ವಿಜಯಪುರ

ಡಾ.ವಿಜಯಕುಮಾರ್ ಬಿ. ಅಜೂರ್ ಮಹಿಳಾ ವಿವಿ ನೂತನ ಕುಲಸಚಿವರಾಗಿ ಅಧಿಕಾರ ಸ್ವೀಕಾರ

ಡಾ.ವಿಜಯಕುಮಾರ್ ಬಿ. ಅಜೂರ್ ಮಹಿಳಾ ವಿವಿ ನೂತನ ಕುಲಸಚಿವರಾಗಿ ಅಧಿಕಾರ ಸ್ವೀಕಾರ

ಲೋಕದರ್ಶನ ವರದಿ

ವಿಜಯಪುರ  ೨೪: ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ.ವಿಜಯಕುಮಾರ್ ಬಿ. ಅಜೂರ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.

ನಿರ್ಗಮಿತ ಕುಲಸಚಿವ ಶಂಕರಗೌಡ ಸೋಮನಾಳ ಅವರು ಅಧಿಕೃತವಾಗಿ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.¯ಕ್ಕಣ್ಣವರ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಡಾ.ವಿಜಯಕುಮಾರ್ ಬಿ. ಅಜೂರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ನೂತನ ಹೊಣೆಗಾರಿಕೆಯಲ್ಲಿ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.

ನೂತನ ಕುಲಸಚಿವರಾದ ಡಾ.ವಿಜಯಕುಮಾರ್ ಬಿ. ಅಜೂರ್ ಅವರಿಗೆ ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವಲ್ಲಿ ಯಶಸ್ಸು ದೊರೆಯಲಿ ಎಂದು ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಗಳಾದ ಪ್ರೊ.ಪಿ.ಜಿ.ತಡಸದ, ಪ್ರೊ.ಓಂಕಾರ ಕಾಕಡೆ, ಪ್ರೊ.ಜಿ.ಜಿ.ರಜಪೂತ, ಪ್ರೊ.ನಾಮದೇವಗೌಡ ಮತ್ತು ಪ್ರೊ.ಸಕ್ಪಾಲ್ ಹೂವಣ್ಣ ಆಶಿಸಿದರು.

ಇದೇ ಸಂದರ್ಭದಲ್ಲಿ ನಿರ್ಗಮಿತ ಕುಲಸಚಿವ ಶಂಕರಗೌಡ ಸೋಮನಾಳ ಅವರನ್ನು ಕುಲಪತಿ, ಮೌಲ್ಯಮಾಪನ ಕುಲಸಚಿವರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದಿಸಿ, ವಿಶ್ವವಿದ್ಯಾಲಯದ ಸೇವೆಗೆ ನೀಡಿದ ಕೊಡುಗೆಗಾಗಿ ಕೃತಜ್ಞತೆ ಸಲ್ಲಿಸಿದರು. ಅವರ ಮುಂದಿನ ಸೇವಾ ಪಯಣ ಯಶಸ್ವಿಯಾಗಲಿ ಎಂದು ಹಾರೈಸಿದರು. 

ಪರಿಚಯ: ನೂತನ ಕುಲಸಚಿವ ಡಾ.ವಿಜಯಕುಮಾರ್ ಬಿ. ಅಜೂರ್ ಅವರು ೨೦೧೪ರ ಬ್ಯಾಚಿನ ಕೆಎಎಸ್ ಅಧಿಕಾರಿಯಾಗಿದ್ದು ಇಂಡಿ ಮತ್ತು ಶಿರಸಿಯಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ವಿಜಯಪುರ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ, ವಿಜಯಪುರ ಜಿಲ್ಲಾ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಮತ್ತು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಆಯಕ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸುದ್ದಿ ಓದಿ