ಲೇಖನಗಳು

ಮದುವೆಯಾಗುವ ಹುಡುಗ ಹುಡುಗಿಯರ ಬಯೋಡಾಟಾ ನೋಡಿ ಅವರ ಅಂತಸ್ತು ಅಳೆಯಬೇಡಿ

ಮದುವೆಯಾಗುವ ಹುಡುಗ ಹುಡುಗಿಯರ ಬಯೋಡಾಟಾ ನೋಡಿ ಅವರ ಅಂತಸ್ತು ಅಳೆಯಬೇಡಿ

ಈಗಿನ ಕಾಲದಲ್ಲಿ ಕೇವಲ ಬಯೋಡಾಟಾ(ವಧು-ವರರ ಸ್ವ ವಿವರ), ಕೆಲಸ ಸಂಬಳ ನೋಡುವುದರ ಜೊತೆಗೆ ಪ್ರತ್ಯಕ್ಷವಾಗಿ ಭೇಟಿ ಮಾಡಿ ಅವರ ಮನೆತನ, ಹಿನ್ನೆಲೆ, ಸಂಸ್ಕಾರ, ಗುಣನಡತೆ, ಪರಿಸ್ಥಿತಿಯನ್ನೊಮ್ಮೆ ಕಣ್ಣಾರೆ ಕಂಡು ಮದುವೆ ಕುರಿತು ನಿರ್ಣಯ ತೆಗೆದುಕೊಳ್ಳುವುದು ದೊಡ್ಡವರು ಮಾಡುವ ಮೊದಲ ಕೆಲಸವಾಗಬೇಕು. ಈ ನಿರ್ಣಯವನ್ನ ಹುಡುಗ ಹುಡುಗಿಯರಿಗೆ ನೀಡಬಾರದು.  

ಪ್ರತಿಯೊಬ್ಬರಿಗೂ ಸರಕಾರಿ ನೌಕರಿ ಎಲ್ಲಿಂದ ಸಿಗುತ್ತೆ....? ಸಿಗಲು ಸಾಧ್ಯವೇ...? ಹಾಗೆ ಎಲ್ಲರೂ ಸಾಪ್ಟ್ವೇರ್ ಇಂಜಿನಿಯರ್, ಡಾಕ್ಟರ್, ಡಿಸಿ, ಎಸ್ ಪಿ, ಎಸಿ ತಹಶೀಲ್ದಾರ್, ಅಫೀಸರ್ ಆಗಲು ಸಾಧ್ಯವೇ...? ನಾವು ಸ್ವತಃ ನಮ್ಮ ಮಕ್ಕಳಿಗೆ ಸರಕಾರಿ ನೌಕರಿ ಕೊಡಿಸಲು ಸಾಧ್ಯವಾಗಿದೆಯೇ...? ಸಾಧ್ಯವಾಗುತ್ತಾ ಅಂತಾ ಇದರ ಬಗ್ಗೆ ಸ್ವಲ್ಪ ವಿಚಾರ ಮಾಡಿ ನೋಡಬೇಕು.  

ಹಳ್ಳಿಗಳಲ್ಲಿ ಹೊಲಗದ್ದೆ, ತೋಟಪಟ್ಟಿ ಇದ್ದರೆ, ಸ್ವಯಂ ಉದ್ಯೋಗ ಮಾಡುವಂತವರಿದ್ದರೆ, ಗೌರವಯುತವಾಗಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಾಗಿದ್ದರೆ, ಸಂಸ್ಕಾರವಂತರು, ಗುಣವಂತರು ಆಗಿರುವ ವಧು-ವರ ಸಿಕ್ಕರೆ ಪರೀಶೀಲಿಸಿ ನೋಡಿ ಮದುವೆ ಮಾಡಬೇಕು. ಮದುವೆ ಆಗಬೇಕಾಗಿರುವ ಹುಡುಗ-ಹುಡುಗಿಗಿಂತ ಪಾಲಕರೆ ಹೆಚ್ಚು ತಲೆಕೆಡಿಸಿಕೊಂಡರೆ ಅವರ ಮುಂದಿನ ಭವಿಷ್ಯ ಹೇಗೆ...? ಸ್ವಲ್ಪ ತಾಳ್ಮೆಯಿಂದ ಪಾಲಕರು ಯೋಚಿಸಿ ನೋಡಬೇಕು. ಕೇವಲ ಮನೆಯಲ್ಲಿ ಕುಳಿತು ಭವಿಷ್ಯದ ಕನಸು ಕಾಣುವ ಬದಲಿಗೆ ವರ್ತಮಾನದ ಕಡೆಗೆ ಒಮ್ಮೆ ಕಾಣ್ಣಾಡಿಸಬೇಕಾಗುತ್ತದೆ.  

