ಬಳ್ಳಾರಿ

ಹೆರಿಗೆಯನ್ನು ಸರ್ಕಾರಿ ಆಸ್ಪತ್ರೆ ಅಥವಾ ಸಾಂಸ್ಥಿಕ ಸಂಸ್ಥೆಯಲ್ಲಿಯೇ ಮಾಡಿಸಿ : ಡಿಹೆಚ್‌ಒ ಡಾ.ಯಲ್ಲಾ ರಮೇಶ್ ಬಾಬು ಮನವಿ

ಹೆರಿಗೆಯನ್ನು ಸರ್ಕಾರಿ ಆಸ್ಪತ್ರೆ ಅಥವಾ ಸಾಂಸ್ಥಿಕ ಸಂಸ್ಥೆಯಲ್ಲಿಯೇ ಮಾಡಿಸಿ : ಡಿಹೆಚ್‌ಒ ಡಾ.ಯಲ್ಲಾ ರಮೇಶ್ ಬಾಬು ಮನವಿ

ಬಳ್ಳಾರಿ,ಸೆ.05: ಹೆರಿಗೆ ಎಂಬುದು ಒಬ್ಬ ಮಹಿಳೆಯ ಜೀವನದ ಪ್ರಮುಖ ಘಟ್ಟದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ತಮ್ಮ ತಾಯ್ತನವನ್ನು ಅನುಭವಿಸುವ ವಿಭಿನ್ನ ಸಮಯವಾಗಿದೆ. ಅದರಂತೆ  ಹೆರಿಗೆಯನ್ನು ನಿರ್ವಹಿಸುವ ಸಮಯ ಸಂದರ್ಭವು ಸಹ ಅಷ್ಟೆ ಪ್ರಮುಖವಾದುದಾಗಿದೆ. ಸರಕಾರ ಇಂದು ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗಾಗಿ ನುರಿತ ವೈದ್ಯಕಿಯ ಸಿಬ್ಬಂದಿ ಅಗತ್ಯ ಪರಿಕರಗಳನ್ನು ಒದಗಿಸಿ ಸುರಕ್ಷಿತ ಹೆರಿಗೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು ಅವರು ತಿಳಿಸಿದ್ದಾರೆ. 

ಸುರಕ್ಷಿತ ಹೆರಿಗೆಯಾಗದಿದ್ದಲ್ಲಿ ತಾಯಿ ಮತ್ತು ಮಗುವಿನ ಜೀವಕ್ಕೂ ಸಹ ಅಪಾಯ ಬಂದೆರಗಬಹುದಾಗಿದೆ. ಆದರೂ ಸಹ ಕೆಲವು ಸಾರಿ ಮನೆಯಲ್ಲಿಯೇ ಹೆರಿಗೆ ಮಾಡಿಸುವ ಅಥವಾ ಮಾಡುವ ಪ್ರಯತ್ನವನ್ನು ಗ್ರಾಮೀಣ ಪ್ರದೇಶಗಳಲ್ಲಿ ಮಾಡುತ್ತಿರುವುದು ಅತ್ಯಂತ ಅಘಾತಕಾರಿಯಾಗಿದೆ. 

