ಆದಿ ಮಾನವನೇ ಚಿತ್ರಕಲಾ ಪಿತಾಮಹ: ಡಾ.ಸಿದ್ದೇಶ್ವರಿ
ಬಳ್ಳಾರಿ 18: ಭಾಷೆ ಮೊದಲು, ವ್ಯಾಕರಣ ನಂತರ ಎಂಬಂತೆ ಚಿತ್ರ ಮೊದಲು ಕಲೆ ನಂತರ. ಚಿತ್ರಕಲೆಯು ಮಾನವನ ಮೊದಲ ದೃಕ್ ಅಭಿವ್ಯಕ್ತಿಯಾಗಿದೆ. ಮನಸ್ಸಿನ ಆಸರ, ಬೇಸರ, ಆನಂದಗಳ ತೋರಿಸುವ ಮೊದಲು ಮಾಧ್ಯಮ ಚಿತ್ರ. ಮಗು ತೋಚಿದ್ದನ್ನೆಲ್ಲಾ ಗೀಚಿದಾಗಲೇ ಚಿತ್ರ ಮೂಡಿ ಬರುವುದೆಂದು ಸರ್ಕಾರಿ (ಮಾ.ಪು) ಪ್ರೌಢಶಾಲೆಯ ಶಿಕ್ಷಕಿ ಡಾ. ಎ.ಎನ್.ಸಿದ್ದೇಶ್ವರಿ ನುಡಿದರು.
ಬಳ್ಳಾರಿ ತಿಲಕ್ನಗರದಲ್ಲಿನ ಭವಾನಿ ಚಿತ್ರಕಲಾಮಂದಿರದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ 248ನೇ ಮಹಾಮನೆ ಲಿಂಗೈಕ್ಯ ತುಳಜಮ್ಮ ಲಕ್ಷ್ಮಪ್ಪ ಜಾಧವ್ ದತ್ತಿ ಮತ್ತು ಬೆಲ್ಲದ ಚೆನ್ನಪ್ಪ ಚಿತ್ತವಾಡ್ಗಿ ದತ್ತಿ ಕಾರ್ಯಕ್ರಮದಲ್ಲಿ "ಜಾನಪದ ಚಿತ್ರಕಲಾ ಪ್ರಕಾರಗಳು" ಕುರಿತು ಮಾತನಾಡಿದರು.
ಕಾಡು ಮಾನವ ನಾಡಿನ ಸಂಪರ್ಕಕ್ಕೆ ಬಂದಾಗಿನಿಂದ ತನ್ನ ಬದುಕಿನಲ್ಲಿ ಜನ್ಮಜಾತ ಚಿತ್ರಕಲೆಯನ್ನು ಉಳಿಸಿಕೊಂಡು ಬಂದಿದ್ದಾನೆ. ಓದು, ಬರಹ ಬಾರದಿದ್ದ ಕಾಲದಲ್ಲಿ ತನ್ನ ದಿನದ ಬದುಕಿನಲ್ಲಿ ಮನೆಯ ಗೋಡೆಗಳ ಅಲಂಕಾರ, ರಂಗೋಲಿ, ಅಚ್ಚು ಹಾಕುವುದು, ಪಾತ್ರ, ಪಗಡೆ, ಬಟ್ಟೆ ಬರೆಗಳ ಅಲಂಕರಣ ಮತ್ತು ಮದುವೆ ಮುಂತಾದ ವಿಷಯ ಕಾರ್ಯಗಳಲ್ಲಿ ಬಾಸಿಂಗ, ದಂಡೆ, ಮದು ಮಕ್ಕಳ ಮನೆ, ಕಂಬಳಿ ಹಾಸಕ್ಕಿ ಮನೆಗೆ ಚಟ್ ಬಡಿಯುವ ಕಾರ್ಯಗಳು ಜಾನಪದ ಕಲೆಗಳಾಗಿವೆ, ನೈಜ ಮತ್ತು ಚೈತನ್ಯ ಪೂರ್ಣ ಕಲೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಹರಗಿನಡೋಣಿ ಪಂಚವಣ್ಣಿಗಿ ಹಿರೇಮಠದ ಅಧಿಪತಿ ಅಭಿನವ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡುತ್ತಾ, ಜಾನಪದ ಕಲೆಗಳಲ್ಲಿ ರಚನೆ, ಆಕಾರ, ಬಳಸಿದ ಬಣ್ಣಗಳಿಗೆಲ್ಲಾ ವಿಶೇಷ ಅರ್ಥಗಳಿಂದ ಕೂಡಿದ್ದು, ಅವುಗಳೆಲ್ಲಾ ನಮ್ಮ ಧಾರ್ಮಿಕ ಪರಂಪರೆ, ನಂಬಿಕೆಗಳ ಹಿನ್ನೆಲೆಯಲ್ಲಿ ರಚನೆಗೊಂಡಿವೆ ಎಂದರು.
ಅಧ್ಯಕ್ಷತೆಯನ್ನು ಭವಾನಿ ಚಿತ್ರಕಲಾಮಂದಿರದ ಸಂಸ್ಥಾಪಕ ಆರ್.ಎಲ್.ಜಾಧವ್ ವಹಿಸಿದ್ದರು. ಕಲಾ ವಿದ್ಯಾರ್ಥಿ ಮಾಲತೇಶ್ನ ವಚನ ಪ್ರಾರ್ಥನೆಯಿಂದ ಕಾರ್ಯಕ್ರಮ ಆರಂಭವಾಯಿತು. ಮೆಹಬೂಬ್ ಎಂ ಸ್ವಾಗತ ಕೋರಿದರು. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ದತ್ತಿ ಧಾತ್ರಿಗಳನ್ನು ಪರಿಚಯಿಸಿ ಶರಣು ಸಮರ್ಪಣೆ ಮಾಡಿದರು. ಅಮೋಘ ವಚನ ಗಾಯನ ಮಾಡಿದರು. ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಕೂಡ್ಲಿಗಿಯ ನಿವೃತ್ತ ಕಲಾ ಶಿಕ್ಷಕಿ ಭಾರತಿ, ದುರುಗಣ್ಣ ಹಾಗೂ ಚಿತ್ರಕಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.