ಪ್ರತಿಯೊಂದು ಸಮುದಾಯದಲ್ಲಿ ಸ್ಥಿತಿವಂತರಿದ್ದಾರೆ, ಮಧ್ಯಮ ವರ್ಗದವರಿದ್ದಾರೆ. ಬಡವರು, ಕಡುಬಡವರು ಇದ್ದಾರೆ. ಶೂನ್ಯದಿಂದ ಜಗತ್ತನ್ನು ನಿರ್ಮಾಣ ಮಾಡುವ ಹುಡುಗರು ಇದ್ದಾರೆ.ಅಚ್ಚುಕಟ್ಟಾಗಿ ಮನೆತನ ನಡೆಸಿಕೊಂಡು ಹೋಗುವ ಹೆಣ್ಣುಮಕ್ಕಳು ಇದ್ದಾರೆ. ಶ್ರೀಮಂತಿಕೆಯ ಮದದಿಂದ ಕೆಡುವ ಕೆಡಿಸುವ ಮಕ್ಕಳು, ದುಶ್ಚಟಗಳ ದಾಸರು ಇದ್ದಾರೆ. ಬರಿ ಡಿಗ್ರೀ, ನೌಕರಿ ನೋಡಿ ನಿರ್ಣಯಿಸಿದರೆ ನಿಮ್ಮದು ತಪ್ಪಾದೀತು. ಏಕೆಂದರೆ "ಬಡವರ ಮನೆ ಊಟ ಚಂದ, ಧನಿಕರ ಮಾತು ಚಂದ" ಎನ್ನುವ ಗಾದೆ ಮಾತಿನಂತೆ ಧನಿಕರಾಗುವ ಮೊದಲು ಬಡವರಾಗಿದ್ದವರೇ ಹೆಚ್ಚದ್ದರಲ್ಲವೇ...? ಅದರಲ್ಲಿ ನಾವು ಒಬ್ಬರಾಗಿರಬಹುದು ಅಲ್ಲವೇ..? ನೀವು ಒಮ್ಮೆ ನಿಮ್ಮದನ್ನ ಪ್ಲ್ಯಾಶ್ ಬ್ಯಾಕ್ ಮಾಡಿಕೊಳ್ಳಿ ಎಲ್ಲಾ ಸಮಾಜದ ಮಕ್ಕಳು ಹೆಚ್ಚಿನ ವಿದ್ಯಾವಂತರಾಗಿದ್ದಾರೆ.  

ತಂದೆತಾಯಿಗಳಿಗೆ ತಮ್ಮ ಮಕ್ಕಳ ಶಿಕ್ಷಣ, ಉದ್ಯೋಗ, ಭವಿಷ್ಯ, ಮದುವೆ ಇವುಗಳದೇ ಚಿಂತೆ ಇದೆ. ಇಂಜಿನಿಯರ್ ಆದವರು  8 ರಿಂದ 10 ಸಾವಿರ ಸಂಬಳ ಆರಂಭಿಕವಾಗಿ ಪಡೆದು ಕೆಲಸ ಮಾಡುವವರಿದ್ದಾರೆ. ಅರೆಗುತ್ತಿಗೆ, ಗುತ್ತಿಗೆ ಕೆಲಸ ಮಾಡುವವರು ಇದ್ದಾರೆ.  

ಪೊಲೀಸ್, ಮಿಲಿಟರಿ, ಇನ್ನಿತರೆ ಹುದ್ದೆಗಳಿಗೆ  ನೇಮಕಾತಿ ನಡೆದಾಗ ನೀವು ನೋಡಿ... ಪದವಿ ಪಡೆದ ಹುಡುಗರು, ಹುಡಿಗಿಯರು ನೌಕರು ಗಿಟ್ಟಿಸಲು ಸಾಲಿನಲ್ಲಿ ಗಂಟೆಗಟ್ಟಲೇ ನಿಂತಿರುವುದನ್ನ. ಗಾರ್ಮೆಂಟ್ಸ್‌ಗಳಲ್ಲಿ, ಖಾಸಗಿ ಕಾರ್ಖಾನೆ, ಕಂಪನಿ,ಆಸ್ಪತ್ರೆಗಳಲ್ಲಿ, ಸೆಕ್ಯೂರಿಟಿ ಗಾರ್ಡ, ಸ್ವಚ್ಚತಾ ಸಿಬ್ಬಂದಿಗಳಾಗಿ ತಿಂಗಳಿಗೆ 8-10 ಸಾವಿರಗಳಿಗೆ 8 ಗಂಟೆಗೂ ಮೀರಿ ದುಡಿಯುವ ಪದವಿಧರರು ಗಂಡಸರು  ಹೆಂಗಸರು ಇರುವರು. ಅವರನ್ನೆಲ್ಲ ನೀವು ನೋಡಿರುತ್ತೀರಿ. ಅಂತಹವರಲ್ಲಿ ನಿಮ್ಮ ಮಗನೊ, ಮಗಳೊ ಇರಲು ಬಹುದು. ಅಲ್ಲವೇ..?  