ಮನೆಯಲ್ಲಿ ಹೆರಿಗೆಯಿಂದ ಆಗುವ ತೀವ್ರ ಅಪಾಯಕಾರಿ ತೊಂದರೆಗಳು 

ತಾಯಿಗೆ ಇತರೆ ಸೋಂಕುಗಳು ಕಂಡುಬರಬಹುದು ಮತ್ತು ಹೆಚ್ಚು ದಿನ ತಾಯಿಗೆ ತೊಂದರೆಯಾಗಬಹುದು. ಅಧಿಕ ರಕ್ತಸ್ರಾವದಿಂದ ತಾಯಿ ಮರಣ ಹೊಂದಬಹುದು. ಮಗುವಿನ ಹೊಕ್ಕಳು ಬಳ್ಳಿಯನ್ನು ಕುಡುಗೊಲು ಅಥವಾ ಹಳೆಯದಾದ ಬ್ಲೇಡ್ ಉಪಯೋಗಿಸಿ ಕತ್ತರಿಸಿದಲ್ಲಿ ನಂಜು ಉಂಟಾಗಬಹುದು. ಕಡಿಮೆ ತೂಕದ ಮಗುವಿನ ಜನನವಾದಲ್ಲಿ ಮಗುವಿಗೆ ತಕ್ಷಣ ಆರೈಕೆ ಇಲ್ಲದಂತಾಗುವುದು. ಮಗುವಿನ ಉಸಿರಾಟದ ತೊಂದರೆ ತಕ್ಷಣದ ನಿರ್ವಹಿಸಲಾಗದೇ ಮಗು ಮರಣ ಹೊಂದಬಹುದು. ಮಗುವಿಗೆ ಧನುರ್ವಾಯು ರೋಗ ಬರಬಹುದು. ಹುಟ್ಟಿದ ತಕ್ಷಣ ಮಾರಕ ರೋಗಗಳ ನಿಯಂತ್ರಣದ ಲಸಿಕೆ ಮಗುವಿಗೆ ಲಭ್ಯವಾಗುವುದಿಲ್ಲ. ಮಗುವಿಗೆ ತಕ್ಷಣ ಎದೆ ಹಾಲುಣಿಸದೆ ಇತರೆ ಪದಾರ್ಥ ಉಣಿಸುವುದರಿಂದ ಮಗುವಿಗೆ ಸೋಂಕು ಉಂಟಾಗುವುದು. ಮಗುವಿನ ಬೆಳವಣಿಗೆ ಕುಂಠಿತವಾಗುವುದು ಅಥವಾ ಬುಧ್ಯಿಮಾಂಧ್ಯತೆ ಕಂಡುಬರಬಹುದು. ಹೆರಿಗೆ ನಿರ್ವಹಿಸುವವರಿಗೆ ಯಾವುದಾದರೂ ಸಾಂಕ್ರಾಮಿಕ ರೋಗವಿದ್ದರೆ ತಾಯಿ ಮತ್ತು ಮಗುವಿಗೆ ಸಹ ಬರುವ ಸಾಧ್ಯತೆ ಹೆಚ್ಚು ಇರುತ್ತದೆ. ವೈದ್ಯರಲ್ಲದವರು ಅಥವಾ ಸ್ವಯಂ ಓಷದೋಪಚಾರದಿಂದ ತಾಯಿ ಮತ್ತು ಮಗುವಿಗೆ ಅಪಾಯವಾಗುವ ಸಾಧ್ಯತೆಗಳು ಹೆಚ್ಚು. 

*ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದರಿಂದ ತಾಯಿ ಮತ್ತು ಮಗುವಿಗೆ ಸಿಗುವ ಸುರಕ್ಷಿತ ಆರೈಕೆಗಳು:* ಮನೆಯಿಂದ ಆಸ್ಪತ್ರೆಗೆ ತೆರಳಲು ಸುಸಜ್ಜಿತವಾದ ಉಚಿತ 108 ಆಂಬ್ಯುಲೆನ್ಸ್‌ ಸೌಲಭ್ಯವಿದೆ, ಹೆರಿಗೆಯನ್ನು ಉಚಿತವಾಗಿ ನಿರ್ವಹಿಸಲಾಗುವುದು. ತಾಯಿ ಕಾರ್ಡ್‌ನಲ್ಲಿ ನಮೂದಿಸಿದ ತಾಯಿಯ ವಿವರಗಳನ್ನು ಪರೀಶೀಲಿಸಿ ಹೆರಿಗೆ ನಿರ್ವಹಣೆ ಮತ್ತು ಚಿಕಿತ್ಸೆಯನ್ನು ನೀಡಲು ವೈದ್ಯರ ನಿರ್ಧರಿಸುವರು. ಹೆರಿಗೆ ಕೊಠಡಿಯು ಸ್ವಚ್ಚವಾಗಿದ್ದು ಸೋಂಕುರಹಿತ ಸ್ಥಳವಾಗಿ ಕಾಪಾಡಲಾಗುತ್ತದೆ. ಇದರಿಂದ ತಾಯಿ ಮತ್ತು ಮಗುವಿಗೆ ಯಾವುದೇ  ಸೋಂಕು ಉಂಟಾಗದಂತೆ ಸಂರಕ್ಷಣೆ ದೊರಕುತ್ತದೆ. ನುರಿತ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯವರು ಹೆರಿಗೆ ನಿರ್ವಹಿಸುವುದರಿಂದ ಪ್ರತಿ ಹಂತದಲ್ಲೂ ತಾಯಿ ಮಗುವಿನ ಕಾಳಜಿ ತೆಗೆದುಕೊಳ್ಳುತ್ತಾರೆ. ಗರ್ಭದಲ್ಲಿ ಮಗುವಿನ ಚನಲನವಲನವನ್ನು ನಿಗಾ ಇಡುವ ಸುರಕ್ಷಿತ ಮೂಲಕ ಜನನಕ್ಕೆ ಕ್ರಮವಹಿಸಲಾಗುವುದು. ತಾಯಿಗೆ ರಕ್ತದೊತ್ತಡ ಕಂಡು ಬಂದಲ್ಲಿ ತಕ್ಷಣ ಸೂಕ್ತ ಓಷಧೋಪಚಾರದೊಂದಿಗೆ ಸರಳ ಹೆರಿಗೆ ನಿರ್ವಹಿಸಲು ವ್ಯವಸ್ಥೆ ಇರುವುದು. ತಾಯಿಗೆ ರಕ್ತದ ಅಗತ್ಯತೆ ಇದ್ದಲ್ಲಿ ತಕ್ಷಣ ರಕ್ತವನ್ನು ಒದಗಿಸುವ ವ್ಯವಸ್ಥೆಯುು ಇರುವುದರಿಂದ ತಾಯಿಯ ಜೀವವನ್ನು ಅಪಾಯದಿಂದ ಕಾಪಾಡಲು ಸಾಧ್ಯವಾಗುವುದು. ಸಹಜ ಹೆರಿಗೆ ಸಾಧ್ಯವಿಲ್ಲದ ಗಂಡಾಂತರಕಾರಿ ಸನ್ನಿವೇಶದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಲು ಕ್ರಮವಹಿಸಲಾಗುವುದು. ಅಥವಾ ಮೇಲ್ಮಟ್ಟದ ಆಸ್ಪತ್ರೆಗೆ ಅಲ್ಲಿಯ ವೈದ್ಯಕೀಯ ತಂಡಕ್ಕೆ ಮಾಹಿತಿ ನೀಡಿ ಸುಸಜ್ಜಿತ ಆಂಬ್ಯುಲೇನ್ಸ್‌ ಮೂಲಕ ಕಳುಹಿಸಿಕೊಡಲಾಗುವುದು.  

ಕಡಿಮೆ ತೂಕದ ಮಗು ಜನಿಸಿದಲ್ಲಿ ತಕ್ಷಣವೇ ಬೆಚ್ಚಗಿಡಲು ಬೇಬಿವಾರ್ಮರಗಳು ಇರುವಂತೆ ಕ್ರಮವಹಿಸಲಾಗಿದೆ. ದಿನ ತುಂಬದ ಹೆರಿಗೆೆ, ತೂಕ  2.5  ಕೆಜಿಗಿಂತ  ಕಡಿಮೆ  ಇದ್ದರೆ, ರಾಟದ ಉಸಿರಾಟ ತೊಂದರೆಯಿದ್ದರೆ,  ಮಗು  ಹಾಲು  ಕುಡಿಯಲು ಸಾಧ್ಯವಾಗದಿದ್ದರೆ ಮತ್ತು ಅತಿ ಅವಶ್ಯಕವೆನಿಸಿದರೆ ತೀವ್ರ ನಿಗಾಘಟಕದಲ್ಲಿ ಶಿಶುವನ್ನು ದಾಖಲಾತಿ ಮಾಡಲಾಗುವುದು. ರಕ್ತಸ್ರಾವದ ಸನ್ನಿವೇಶ ಎದುರಾದರೇ ತಕ್ಷಣ ತಜ್ಞರನ್ನು ಸಂಪರ್ಕಿಸಿ ರಕ್ತ ಪೂರಣ ಮತ್ತು ಬಕ್ರಿಕಾ ಬಲೂನ ವಿಧಾನದ ತಡೆಗಟ್ಟಲು ಕ್ರಮವಹಿಸಲಾಗುವುದು. ಹೆರಿಗೆಗೆ ದಾಖಲಾದ ನಂತರ ಪ್ರತಿ ಹಂತದಲ್ಲೂ ಆಗುವ ಬದಲಾವಣೆಗಳನ್ನು ದಾಖಲಿಸಿಕೊಳ್ಳುವರು. 

