ಸೌಂದತ್ತಿ

ಪ್ರಶಸ್ತಿಗಳು ಹೊತ್ತು ತಿರುಗಲಲ್ಲ ಸ್ಫೂರ್ತಿಯನ್ನು ಕೊಡಲು: ಡಾ. ಸತ್ಯನಾರಾಯಣ

ಪ್ರಶಸ್ತಿಗಳು ಹೊತ್ತು ತಿರುಗಲಲ್ಲ ಸ್ಫೂರ್ತಿಯನ್ನು ಕೊಡಲು: ಡಾ. ಸತ್ಯನಾರಾಯಣ

ಸವದತ್ತಿ ಶಕ್ತಿ ದೇವತೆ ನೆಲದಲ್ಲಿ ಕಾವ್ಯಶಕ್ತಿಯ ಆರಾಧನೆ  

ಸವದತ್ತಿ 17: ಶಕ್ತಿ ದೇವತೆಯ ನೆಲದಲ್ಲಿ ಈ ಹೊತ್ತು ಕಾವ್ಯಶಕ್ತಿಯ ಆರಾಧನೆ ನಡೆದಿದೆ. ಪ್ರಶಸ್ತಿಗಳು ಹೊತ್ತು ತಿರುಗಲು ಅಲ್ಲ, ಅವು ನಮಗೆ ಇನ್ನಷ್ಟು ಸ್ಫೂರ್ತಿ ಕೊಡಲು ಎಂದು ನಾಡಿನ ಬಹುದೊಡ್ಡ ವಿಮರ್ಶಕ ಡಾ. ಎಚ್‌. ಎಸ್‌. ಸತ್ಯನಾರಾಯಣ ನುಡಿದರು.  

ಅವರು ಸವದತ್ತಿಯ ಸಹೃದಯ ಸಾಹಿತ್ಯ ಪ್ರತಿಷ್ಠಾನ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  ಡಿ. ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕರ ನಿಲಯದಲ್ಲಿ ಆಯೋಜಿಸಿದ್ದ ಸಹೃದಯ ಕಾವ್ಯ ಪ್ರಶಸ್ತಿ ಪ್ರದಾನ ಹಾಗೂ ಕವಿಗೋಷ್ಠಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. 

ನಾಲ್ಕು ದಿಕ್ಕುಗಳಿಂದ ಪ್ರತಿಭಾವಂತ ಕವಿಗಳನ್ನು ಬರುವಂತೆ ಮಾಡಿರುವುದು ಪ್ರತಿಷ್ಠಾನದ ಶ್ಲಾಘನೀಯ ಕಾರ್ಯ. ಕಾವ್ಯ ಎನ್ನುವುದು ನಮ್ಮನ್ನೆಲ್ಲ ಹಿಡಿದಿಡುವ ಸಮ್ಮೋಹನ ಶಕ್ತಿ. ನಾಡಿನ ನಾಲ್ಕು ಜನ ಕವಿಗಳಿಗೆ ನನ್ನಿಂದ ಪ್ರಶಸ್ತಿ ಪ್ರದಾನ ಮಾಡುವ ಪುಣ್ಯವನ್ನು ಸವದತ್ತಿಯ ಶಕ್ತಿ ತಾಣ ನನಗೆ ಒದಗಿಸಿದೆ. ಪ್ರಶಸ್ತಿ ಎನ್ನುವುದು ಇಂದು ಉದ್ಯಮವಾಗಿರುವ ಸಂದರ್ಭದಲ್ಲಿ ಒಂದು ಚಿಕ್ಕ ಪಟ್ಟಣದಲ್ಲಿ ಪ್ರಾಮಾಣಿಕವಾಗಿ ಕರೆದು ಪ್ರಶಸ್ತಿ ಪ್ರದಾನ ಮಾಡಿರುವುದು ಸಂತಸದ ಸಂಗತಿ. ಅದಮ್ಯ ಕಾವ್ಯಪ್ರೀತಿಯ  ನಾಗೇಶ್ ಜೆ. ನಾಯಕ ಕವಿ ಪೂಜೆ ಮಾಡುತ್ತಿಲ್ಲ, ಕಾವ್ಯಪೂಜೆ ಮಾಡುತ್ತಿದ್ದಾರೆ. ಪುಟ್ಟ ಪ್ರಶಸ್ತಿಗಳ ಹಿಂದೆ ಯಾವ ದುರುದ್ಧೇಶವೂ ಇರುವುದಿಲ್ಲ. ನಿರ್ಮಲ ಮನಸ್ಸಿನಿಂದ ನೀಡುತ್ತಿರುವ ಈ ಪ್ರಶಸ್ತಿ ಚಿರಕಾಲ ಉಳಿಯಲಿ ಎಂದು ಅವರು ಹೇಳಿದರು. ತೀರ​‍್ುಗಾರ ಚನ್ನಪ್ಪ ಅಂಗಡಿ ಆಯ್ಕೆ ಕಷ್ಟಕರವಾಗಿದ್ದರೂ ಅತ್ಯುತ್ತಮ ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಖುಷಿ ತಂದಿದೆ. ಅದಕ್ಕೆ ಈ ಸಂಕಲನಗಳಿಗೆ ಬೇರೆ ಬೇರೆ ಪ್ರಶಸ್ತಿಗಳು ಸಿಕ್ಕಿರುವುದೇ ಸಾಕ್ಷಿ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶಿವಪ್ರಿಯಾ ಕಡೇಚೂರ ಸಾಹಿತ್ಯಿಕ ಕಾರ್ಯಕ್ರಮಗಳು ಮಕ್ಕಳಲ್ಲಿ ವೈಚಾರಿಕತೆ ಮತ್ತು ಸೃಜನಶೀಲತೆಯ ಅಭಿರುಚಿ ಮೂಡಿಸುತ್ತವೆ. ಮುಂದೆಯೂ ಇಂತಹ ಕಾರ್ಯಕ್ರಮಗಳು ನಡೆಯಲಿಕ್ಕೆ ಇಲಾಖೆ ಪ್ರೋತ್ಸಾಹ ನೀಡುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಡಾ. ವಾಯ್‌. ಎಮ್‌. ಯಾಕೊಳ್ಳಿ ಸವದತ್ತಿಯ ನೆಲದಲ್ಲಿ ನಾಗೇಶ್ ನಾಯಕ ಹುಟ್ಟು ಹಾಕಿದ ಸಹೃದಯ ಸಾಹಿತ್ಯ ಪ್ರತಿಷ್ಠಾನ ನಾಡಿನುದ್ದಗಲಕ್ಕೂ ಪಸರಿಸಿದೆ ಎಂಬುದಕ್ಕೆ ರಾಜ್ಯದ ನಾನಾ ಕಡೆಗಳಿಂದ ಆಗಮಿಸಿ ಪ್ರಶಸ್ತಿ ಪಡೆದುಕೊಳ್ಳುತ್ತಿರುವ ನಾಲ್ಕು ಜನ ಕವಿಗಳೇ ಉದಾಹರಣೆ. ಕಾವ್ಯಕ್ಕಾಗಿಯೇ ಮೀಸಲಾಗಿರಿಸಿದ ಈ ಪುರಸ್ಕಾರ ಯುವಪ್ರತಿಭೆಗಳನ್ನು ನೀರೆರೆದು ಪೋಷಿಸುವ ಕಾರ್ಯ ಮಾಡುತ್ತಿದೆ ಎಂದರು.  