ಈಗಿನ ಯುವಕರಿಗೆ, ಯುವತಿಯರಿಗೆ ತಂದೆತಾಯಿ ಪಡುವ ಪರಿಶ್ರಮದ ಅರಿವು ಕಡಿಮೆ. ನಮ್ಮ ಕಷ್ಟ ನಮ್ಮ ಮಕ್ಕಳಿಗೆ ಬರಬಾರದು ಅಂತಾ ಏನೆಲ್ಲಾ ಸಮಸ್ಯೆಗಳ ಎದುರಿಸಿ ಅವರಿಗೆ ಉತ್ತಮ ಶಿಕ್ಷಣ ಕೊಡಿಸುವ ಗುರಿ ತಂದೆತಾಯಿಗಿದ್ದರೆ, ಕಷ್ಟಪಟ್ಟು ಓದಿ ನನ್ನನ್ನು ಈ ಸಮಾಜ ಗುರುತಿಸುವಂತೆ ಮಾಡುತ್ತೇನೆ ಎನ್ನುವ "ಏಕಲವ್ಯನ ಗುರಿ"  ತರ ಇರುವುದು ಬೆರಳೆಣಿಕೆಯಷ್ಟು ಹುಡುಗ ಹುಡುಗಿಯರಿಗೆ ಮಾತ್ರ.  ಯಾವಾಗ ಹುಡುಗ ಹುಡಿಗಿಯರಿಗೆ ಸೌಲಭ್ಯಗಳು ಶ್ರಮಪಡದೇ ಬಂದವೋ ಆಗಲೇ ಅವರ ಬಯಕೆಗಳು ಎತ್ತರೆತ್ತರಕ್ಕೆ ಜಿಗಿಯತೊಡಗಿವೆ....!!  

ಹುಡುಗರ ಕೈಯಲ್ಲೊಂದು ಮೊಬೈಲ್, ಪ್ಯಾಂಟ್ ಜೇಬಲ್ಲಿ ಪರ್ಸ, ಹೆಗಲಿಗಾಕಿದ ವೈಯಾರದ ಚೀಲ, ಹರಿದ ಕಾಟನ್ ಪ್ಯಾಂಟ್, ಹಾಕಿಕೊಂಡು, ಜನ ಬಯ್ಯುವಂತ ಹೇರ್ ಕಟಿಂಗ್ ಮಾಡಿಸಿಕೊಂಡು ಲವ್ವಿಡವ್ವಿಯಲ್ಲಿ ಬೀಳುವ ಯುವ ಜನರಿಗೇನ್ರಿ ಗೊತ್ತು ತಂದೆ ತಾಯಿ ಪಡುವ ಕಷ್ಟ. ಅಷ್ಟೇ ಆಗಿದ್ದರೆ ಪರವಾಗಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೊಗಿರುವ ಹುಡುಗ ಹುಡಿಗಿಯರು ಮದ್ಯ, ಗುಟುಗಾ, ಗಾಂಜ, ಅಪೀಮು, ಜೂಜಾಟದ ದಾಸರಾಗಿರುವುದನ್ನು ನಾವು ಈ ಕಣ್ಣಿಂದ ಕಾಣುತ್ತೇವೆ. ತಂದೆತಾಯಿ ಮಾತು ಕೇಳದ ಮನೆಮುರುಕರ ಸಂಖ್ಯೆ ದಿನೆದಿನೇ ಹೆಚ್ಚುತ್ತಿದೆ ಎನ್ನುವ ಸಂಗತಿಯೇ ಭಯಂಕರ.  

ಕ್ರಿಕೇಟ್, ಐಪಿಎಲ್, ಇಸ್ಪೀಟು ಮಟ್ಕಾ ಇಂತಹ ಮನೆಮುರುಕ ಜೂಜಾಟಗಳ ದಾಸರಾಗಿ ಮನೆಗೆ ಭಾರವಾಗಿರುವ ಯುವಕರ ಸಂಖ್ಯೆಗೇನು ಕಡಿಮೆ ಇಲ್ಲ. ಇವುಗಳ ದುಷ್ಟ ಬಲೆಯಲ್ಲಿ ತಗಲಾಕಿಕೊಂಡ ವಿದ್ಯಾವಂತರೆ ಹೆಚ್ಚು ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಇದಕ್ಕೆ ಹಿರಿಯರಾದ ನಮ್ಮಗಳ ತಪ್ಪು ಇರಬಹುದಲ್ಲವೇ..? ಇಂತವರಿಗೆ ಹೆಣ್ಣು ಕೊಡಲು ಯಾರು ಮುಂದೆ ಬರಿತ್ತಾರೆ...?   