ಹೆರಿಗೆ ನಂತರ ಮಗುವನ್ನು ಸ್ವಚ್ಚಗೊಳಿಸುವ ಕುರಿತು ಮತ್ತು ತಾಯಿಯ ಆರೈಕೆ ಕುರಿತು ಪಾಲಕರಿಗೆ ತಿಳಿಸಿಕೊಡಲಾಗುವುದು. ಹೆರಿಗೆ ನಂತರ ಎಷ್ಟು ಸಾಧ್ಯವೋ ಅಷ್ಟು ಬೇಗ ತಾಯಿಯ ಎದೆ ಹಾಲುಣಿಸಲು ಸಿಬ್ಬಂದಿವರು ತಕ್ಷಣ ಕ್ರಮವಹಿಸುವರು. ಹೆರಿಗೆ ತಕ್ಷಣ ಮಗುವಿಗೆ ಬಾಲಕ್ಷಯ ವಿರುದ್ದ  ಬಿಸಿಜಿ ಲಸಿಕೆ,  ಪೋಲಿಯೋ ರೋಗದ ವಿರುದ್ದ ಲಸಿಕೆ ಪೋಲಿಯೊ ಲಸಿಕೆ, ಕಾಮಾಲೆ ರೋಗದ ವಿರುದ್ದ ಹೆಪ-ಟೈಟಸ್ ಬಿ ಲಸಿಕೆ ಹಾಕಲಾಗುವುದು. ಶಿಶುವಿನ ದೇಹದ ಒಳಗೆ ರಕ್ತಸ್ರಾವದ ಸಾಧ್ಯತೆ ಹಿನ್ನಲೆಯಲ್ಲಿ ವಿಟಾಮಿನ್‌-ಕೆ ಚುಚ್ಚುಮದ್ದು ನೀಡಲಾಗುವುದು. ತಾಯಿಗೆ ಸಹಜ ಹೆರಿಗೆಗೆ ಎರಡು ದಿನಗಳ ಕಾಲ ಸಿಜೇರಿಯನ್ ಹೆರಿಗೆಗೆ ಐದು ದಿನಗಳ ಕಾಲ  ದಾಖಲಾತಿ ಮಾಡಿಕೊಂಡು ಪೌಷ್ಟಿಕಯುಕ್ತ ಊಟ ಒದಗಿಸಲಾಗುವುದು. ಮಗುವಿಗೆ ಕಿವಿ ಕೇಳಿಸುವ ಕುರಿತು ಪರೀಕ್ಷಿಸಲು ಜಿಲ್ಲಾ ಮಟ್ಟದ ಆಸ್ಪತ್ರೆಯಲ್ಲಿ, ವಿಮ್ಸ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಜನನದ ನಂತರ ಒಂದು ತಿಂಗಳೊಳಗೆ ಪರೀಕ್ಷೆ ಮಾಡಲಾಗುವುದು. ಜನನ ಪ್ರಮಾಣ ಪತ್ರವನ್ನು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಯಿಂದ ಮನೆಗೆ ತೆರಳಲು ನಗು-ಮಗು ವಾಹನದ ಮೂಲಕ ನಗು ನಗುತ್ತಾ ಕಳುಹಿಸಿಕೊಡಲಾಗುವುದು. 

