ಡಾ. ವೀರರಾಘವುಲು ಪುಸ್ತಕ ಬಿಡುಗಡೆ
ಬಳ್ಳಾರಿ 21: ಸ್ಥಳೀಯ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಂದ ಶಾರದೆ ಪೂಜಾ ಕಾರ್ಯಕ್ರಮ ಮತ್ತು ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ವೀರರಾಘವುಲು ಅವರು ರಚಿಸಿರುವ ಪರಿಮಾಣಾತ್ಮಕ ವಿಧಾನಗಳು ಎಂಬ ಕೃತಿಯ ಬಿಡುಗಡೆ ಸಮಾರಂಭ ನಡೆಯಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ಹೇಮಣ್ಣ ಅವರು ಪರಿಮಾಣಾತ್ಮಕ ವಿಧಾನಗಳು ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ವಿದ್ಯಾರ್ಥಿಗಳು ಶ್ರಮವಹಿಸಿ ವ್ಯಾಸಂಗವನ್ನು ಮಾಡಿ ಶಿಸ್ತಿನಿಂದ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿರುತ್ತದೆ. ಶ್ರಮಕ್ಕೆ ಯಾವತ್ತು ಬೆಲೆ ಇದ್ದೇ ಇರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಯಾವಾಗಲೂ ಕೆಲಸದಲ್ಲಿ ತೊಡಗುವ ಮೂಲಕ ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ವೀರರಾಘವುಲು ಅವರು ಬರೆದಿರುವ ಪರಿಮಾಣಾತ್ಮಕ ವಿಧಾನಗಳು ಎಂಬ ಕೃತಿಯು ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಆರ್.ಮನೋಹರನ್ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಅರ್ಥಶಾಸ್ತ್ರ ವಿದ್ಯಾರ್ಥಿಗಳು ತಾವು ಕಲಿತ ಶಿಕ್ಷಣವನ್ನು ಉಪಯೋಗ ಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅರ್ಥಶಾಸ್ತ್ರ ವಿಭಾಗದ ಡಾ.ವೀರರಾಘವುಲು, ಡಾ.ಶ್ರೀನಿವಾಸರೆಡ್ಡಿ, ಚನ್ನಬಸವಯ್ಯ ಡಾ.ಟಿ.ವೀರಭದ್ರಪ್ಪ, ವೈ.ಜನಾರ್ಧನರೆಡ್ಡಿ, ರಾಘವೇಂದ್ರ ಮುಂತಾದವರು ಹಾಜರಿದ್ದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.