ಹುಡುಗರ - ಹುಡುಗಿಯರ ನಡವಳಿಕೆ ಅವರನ್ನ ನೋಡಿದ ತಕ್ಷಣವೇ ಯಾರಿಗೂ ಕಂಡಿಡಿಯಲು ಆಗುವುದಿಲ್ಲ. ದೊಡ್ಡವರ ದೊಡ್ಡಸ್ತಿಕೆ, ದೊಡ್ಡತನದ ಮಾತುಗಳು ನಿಜ ಜೀವನಕ್ಕೆ ಹತ್ತಿರ ಇರುವುದಿಲ್ಲ. ಆಡೋದೊಂದು ಮಾಡೋದೊಂದು. ಇಂತವರ ಸಹವಾಸಗಳೇ ಇಂದಿನ ಮಕ್ಕಳಿಗೆ ಮಾರಕವಾಗಿರೋದು. ಶೋಕಿ ಕೋರ ಮಕ್ಕಳು ಇರುವರು ಮತ್ತು ಇಲ್ಲದಿರುವಬರೆಂಬ ಭೇದಭಾವ ಈಗಿನ ಹುಡುಗ ಹುಡುಗಿಯರಿಂದ ಕಾಣಲಾಗುವುದಿಲ್ಲ. ಏಕೆಂದರೆ ಎಲ್ಲೇಡೆ ಇಂತಹ ಶೋಕಿದಾರರನ್ನ  ನೋಡಬಹುದು.   

ಹಣ ಇರಲಿ ಅಥವಾ ಇಲ್ಲದಿರಲಿ, ಗುಣ ನಡತೆ ಉತ್ತಮವಾಗಿರಬೇಕು. ಜನಮೆಚ್ಚುವಂತೆ ಇರಬೇಕು. ಬದುಕಿ ಬಾಳುವೆನೆಂಬ  ಛಲ ಇರಬೇಕು ಇಂದಿನ ಪೀಳಿಗೆಯವರಿಗೆ. ಅದಬಿಟ್ಟು " ಮನೆಗೂ ಭಾರ ಸಮಾಜಕ್ಕೂ ಹೊರೆ" ಎನ್ನುವ ರೀತಿ ಬದುಕಿದರೆ  ಜನರ ನಿಯತ್ತಿನ ನಾಯಿಗಿಂತಲೂ ಕಡೆಯಾಗಿ ಯುವ ಸಮುದಾಯ ಬದುಕಬೇಕಾಗುತ್ತದೆ ಇಂದಿನ ಸಮಾಜದಲ್ಲಿ.   

ಕೇವಲ ಡಿಗ್ರಿನೇ ಇದ್ದರೆ ಸಾಲದು. ಸಂಸ್ಕಾರ ಇರಬೇಕು. ಸ್ವಾವಲಂಬಿಯಾಗಿ ಬದುಕುತ್ತೇನೆ ಎನ್ನುವ ಅದಮ್ಯಚೇತನ ಇರಬೇಕು. ಆಗ ಯುವಕ ಯುವತಿಯರ ಬದುಕು ಹಸನಾಗಲು ಸಾಧ್ಯ.  

ಮೊದಲೆಲ್ಲ 25 ರ ವಯೋಮಾನದ ಒಳಗೆ ಹುಡುಗ ಹುಡುಗಿಗೆ ಮದುವೆ ಆಗುತ್ತಿತ್ತು. ಈಗ ಆ ವಯಸ್ಸು 35 ಕ್ಕೇರಿದೆ. ಮಗ ಮಗಳು ಸ್ವ:ತ ಕಾಲಮೇಲೆ ನಿಲ್ಲಬೇಕು, ಸ್ವಂತ ಹಣಸಂಪಾದನೆ ಮಾಡಬೇಕು ಎಂದು ಯೋಚಿಸುವ ತಂದೆತಾಯಿಗಳು ಮಕ್ಕಳಿಗೆ ಸ್ವಂತ ಸಂಸ್ಕಾರ ಕಲಿಸುವುದನ್ನೇಕೆ ಮರೆತರೋ ಗೊತ್ತಾಗುತ್ತಿಲ್ಲ...!! ಅಥವಾ ಸಂಸ್ಕಾರವಂತರಾಗಿ ಬಾಳಬೇಕೆಂಬುದನ್ನ ಕಲಿಸಿಕೊಡಲು ಏಕೆ...? ಮರೆತರೋ ಗೊತ್ತಾಗುತ್ತಿಲ್ಲ. ವಯಸ್ಸಿನಲ್ಲಿ ಮದುವೆಯಾಗಬೇಕು. ವಯೋಮಾನ ಮೀರಿದ ವಧು-ವರನಿಗೆ ಬೇಗ ಮದುವೆ ಯೋಗ ಕೂಡ ಆಗುವುದಿಲ್ಲ, ಮದುವೆಗೆ ಒದ್ದಾಡಬೇಕಾಗುತ್ತದೆ ಎನ್ನುವ ಸತ್ಯ ಈಗಿನವರಿಗೆ ಏಕೆ ಅರ್ಥವಾಗುತ್ತಿಲ್ಲ.  