*ಹೆರಿಗೆ ನಿರ್ವಹಣೆ ಸ್ಥಳ ಹಾಗೂ ಪರಿಕರಗಳ ಅನಾನೂಕುಲ:* 

ಹೆರಿಗೆ ಮಾಡಿಸಿಕೊಳ್ಳಲು ಸ್ವಚ್ಚವಾದ ಜಾಗ ಇಲ್ಲದಿರುವ ಸಾಧ್ಯತೆ ಹೆಚ್ಚು. ಹೆರಿಗೆ ಮಾಡಿಕೊಳ್ಳುವವರು ಸ್ವಚ್ಚವಾಗಿ ಕೈತೊಳೆದು ಕೊಳ್ಳದೇ ಇರಬಹುದು. ಹೆರಿಗೆ ನಂತರ ಹೊಕ್ಕಳು ಬಳ್ಳಿಯನ್ನು ಕತ್ತರಿಸಲು ಅಪಾಯಕಾರಿ ವಸ್ತು ಬಳಸುವ ಸಾದ್ಯತೆ ಹೆಚ್ಚು. ಹೊಕ್ಕಳು ಬಳ್ಳಿ ಕತ್ತರಿಸಿದ ನಂತರ ಮಲೀನವಾದ ದಾರದಿಂದ ಕಟ್ಟುವ ಸಾದ್ಯತೆ ಹೆಚ್ಚು. ಹೆರಿಗೆ ಮಾಡಿಸಿಕೊಳ್ಳುವವರು ಸೋಪು ಬಳಸಿ ಕೈ ತೊಳೆದುಕೊಳ್ಳದೇ ಹೆರಿಗೆ ಮಾಡಿಸಿಕೊಳ್ಳಬಹುದು.  

*ಹೆರಿಗೆ ವೇಳೆ ತಾಯಿಗೆ ಕಂಡುಬರುವ ತೊಂದರೆಗಳ ನಿರ್ವಹಣೆಯಲ್ಲಿ ಅಜಾಗರೂಕತೆ:* 

ಹೆರಿಗೆ ನೋವು ಕಾಣಿಸಿಕೊಂಡ ನಂತರವು ತುಂಬಾ ಸಮಯ ಮನೆಯಲ್ಲಿ ಗರ್ಭಿಣಿಯನ್ನು ಇರಿಸುವುದರಿಂದ ತಾಯಿಯ ಜೀವಕ್ಕೆ ಅಪಾಯವಾಗಬಹುದು. ತಾಯಿಗೆ ಇತರೆ ಯಾವುದಾದರೂ ಸೋಂಕು ಕಂಡು ಬಂದರೆ ಮನೆಯಲ್ಲಿ ಯಾರಿಗೂ ಸಹ ತಿಳಿಯುವುದಿಲ್ಲ. ತಾಯಿಯ ಶರೀರದಿಂದ ಅಧಿಕ ರಕ್ತಸ್ರಾವ ಆಗುತ್ತಿದ್ದರೆ ನಿಲ್ಲಿಸಲು ಯಾವುದೇ ಪರಿಕರ ಇರವುದಿಲ್ಲ. ತಾಯಿಗೆ ಅಧಿಕ ರಕ್ತದೊತ್ತಡ ಸಮಸ್ಯೆಯುಂಟಾದಲ್ಲಿ ನಿರ್ವಹಣೆಯಾಗದೇ ತಾಯಿಗೆ ಅಪಾಯವಾಗಬಹುದು. ಹೆರಿಗೆ ಸಂದರ್ಭದಲ್ಲಿ ಕಾಲು ಮುಂದಾಗಿ ಬಂದಲ್ಲಿ ಹೆರಿಗೆ ನಿರ್ವಹಿಸಲು ಸಾದ್ಯವಾಗದಿರುವುದು. ಹೆರಿಗೆ ನಿರ್ವಹಣೆ ವೇಳೆ ಯೋನಿಮಾರ್ಗದಲ್ಲಿ ರಕ್ತಸ್ರಾವವಾಗಿ ನಿಯಂತ್ರಣವಾಗದೇ ತಾಯಿಗೆ ಅಪಾಯವಾಗಬಹುದು. ಹೆರಿಗೆ ನಂತರ ತಕ್ಷಣವೇ ತಾಯಿಗೆ ಆರೈಕೆ ಮಾಡಲು ಯಾರು ಇಲ್ಲದಿರುವ ಸಂದರ್ಭಗಳು ಬರಬಹುದು. ಗರ್ಭದಲ್ಲಿ ಮಗುವಿನ ಸ್ಥಿತಿ ಚೆನ್ನಾಗಿದೆಯೋ ಅಥವಾ ಇಲ್ಲವೋ ಮತ್ತು ಎನು ಮಾಡಬೇಕು ಎಂಬುದು ತಿಳಿಯುವುದಿಲ್ಲ. 

