ರಾಮದುರ್ಗ

ಕನ್ನಡದ ನುಡಿ ಸೇವೆಯನ್ನು ಕಾಟಾಚಾರಕ್ಕಾಗಿ ಮಾಡಬೇಡಿ ; ಅಧಿಕಾರಿಗಳಿಗೆ ಶಾಸಕ ಮಹಾದೇವಪ್ಪ ಯಾದವಾಡ ತಾಕೀತು : ಕರ್ನಾಟಕ ರಾಜ್ಯೋತ್ಸವ ಸಮಾರಂಭ

ಕನ್ನಡದ ನುಡಿ ಸೇವೆಯನ್ನು ಕಾಟಾಚಾರಕ್ಕಾಗಿ ಮಾಡಬೇಡಿ ; ಅಧಿಕಾರಿಗಳಿಗೆ ಶಾಸಕ ಮಹಾದೇವಪ್ಪ ಯಾದವಾಡ ತಾಕೀತು : ಕರ್ನಾಟಕ ರಾಜ್ಯೋತ್ಸವ ಸಮಾರಂಭ

ಲೋಕದರ್ಶನ ವರದಿ 


ರಾಮದುರ್ಗ 01: ಸರ್ಕಾರಿ ಅಧಿಕಾರಿಗಳು ಕನ್ನಡ ಭಾಷೆಯನ್ನು ಆಡಳಿತ ಭಾಷೆಯಾಗಿ ಬಳಕೆ ಮಾಡಬೇಕು. ಅಂದಾಗ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು. 

ರಾಮದುರ್ಗದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಆಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಆಡಳಿತದಲ್ಲಿ ಕನ್ನಡದ ಬದಲಿಗೆ ಆಂಗ್ಲ ಭಾಷೆ ಬಳಕೆಯಾದರೆ ಕನ್ನಡವೂ ಉಳಿಯುವುದಿಲ್ಲ. ಆಂಗ್ಲ ಭಾಷೆ ಹಳ್ಳಿಗರಿಗೆ ತಿಳಿಯುವುದಿಲ್ಲ ಎಂದು ಹೇಳಿದರು. 

ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅಧಿಕಾರಿಗಳ ಭಾವಹಿಸುವಿಕೆ ಗಣನೀಯವಾಗಿ ಕಡಿಮೆಯಾಗಿದೆ. ಕನ್ನಡದ ನುಡಿ ಸೇವೆಯನ್ನು ಅಧಿಕಾರಿಗಳು ಕಾಟಾಚಾರದ ಕಾರ್ಯಕ್ರಮ ಎಂದು ಭಾವಿಸಿ ಪಾಲ್ಗೊಳ್ಳುತ್ತಿಲ್ಲ ಎಂದು ತಾಕೀತು ಮಾಡಿದರು. 

ಕನ್ನಡ ನಾಡು ರಕ್ಷಣೆಗಾಗಿ ರಾಮದುರ್ಗ ತಾಲ್ಲೂಕಿನ ಅನೇಕರು ತ್ಯಾಗ ಬಲಿದಾನ ಮಾಡಿದ್ದಾರೆ. ಕನ್ನಡದ ನುಡಿ ಸೇವೆ ತಾಲ್ಲೂಕಿನ ಬಹುತೇಕರು ದಿಗ್ಗಜರು ಎನಿಸಿಕೊಂಡಿದ್ದಾರೆ. ಅಂಥವರಲ್ಲಿ ಡಾ. ಡಿ.ಎಸ್‌. ಕರ್ಕಿ, ಸಾಲಿ ರಾಮಚಂದ್ರ ರಾಯರು, ಬಿ.ಸಿ. ದೇಸಾಯಿ ಅವರು ಪ್ರಮುಖರು ಎಂದು ಸ್ಮರಿಸಿಕೊಂಡರು. 

ಪುರಸಭೆ ಅಧ್ಯಕ್ಷ ರಘುನಾಥ ರೇಣಕೆ, ಉಪಾಧ್ಯಕ್ಷ ನಾಗರಾಜ ಕಟ್ಟಿಮನಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಪಾಂಡುರಂಗ ಜಟಗನ್ನವರ, ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ತಾಲ್ಲೂಕು ಪಂಚಾಯ್ತಿ ಇಒ ಪ್ರವೀಣಕುಮಾರ ಸಾಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌.ವೈ. ಕುಂದರಗಿ, ಸಮಾಜ ಕಲ್ಯಾಣ ಇಲಾಖೆಯ ಬಸವರಾಜ ಯಾದವಾಡ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಹಾಜರಿದ್ದರು. ಶಿಕ್ಷಕ ರಮೇಶ ಮೋಟೆ ಉಪನ್ಯಾಸ ನೀಡಿದರು. 

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ಮತ್ತು ಮೇರವಣಿಗೆಯಲ್ಲಿ ಭಾಗವಹಿಸಿದ ರೂಪಕಗಳಿಗೆ ಬಹುಮಾಣ ವಿತರಿಸಲಾಯಿತು. 


ಸುದ್ದಿ ಓದಿ