ನೌಕರಿ ಹುಡುಗ, ಹುಡುಗಿನೇ ಬೇಕು ಅಂತಾ ಕಾಯುತ್ತಿದ್ದರೆ ಸರಾಸರಿ ವಯಸ್ಸಿನ ಅರ್ಧ ವಯಸ್ಸು ಮೀರುತ್ತದೆ. ಉಳಿದ ವಯಸ್ಸಿನಲ್ಲಿ ಕುಟುಂಬದ ಸು:ಖ ಪಡೆಯಲು ಎಣಗಾಡ ಬೇಕಾಗುತ್ತದೆ.   

ಈಗ ಇನ್ನೊಂದು ಟ್ರೆಂಡ್ ಶುರುವಾಗಿದೆ. ತಂದೆತಾಯಿ ಇರುವ ಮನೆಗೆ ಹುಡುಗಿ ಕೊಡುವುದಕ್ಕೆ ಹಿಂದೆಮುಂದೆ ನೋಡುವ ಪಾಲಕರು ತಮ್ಮ ಮಗನಿಗೆ ಹೇಗೆ ಹೆಣ್ಣು ತರುತ್ತೀರಿ...? ನಿಮ್ಮ ಮಗನಿಗೆ ಹೆಣ್ಣು ತರುವಾಗ ಹೆಣ್ಣಿನ ಪಾಲಕರು ನಿಮ್ಮಂಗೆ ವಿಚಾರ ಮಾಡಿದರೇ ಮಕ್ಕಳ ಮದುವೆ ಗತಿ ಏನು...?   

"ಹಿರಿಯರಿಲ್ಲದ ಮನೆ ಹಾಳು, ಬಿತ್ತದ ಹೊಲ ಬೀಳು" ಎನ್ನುವ ಗಾದೆ ಮಾತಿನಂತೆ ಆಥವಾ ಅವಿವೇಕಿ ಗಂಡಹೆಂಡಿರ ಬಾಳು, ಗೊನೆ ಬಿಡದ ಬಾಳೆ ಗಿಡ ನೋಡು.  ಬುದ್ದಿ ಹೇಳದ ಪಾಲಕರ ಗೋಳು, ಅರಿತು ನಡೆಯದೇ ಇದ್ದರೆ ಸಂಸಾರ ಹೋಳು" ಎಂತಾಗೇ ಆಗುತ್ತದೆ.  

ಈಗ ಮದುವೆ ಆಗ ಬಯಸುವ  ಹುಡುಗ ಹುಡುಗಿಯರ ಬಯೋಡಾಟಾ ನೋಡಿ. ಕಳೆದ 30-40 ವರ್ಷಗಳಲ್ಲಿ ಹಿಂಗೆ ಇದ್ದಿಲ್ಲ. ಬಯೋಡಾಟಾ ಆಗಿನ ಜನರಿಗೆ ಗೊತ್ತಿದ್ದಿಲ್ಲ. ಈಗ ವಧುವರನಿಗಿಂತ ಅವರ ಪಾಲಕರೇ ಮೊದಲು ಪೋಟೋ ಬಯೋಡಾಟಾ ತರುಸಿಕೊಳ್ಳುತ್ತಾರೆ. ಮನೆಗಳಿಗೆ ಹೋಗಿ ನೋಡುವ ಪರಿಪಾಠ ಕಡಿಮೆಯಾಗುತ್ತಿದೆ. ಅದಕ್ಕಾಗಿಯೇ ವಧುವರರ ಮಾಹಿತಿ ಕೇಂದ್ರಗಳು ನಾಯಿಕೊಡೆಗಳಂತೆ ಜನ್ಮ ತಾಳಿವೆ. ಮದುವೆ ಮಧ್ಯಸ್ಥಿಕೆದಾರರು ಸಾಕಷ್ಟು ಇದ್ದಾರೆ.   

