂಬ ಹಾರಿಕೆ ಉತ್ತರ ವಿಪರ್ಯಾಸವೆ ಸರಿ.ಇನ್ನಾದರೂ ಜನ ಪ್ರತಿನಿಧಿಗಳು,ಅಧಿಕಾರಿಗಳು ಇತ್ತ ಚಿತ್ತ ಹರಿಸುವರೇ ಕಾದು ನೋಡಬೇಕಿದೆ.

ಕಳೆದ ಕೆಲ ದಿನಗಳ ಹಿಂದಷ್ಟೆ ಗ್ರಾಮದ ಸಂಪೂರ್ಣ ಸ್ವಚ್ಛತೆ ಮಾಡಲಾಗಿದೆ,ಚರಂಡಿ ನೀರಿನಿಂದ ಕೃಷಿಹೊಂಡ ತುಂಬಿದ ವಿಷಯ ತಿಳಿದಿಲ್ಲ,1ನೇ ವಾರ್ಡಿನಲ್ಲಿ ನರೇಗಾ ಯೋಜನೆಯಡಿ ಸಿಸಿ ಚರಂಡಿ ನಿರ್ಮಿಸುವಂತೆ 2019-20ರಲ್ಲೇ ಅನುಮೋದನೆ ಸಿಕ್ಕಿದೆ ಹಿಂದಿನ ಪಿಡಿಒ ಕಾರ್ಯಗತಗೊಳಿಸದ ಕಾರಣ ಕಾಮಗಾರಿ ಶುರುವಾಗಿಲ್ಲ,ಒಂದೆರಡು ದಿನಗಳಲ್ಲಿ ಸಿಸಿ ಚರಂಡಿ ನಿರ್ಮಿಸುವ ಕಾರ್ಯಕ್ಕೆ ಮುಂದಾಗುವೆ.

ಶಾಂತನಗೌಡ.

ಪಿಡಿಒ, ಹಂಪಸಾಗರ.

ಗ್ರಾಮದಲ್ಲಿನ ಕೆಲ ಚರಂಡಿಯ ನೀರು ಹರಿದು 1ನೇ ವಾರ್ಡಿನ ಖಾಲಿ ಜಾಗದಲ್ಲಿ ನಿಲ್ಲುತ್ತಿರುವ ವಿಷಯ ಗಮನಕ್ಕೆ ಬಂದಿದೆ, ಮುಂದಿನ ಏಪ್ರಿಲ್ ತಿಂಗಳಲ್ಲಿ ಚರಂಡಿಯನ್ನು ನಿರ್ಮಿಸುವ ಕಾರ್ಯ ಅಗಲಿದೆ.

ಹಾಲ ಸಿದ್ದಪ್ಪ ಪೂಜಾರ.

ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಾಧಿಕಾರಿ ಹಗರಿಬೊಮ್ಮನಹಳ್ಳಿ.


ಹಲವಾರು ಕಡೆ ಕಾಮಗಾರಿಗಳನ್ನು ಮಾಡದೇ ಬೋಗಸ್ ಬೀಲ್ ಮಾಡಿಕೊಂಡು ಹಣ ಲಪಟಾಯಿಸಿದ್ದಾರೆ, ಹಣ ಉಳಿತಾಯವಾಗುವ ಕಾಮಗಾರಿಗಳನ್ನು ಮಾಡಲು ಮುಂದಗಿರುವ ಅಧಿಕಾರಿಗಳು ಏಣಿಗಿ ಗ್ರಾಮದ ಚರಂಡಿ ವ್ಯೆವಸ್ಥೆಯನ್ನು ಸರ ಪಡಿಸುವಚಿತೆ ಹಲವು ಬಾರಿ ತಿಳಿಸಿದ್ದೇನೆ ಹಾಗೂ ಗ್ರಾಮ ಸಭೆ ನಡೆದು ಹಲವು ವರ್ಷಗಳೇ ಕಳೆದು ಹೋಗಿವೆ ಕೂಡಲೇ ಇಲ್ಲಿನ ಚರಂಡಿ ವ್ಯೆವಸ್ಥೆಯನ್ನು ಸರಿ ಪಡಿಸಬೇಕು.ಸಮಸ್ಯೆಗಳಿಗೆ ಸ್ಫಂದಿಸದಿದ್ದರೆ ಮುಂದಿನ ದಿನಗಳಲ್ಲಿ ಗ್ರಾ.ಪಂ.ಗೆ ಬೀಗ ಹಾಕಿ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ.

ಮಾಬುಸಾಬ್. 

ಏಣಿಗಿ ಗ್ರಾಮದ ರೈತ ಮುಖಂಡ ಹಸಿರು ಸೇನೆ.

ಸುದ್ದಿ ಓದಿ