ಹಗರಿಬೊಮ್ಮನಹಳ್ಳಿ

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ: ಶಾಸಕ ಭೀಮಾನಾಯ್ಕ್‌

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ: ಶಾಸಕ ಭೀಮಾನಾಯ್ಕ್‌

ಹಗರಿಬೊಮ್ಮನಹಳ್ಳಿ 05: ಕ್ಷೇತ್ರದ ಸಮಗ್ರ ಅಭಿವೃಧ್ಧಿಗೆ ಶ್ರಮಿಸಬೇಕೆ ಹೊರತು ಅಭಿವೃಧ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಶಾಸಕ ಎಸ್‌.ಭೀಮಾನಾಯ್ಕ್‌ ಹೇಳಿದರು. 

ತಾಲೂಕಿನ ಅಂಕಸಮುದ್ರ ಗ್ರಾಮದಲ್ಲಿ ನೂತನ ಅಂಬೇಡ್ಕರ್ ಭವನ, ನಾಲ್ಕು ಶಾಲಾ ಕೊಠಡಿ, ಹೈಟೆಕ್ ಶೌಚಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕದ 6ಜಿಲ್ಲೆಗಳಲ್ಲಿಯೇ ಅತಿಹೆಚ್ಚು ಅನುದಾನ ಪಡೆದು, ಕ್ಷೇತ್ರದಲ್ಲಿ 400ಕ್ಕೂ ಹೆಚ್ಚು ಶಾಲಾ ಕೊಠಡಿ ಇತರೆ ಶೈಕ್ಷಣಿಕ ಕಟ್ಟಡಗಳನ್ನು ನಿರ್ಮಿಸಲಾಗಿದೆ, ಶೈಕ್ಷಣಿಕ ಅಭಿವೃಧ್ದಿಯೇ ಮೊದಲ ಗುರಿ. ಈ ನಿಟ್ಟಿನಲ್ಲಿ 107ಕೋಟಿರೂ ಮೊತ್ತದಲ್ಲಿ ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಅಂಕಸಮುದ್ರ ಕೆರೆ ತುಂಬಿಸುವ ಯೋಜನೆಗೆ 1.50ಕೋಟಿ ಸೇರಿ ವಿವಿಧ ಕಾಮಗಾರಿಗಳಿಗೆ ಒಟ್ಟು 5ಕೋಟಿರೂ ಅನುದಾನವನ್ನು ಈ ಗ್ರಾಮಕ್ಕೆ ವಿನಿಯೋಗಿಸಲಾಗಿದೆ. ರಾಜಕೀಯದಲ್ಲಿ ಹಿಂದಿನ ಕಹಿ ಘಟನೆಗಳನ್ನು ಮರೆಯಬೇಕು. ಅಭಿವೃಧ್ದಿ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಶಾಲೆಗಳಲ್ಲಿ ತಲಾ 1ಲಕ್ಷರೂ ಅನುದಾನದಲ್ಲಿ 172 ಶುದ್ದ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಅಂಕಸಮುದ್ರ ಪಕ್ಷಿಧಾಮದ ಅಭಿವೃಧ್ದಿ ಸಿದ್ದರಾಮಯ್ಯ ಸರಕಾರದ ಸಂದರ್ಭದಲ್ಲಿ ಸಚಿವ ರಮನಾಥ ರೈ ಹೆಚ್ಚು ಅನುದಾನ ನೀಡಿ ಇಂದು ಭೂಪಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಕೊರೊನಾ ಮೂರನೇ ಅಲೆ ಹಿನ್ನಲೆಯಲ್ಲಿ ವೇದಿಕೆ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು. 

ಬಿಇಒ ಶೇಖರ​ಪ್ಪ ಹೊರಪೇಟೆ ಮಾತನಾಡಿ, ತಾಲೂಕಿನ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಶಾಸಕರು ಸಮರ​‍್ಕವಾಗಿ ಒದಗಿಸಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿಯೇ ಅತಿಹೆಚ್ಚು ಅನುದಾನ ಪಡೆದು, ಶಾಲಾ ಕೊಠಡಿಗಳನ್ನು ನಿರ್ಮಿಸಿದ ಕೀರ್ತಿ ಇವರದಾಗಿದೆ ಎಂದು ತಿಳಿಸಿದರು. ತಾ.ಪಂ.ಇಒ ಹಾಲಸಿದ್ದಪ್ಪ ಪೂಜೇರಿ, ಗ್ರಾ.ಪಂ.ಸದಸ್ಯ ರವೀಂದ್ರಗೌಡ, ಗುತ್ತಿಗೆದಾರ ಕೇಶವರೆಡ್ಡಿ, ಮುಖಂಡ ಹೆಗ್ಡಾಳ್ ರಾಮಣ್ಣ ಮಾತನಾಡಿದರು. ನೂತನವಾಗಿ ಶಾಲಾ ಕೊಠಡಿಗಳನ್ನು ನಿರ್ಮಿಸಿದಕ್ಕಾಗಿ ಶಾಲಾ ಮುಖ್ಯಗುರುಗಳು, ಶಿಕ್ಷಕರು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ ಶಾಸಕ ಭೀಮನಾಯ್ಕ ಅಂಕಸಮುದ್ರ ಹಾಲು ಒಕ್ಕೂಟದ ಲಿ.ಗೆ.6ರೂಗಳನ್ನು ರೈತರ ಪ್ರೋತ್ಸಾಹಧನದ ಚೆಕ್‌ನ್ನು ಸಂಘದ ಅಧ್ಯಕ್ಷ ಹೇಮರೆಡ್ಡಿಗೆ ನೀಡಿದರು. 

ಈ ಸಂದರ್ಭದಲ್ಲಿ ಅಡವಿ ಆನಂದೇವನಹಳ್ಳಿ ಬಾಚಿಗೊಂಡನಹಳ್ಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಜಿ.ಪಂ.ಮಾಜಿ ಸದಸ್ಯ ಅಕ್ಕಿ ತೋಟೇಶ್, ಎಸ್‌ಡಿಎಂಸಿ ಅಧ್ಯಕ್ಷ ಮಹಮದ್‌ಸಾಬ್, ಗ್ರಾ.ಪಂ.ಉಪಾಧ್ಯಕ್ಷ ಮೈಲಾರ ಶಿವಕುಮಾರ, ರಾಬಕೋ ವಿಸ್ತರಣಾಧಿಕಾರಿ ಪ್ರಕಾಶ್, ಕಾಂಗ್ರೆಸ್ ಎಸ್‌ಸಿ ಸೆಲ್ ತಾಲೂಕು ಅಧ್ಯಕ್ಷ ಪ್ರಭಾಕರ, ಹತ್ತಿ ಅಡಿವೆಪ್ಪ, ಶಿವಕುಮಾರ, ಉಮೇಶ, ಪವಾಡಿ ಹನುಮಂತಪ್ಪ, ಪ್ರಭಾಕರ ಶೆಟ್ರು, ಡಾ.ದಿನೇಶ್, ಪರಮೇಶ್ವರ​‍್ಪ, ವಿನಾಯಕ ಇತರರಿದ್ದರು. ಕಾರ್ಯಕ್ರಮವನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹ್ಯಾಟಿ ಲೋಕಪ್ಪ ನಿರ್ವಹಿಸಿದರು. 


ಸುದ್ದಿ ಓದಿ