12ನೇ ಶತಮಾನದ ಸಾಮಾಜಿಕ ಹರಿಕಾರರಾಗಿರುವ ಜಗದ ಅಣ್ಣ ಬಸವಣ್ಣನವರು "ಮನಸು ಮನಸು ಸೇರಿದರೆ ಮದುವೆ ಮಾಡು" ಎಂದು ಹೇಳಿರುವುದನ್ನ ಮರೆತಿರುವ ಇಂದಿನ ಜನರು ಜಾತಕ ಹೊಂದಾದರೆ, ವರದಕ್ಷಿಣೆ ಭರ್ಜರಿ ಕೊಟ್ಟರೆ  ಮದುವೆ ಮಾಡಿಕೋ ಅಂತಾ ಹೇಳ್ತಾರೆ. ಎರಡು ಮನೆತನಗಳ ಮನಸ್ಸುಗಳು ಒಂದಾಗದೇ ಜಾತಕ ನೋಡಿ ಮದುವೆ ಮಾಡಿದರೇನು ಬಂತು.. ಬೀಗರ ನೆಂಟರ ಸಂಬಂಧಗಳು ಬೆಸುಗೆಯಾಗದಿದ್ದರೆ. ಹೆಣ್ಣುಕೊಟ್ಟವರು, ಮದುವೆ ಮಾಡಿಕೊಂಡವರು ಒಬ್ಬರಿಗೊಬ್ಬರ ಒಡನಾಟ ಇಟ್ಟುಕೊಳ್ಳದಿದ್ದರೆ, ಜಾತಕ ನೋಡಿ ಅವರನ್ನ ಇವರು, ಇವರನ್ನ ಅವರು ಕೊಂಡಾಡಿ ಕೊಂಡಿದ್ದವರು ವರ್ಷದೊಳಗೆ ಬಡಿದಾಡಿಕೊಂಡು, ಹಾವುಮುಂಗಸಿಗಳಂತೆ ಅದವರಿಲ್ಲವೇನು...? ಡೈವರ್ಸ್‌ ಹಾಗಿಲ್ಲವೇನು..? ಹಾಗಾದರೆ ಜಾತಕದ ಫಲ ಮದುವೆಯಾದ ನೂತನ ದಂಪತಿಗಳಿಗೇಕೆ ಆಶುಭ..? ವಾಯಿತು.  

ನೋಡಿ ಮದುವೆ ಎನ್ನುವುದು ಎರಡು ಮನೆತನಗಳ, ಮನುಷ್ಯರ ಬೆಸುಗೆ. ಎರಡು ಗಾಲಿಗಳಿರುವ ಜಕ್ಕಡಿ ಬಂಡಿ. ಬ್ಯಾಲೆನ್ಸ್‌ ಆಗಿ ಸಾಗಿದರೆ ದಾರಿ ಸುಗಮ. ಇಂಬ್ಯಾಲೆನ್ಸ್‌ ಆಗಿ ಸಾಗಿದರೆ ನರಕ. ಅದ್ದರಿಂದ ಮದುವೆ ಆಗುವ ಹುಡುಗ ಹುಡುಗಿಯರು, ಅವರ ಪಾಲಕರು  ಇಂದ್ರ ಚಂದರನನ್ನ ಕಾಣದೇ ಅವರ ಬಡತನ ಸಿರಿತನ ನೋಡದೆ ಮನೆತನಗಳ ಪೂರ್ವಪರ, ತಂದೆ ತಾಯಿಗಳ ಗುಣನಡತೆ, ಹುಡುಗ, ಹುಡುಗಿಯ ಚರಿತ್ರೆ ವಿಚಾರ ಮಾಡಿ ಎರಡು ಮನೆತನಗಳ ಮಧುರ   

ಬಾಂಧವ್ಯದ ಬೆಸುಗೆ ಬೆಸೆಯಲು ಮುಂದಾದರೆ, ಅಂತಹ ವೈವಾಹಿಕ ಸಂಬಂಧ ಗಟ್ಟಿಯಾಗಿರಲು ಸಾಧ್ಯವಲ್ಲವೇ...?  

ಮನುಷ್ಯನಾಗಿ ಹುಟ್ಟುವುದೇ ಏಳು ಜನ್ಮದ ಪುಣ್ಯ. ಅಂತದ್ದರಲ್ಲಿ ಬಾಲ್ಯ, ಯೌವ್ವನ, ಮುಪ್ಪು ಇವುಗಳನ್ನ ಪ್ರತಿಯೊಬ್ಬ ಹೆಣ್ಣು ಗಂಡು  ಧರ್ಮದ ಹಾದಿಯಲ್ಲಿ ಸನ್ಮಾರ್ಗದಲ್ಲಿ ಸಾಗಿ ಅನುಭವಿಸಲೇಬೇಕು. ಸದ್ಗತಿ ಹೊಂದಲೇಬೇಕು. ಆಗ ಈ ಮನುಷ್ಯ ಜೀವಕ್ಕೊಂದು ಮುಕ್ತಿ. ಕುಟುಂಬಕ್ಕೊಂದು ಶಕ್ತಿ.  

