ಮುಂದಗೋಡ

ವೈದ್ಯರು ಪ್ರಾಮಾಣಿಕ ಸೇವೆ ಮಾಡಬೇಕು:ಡಾ.ರವಿ ಹೆಗಡೆ

ವೈದ್ಯರು ಪ್ರಾಮಾಣಿಕ ಸೇವೆ ಮಾಡಬೇಕು:ಡಾ.ರವಿ ಹೆಗಡೆ

ಮುಂಡಗೋಡ:ವೈದ್ಯರು ಪ್ರಾಮಾಣಿಕವಾಗಿ ರೋಗಿಗಳ ಸೇವೆಯನ್ನು ಮಾಡಬೇಕು ಎಂದು ಐ.ಎಮ್‌.ಎ.ಅಧ್ಯಕ್ಷ ಡಾ.ರವಿ ಹೆಗಡೆ ಹೇಳಿದರು.   

ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ವಿ.ಆರ್‌.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್‌(ರಿ.) ಹಳಿಯಾಳ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌.ಸೆಟಿ(ರಿ.) ಹಳಿಯಾಳ, ವಿಸ್ತರಣಾ ಶಾಖೆ ಮುಂಡಗೋಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆಸ್ಪತ್ರೆ, ಐ.ಎಮ್‌.ಎ. ಮುಂಡಗೋಡ, ರೋಟರಿ ಕ್ಲಬ್ ಮುಂಡಗೋಡ, ಐ.ಎಮ್‌.ಎ. ಲೈಫ್‌ಲೈನ್ ರಕ್ತನಿಧಿ ಮತ್ತು ಪಂ.ಸಾ. ಆಸ್ಪತ್ರೆ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ವಿ.ಆರ್‌.ಡಿ.ಎಮ್ ಟ್ರಸ್ಟ್‌ ಹಳಿಯಾಳ ಸಂಸ್ಥಾಪಕರ ಮತ್ತು ವೈದ್ಯರ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಸ್ವಯಂ-ಪ್ರೇರಿತ ರಕ್ತದಾನ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿಯಾಗಿದ್ದ ಡಾ.ಬದನ್ಚಂದ್ರ ರಾಯ್ 1991ರ ಜುಲೈ 1ರಂದು ರಾಷ್ಟೀಯ ವೈದ್ಯರ ದಿನಾಚರಣೆ ಆರಂಭಿಸಿದರು ಎಂದರು. ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಎಚ್‌.ಎಫ್‌.ಇಂಗಳೆ ಮಾತನಾಡಿ ರಕ್ತದಾನ ಶ್ರೇಷ್ಟ ದಾನ. ರಕ್ತದಾನದ ಬಗ್ಗೆ ಇರುವ ಉಹಾಪೋಹಗಳ ಬಗ್ಗೆ ತೆರೆ ಎಳೆದು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ರಕ್ತದಾನ ಮಾಡಲು ಮುಂದಾಗಬೇಕು ಎಂದರು.   

ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌.ಸೆಟಿ ಗ್ರಾಮೀಣ ಅಭಿವೃದ್ಧಿ ಅಧಿಕಾರಿ ಮಹಾಬಲೇಶ್ವರ ನಾಯ್ಕ ಮಾತನಾಡಿ ವಿ.ಆರ್‌.ಡಿ.ಎಮ್‌. ಟ್ರಸ್ಟ್‌ನ ಸಂಸ್ಥಾಪಕರ ದಿನಾಚರಣೆ ಮತ್ತು ವೈದ್ಯರ ದಿನಾಚರಣೆಯನ್ನು ಪ್ರತಿ ವರ್ಷ ಆಚರಿಸುತ್ತಿದ್ದು ಈ ಬಾರಿ ಹಳಿಯಾಳ, ದಾಂಡೇಲಿ ಮತ್ತು ಜೊಯಿಡಾದಲ್ಲಿಯೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು. ರೋಟರಿ ಕ್ಲಬ್‌ನ ಕಾರ್ಯದರ್ಶಿ ಬೈಜು ವಿ.ಜೆ. ಮಾತನಾಡಿದರು. 

ಈ ವೇಳೆ ಡಾ.ಪಿ.ಪಿ.ಛಬ್ಬಿ, ಎಸ್‌.ಕೆ.ಬೋರಕರ, ಸರೋಜಾ ಛಬ್ಬಿ, ಜಗದೀಶ ಕಾನಡೆ, ಸಿಬಿಆರ್‌ಸೆಟಿ ಶಾಖೆ ಸಿಬ್ಬಂದಿ, ಐ.ಎಮ್‌.ಎ.ಲೈಪ್‌ಲೈನ್ ರಕ್ತನಿಧಿ, ಪಂ.ಸಾ.ಆಸ್ಪತ್ರೆ ಶಿರಸಿ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿ ಮುಂತಾದವರು ಉಪಸ್ಥಿತರಿದ್ದರು. ವಿಶೇಷವಾಗಿ ರೋಟರಿ ಮತ್ತು ಇನ್ನರ್ ವ್ಹೀಲ್ ಕ್ಲಬ್‌ನ 17 ಜನ ಮಹಿಳಾ ಸದಸ್ಯರು ಸ್ವಯಂ-ಪ್ರೇರಣೆಯಿಂದ ರಕ್ತದಾನ ಮಾಡಿ ಮಾದರಿಯಾದರು. ಒಟ್ಟು 55 ದಾನಿಗಳು ಶಿಬಿರದಲ್ಲಿ ರಕ್ತದಾನ ಮಾಡಿದರು. 


ಸುದ್ದಿ ಓದಿ