ಡಾ. ಕಾತ್ಯಾಯಿನಿ ಕುಂಜಿಬೆಟ್ಟು, ಸುಮಿತ್ ಮೇತ್ರಿ, ಎಸ್‌. ಕೆ. ಮಂಜುನಾಥ್, ಡಾ. ಲಕ್ಷ್ಮಣ ವಿ. ಎ. ಅವರಿಗೆ ತಲಾ 2500. ರೂ ನಗದು ಬಹುಮಾನ, ಪ್ರಶಸ್ತಿ ಫಲಕದೊಂದಿಗೆ ಸಹೃದಯ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಗಣಾಚಾರಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಸಿ. ಬಿ. ಗಣಾಚಾರಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.  

ನಂತರ ನಡೆದ ಕವಿಗೋಷ್ಠಿಯಲ್ಲಿ ರಮೇಶ್ ಮಡಿವಾಳರ, ಹೊನ್ನಪ್ಪ ಕರೆನ್ನಮ್ಮನವರ ಸುಪ್ರಿಯಾ ಮಾಡಮಗೇರಿ, ಎಮ್‌. ಡಿ. ಬಾವಾಖಾನ್, ಆನಂದ ಹಕ್ಕೆನ್ನವರ, ಆನಂದ ಭೋವಿ, ವಿದ್ಯಾ ರೆಡ್ಡಿ, ವಿಷ್ಣುಪ್ರಿಯ, ಚನ್ನಬಸಯ್ಯ ಪೂಜೇರ, ಮೀನಾಕ್ಷಿ ಸೂಡಿ ಕವನ ವಾಚಿಸಿದರು. ಪ್ರತಿಷ್ಠಾನದ ಅಧ್ಯಕ್ಷ ನಾಗೇಶ್ ಜೆ. ನಾಯಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿ, ನಿಲಯ ಪಾಲಕ ಹಾಶೀಮ್ ತಹಶೀಲದಾರ್, ನದೀಮ್ ಸನದಿ, ದೇವು ಮಾಕೊಂಡ ಹಾಗೂ ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು.  

ಎಮ್‌. ಪಿ. ಪಾಟೀಲ ನಿರೂಪಿಸಿದರು. ಪ್ರವೀಣ ಶೆಟ್ಟೆಪ್ಪನವರ ಸ್ವಾಗತಿಸಿದರು. ಎಸ್‌. ಬಿ. ಗರಗದ ಗ್ರಂಥ ಸಮರೆ​‍್ಣ ಮಾಡಿದರು. ಎಚ್‌. ಎಮ್‌. ಮುನವಳ್ಳಿ ವಂದಿಸಿದರು. 


ಸುದ್ದಿ ಓದಿ