ಇಂದಿನ ಯುವಕರು ದುಶ್ಚಟಗಳಿಂದ ದೂರವಿರಬೇಕು. ಸ್ವಯಂ ದುಡಿಮೆಯಲ್ಲಿ ತೊಡಗಿಕೊಂಡವರಾಗಿ ಇರಬೇಕು.  ಹುಡುಗಿಯರು ಭ್ರಮಾಲೋಕದಿಂದ ತೇಲಾಡದೇ ನೈಜ ಪ್ರಪಂಚದ ಅರಿವಿರಬೇಕು. ಪ್ಯಾಷನ್ ಪ್ರಪಂಚದಿಂದ ದೂರವಿದ್ದು, ಈ ಹಾಳು ಮೊಬೈಲ್ ನ ಗೀಳು ಬಿಟ್ಟಿರಬೇಕು. ಸಮಾಜದ ಎಲ್ಲಾ ಸ್ತರಗಳನ್ನ ಅರಿತು ಸಕಾಲದೊಳಗೆ ಬಾಳ ಸಂಗಾತಿಗಳನ್ನ ಹುಡುಕಿಕೊಂಡು, ವೈವಾಹಿಕ ಜೀವನಕ್ಕೆ ಕಾಲಿಟ್ಟು, ಇದೆಯೋ ಇಲ್ಲವೋ, ನಿಮ್ಮದು ಒಂದು ಆದರ್ಶ ಸಂಸಾರ ಅಂತಾ ನಡೆಸಿದರೆ, ಅದಕ್ಕಿಂತ ಮೇಲಿಲ್ಲ ನೋಡಾ ಸರ್ವಜ್ಞ..... ಎಂದೇಳಿದರೆ ನಿಜಕ್ಕೂ ತಪ್ಪಾಗದಲ್ಲವೇ..?  

ಈ ಅಂದ ಚಂದ ಎಷ್ಟು ದಿನ ಗುರು... ಎಷ್ಟು ದಿನ ಚಂದುಳ್ಳ ಚಲುವೆ...!! ಒಂದು ಮಗುವಾಗುವವರೆಗಷ್ಟೇ..!! ಬಾಹ್ಯ ಸೌಂದರ್ಯಕ್ಕಿಂತ ಅಂತರಂಗದ ಸೌಂದರ್ಯಕ್ಕೆ ಬೆಲೆ ಕೊಡಿ. ಆಗ ಬಾಳು ಸುಂದರವಾಗಿರುತ್ತದೆ. ನಿಮ್ಮ ಸೌಂದರ್ಯ ಎಲ್ಲಿಯವರೆಗೆ ಅಂತಾ ಏನಾದರೂ ಯೋಚನೆ ಮಾಡಿದ್ದೀರಾ..!! ಹೇಳು ಎಲ್ಲಿಯವರೆಗೆ, ಅದು ನಿಮ್ಮ ಮುಖಕ್ಕೆ ಹಾಕಿದ ಫೇರ್ ್ಘ ಲವ್ಲೀ ತೊಳೆಯುವವರೆಗೆ ಅಷ್ಟೇ ತಾನೇ.  ಆದರೆ ಹೃದಯದೊಳಗಿನ ಸೌಂದರ್ಯ ನಿಮ್ಮ ಅಂತರಂಗದ ಕಣ್ಣುಗಳು ಇರುವವರೆಗೆ ಎನ್ನುವುದನ್ನ ದಯವಿಟ್ಟು ಮರೆಯದಿರಿ ಯುವ ಪೀಳಿಗೆಯ ಹುಡುಗ ಹುಡುಗಿಯರೇ...!!  

 ನಮ್ಮ ಪ್ರೀತಿಯ ಹುಡುಗ ಹುಡುಗಿಯರೇ ನಿಮ್ಮ ವಯಸ್ಸು ಎಷ್ಟಂತ ನೋಡಿ.  25 ರಿಂದ 30 ದಾಟಿತಲ್ಲವೇ. ಇನ್ನೂ ಹುಡುಗ ಹುಡುಗಿಯನ್ನ, ಹುಡುಗಿ ಹುಡುಗನನ್ನ  ತಲಾಶ್ ಮಾಡುವುದರಲ್ಲೇ ಕಾಲ ಕಳೆಯುತ್ತೀರಿ. ಇನ್ನೂ ನಿಮ್ಮ ಮದುವೆ ಯಾವಾಗ. ನಿಮ್ಮ ಹೆತ್ತವರಿಗೇಕೆ  ತಲೆನೋವಾಗಿ ಕಾಡುತ್ತೀರಿ.  ಒಂದು ಗಂಡಿಗೆ ಹೆಣ್ಣು, ಒಂದು ಹೆಣ್ಣಿಗೆ ಗಂಡು ಎಂಬ ವಿಧಿಲಿಖಿತವಿದೆ. ಸೂಕ್ತ ಸಮಯದಲ್ಲಿ ಮದುವೆಗೆ ಮುಂದಾದರೆ ಮದುವೆ ನಿರ್ವಿಗ್ನ.ಆ ಸಮಯ ದಾಟಿದರೆ ಖಂಡಿತ ವಿಜ್ಞ.  

ಮನುಷ್ಯನ ಸರಾಸರಿ 60 ವರ್ಷಗಳ ಆಯುಷ್ಯದಲ್ಲಿ 30 ದಾಟಿದ ಮೇಲೆ ಮದುವೆ ಮಾಡಿಕೊಂಡರೆ ಮುಂದಿನ 15 ವರ್ಷ ಸಂಸಾರ, ನಂತರ ತಾತ್ಸಾರ, ತದನಂತರ ಕಾಯಿಲೆಗಳ ಹಗರ. ನೋಡಿದಿರಲ್ಲ. ಹುಡುಗರು ಹೆಚ್ಚು ಹೆಚ್ಚು ಹುಡಿಗಿಯರನ್ನ, ಹುಡುಗಿಯರು ಹುಡುಗರನ್ನ ಈ ರಂಗಿನ ದುನಿಯಾದೊಳಗೆ ಪತ್ತೆದಾರಿ ಕೆಲಸ ಮಾಡದೇ, ತಂದೆತಾಯಿ ನೋಡುವ ಹುಡುಗನನ್ನ, ಹುಡುಗಿಯನ್ನ ನೋಡಿ ವಿವಾಹ ಮಾಡಿಕೊಳ್ಳಿ, ಚಂದದ ಸಂಸಾರ ಮಾಡಿ. ಹುಡುಗ ರೈತನಾದರೇನು, ವ್ಯಾಪಾರ ಮಾಡಿದರೇನು, ಖಾಸಗಿ ಕಂಪನಿ ನೌಕರನಾದರೇನು, ವಾಹನ ಚಾಲಕರಾದರೇನು, ಸಣ್ಣ ನೌಕರಿಯಲ್ಲಿ ಇರುವ  ಸರಕಾರಿ ನೌಕರನಾದರೇನು ಅವನು ಉತ್ತಮನಿರಬೇಕು, ಕುಡುಕನಾಗಿರಬಾರದು, ಜೂಜು ಕೋರನಾಗಿರಬಾರದು. ಹುಡುಗಿ ಜಂಭವಂತಳಾಗಿರಬಾರದು, ಜಗಳಗಂಟಿಯಾಗಿರಬಾರದು, ಹಿರಿಯರನ್ನು ಗೌರವಿಸುವವಳಾಗಿರಬೇಕು.ತನ್ನ ಮೇಲೆ ತನಗೆ ಭರವಸೆ ಇರುವಳಂತವಳಾಗಿರಬೇಕು. ಅಂತಹ ಹುಡುಗ, ಹುಡುಗಿ ಮದುವೆ ಮಾಡಿಕೊಳ್ಳಿ ಹೆತ್ತವರ ಸಂಕಷ್ಟ ಪಾರು ಮಾಡಿ.  

ಇಂದಿನ ಬಡಿವಾರದ ಬಾಳ್ವೆಗೆ ಮಾರು ಹೋಗಬೇಡಿ. ಇನ್ನೊಬ್ಬರ ರೀತಿ ನೀವಾಗಬೇಡಿ. ನಿಮ್ಮನ್ನ ನೋಡಿ ಮತ್ತೊಬ್ಬರು ಅವರ ಕುಟುಂಬ ನೆಡಸಿಕೊಂಡು ಹೋಗುವಂತೆ ಬಾಳಿ. ಹೆತ್ತವರಿಗೆ ಒಳ್ಳೆಯ ಮಕ್ಕಳಾಗಿ. ಹೆಣ್ಣು ಕೊಟ್ಟವರಿಗೆ ಒಳ್ಳೆಯ ಅಳಿಯನಾಗಿ, ಅತ್ತೆ ಮಾವನಿಗೆ ಒಳ್ಳೆಯ ಸೊಸೆಯಾಗಿ, ಗಂಡನಿಗೆ ಒಳ್ಳೆಯ ಹೆಂಡತಿಯಾಗಿ ಅವನ ಪ್ರತಿಯೊಂದು ಹೆಜ್ಜೆ ಗುರುತುಗಳಲ್ಲಿ ನೀವಿರಿ.ದುಂದುವೆಚ್ಚಕ್ಕೆ ಕಡಿವಾಣ ಹಾಕಿ. ಆದರ್ಶವಾಗಿ ಈ ಸಮಾಜದಲ್ಲಿ ಬದುಕಿ. ನಿಮಗಾಗಿ ನೀವು ಬದುಕುವುದು ಸ್ವಾರ್ಥ, ಮತ್ತೊಬ್ಬರಿಗಾಗಿ, ನಿಮ್ಮ ಕುಟುಂಬಕ್ಕೆ, ಬಂಧುಬಳಗದವರಿಗೆ, ಈ ಸಮಾಜಕ್ಕೆ ನೀವು ಬದುಕುವುದು ನಿಸ್ವಾರ್ಥ. ಇದಕ್ಕೆ ನೀವ್ ಏನಂತಿರಿ...!!!  

- ಎ.ಸಿ.ತಿಪ್ಪೇಸ್ವಾಮಿ


- * * * - 


ಸುದ್ದಿ ಓದಿ