*ನವಜಾತ ಶಿಶುವಿಗೆ ಒದಗಬಹುದಾದ ಅಪಾಯಕಾರಿ ಸನ್ನಿವೇಶಗಳು:* 

ಗರ್ಭನಾಳವನ್ನು (ಹೊಕ್ಕಳು ಬಳ್ಳಿ) ಯಾವಾಗ ಕತ್ತರಿಸಬೇಕು ಮತ್ತು ಅದರ ನಿರ್ವಹಣೆ ಮಾಡುವ ಕುರಿತು ಮಾಹಿತಿ ಇಲ್ಲದಿರುವ ಸಾಧ್ಯತೆ ಹೆಚ್ಚು. ಹೆರಿಗೆ ನಂತರ ಮಗುವು ತಕ್ಷಣ ಉಸಿರಾಡದಿದ್ದರೆ ಎನು ಮಾಡಬೇಕು ಎಂದು ತೊಚದಿರುವುದರಿಂದ ಮಗುವು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಹೆರಿಗೆ ನಂತರ ಶಿಶುವನ್ನು ತಕ್ಷಣವೇ ಸ್ನಾನ ಮಾಡಿಸುವ ಸಾಧ್ಯತೆಗಳಿಂದ ಮಗುವಿಗೆ ಅಪಾಯಕಾರಿ ಆಗಬಹುದು. ಹೆರಿಗೆ ನಂತರ ಮಗುವನ್ನು ಸ್ವಚ್ಚವಿಲ್ಲದ ಬಟ್ಟೆಯಿಂದ ಒರೆಸುವ ಅಥವಾ ಹೊದಿಸುವ ಸಾಧ್ಯತೆಗಳು ಹೆಚ್ಚು ಹೆರಿಗೆ ನಂತರ ತಾಯಿಯ ಎದೆ ಹಾಲುಣಿಸದೆ ಜೇನು ತುಪ್ಪ, ಸಕ್ಕರೆ ನೀರು ಕುಡಿಸುವ ಸಾಧ್ಯತೆಗಳು ಹೆಚ್ಚು ಇರುತ್ತದೆ. 

*ಜನನಿ ಸುರಕ್ಷಾ ಯೋಜನೆ:* 

ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ನಂತರ ತಾಯಿಕಾರ್ಡ್‌ ದಾಖಲಾತಿ ಅನ್ವಯ ನೇರವಾಗಿ ಬಾಣಂತಿಯ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ರೂ.700/- ಹಾಗೂ ನಗರ ಪ್ರದೇಶದಲ್ಲಿ ರೂ.600/- ನೀಡಲಾಗುತ್ತದೆ. 

*ಜನನಿ ಶಿಶು ಸುರಕ್ಷಾ ಕಾರ್ಯಕ್ರಮ:* 

ಎಲ್ಲಾ ಗರ್ಭಿಣಿಯರಿಗೆ, ಬಾಣಂತಿಯರಿಗೆ, ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಓಷಧಿ, ರಕ್ತ, ಪ್ರಯೋಗಾಲಯ ಸೇವೆಗಳು, ಹೆರಿಗೆ ನಂತರ ಉಚಿತ ಊಟ, ಮನೆಗೆ ಬಿಡಲು ಉಚಿತ ಸಾರಿಗೆ ವ್ಯವಸ್ಥೆ ಸೌಲಭ್ಯ ನೀಡಲಾಗುದು. 

*ಲಕ್ಷ್ಯ ಕಾರ್ಯಕ್ರಮ:* 

ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಸೇವೆಗಳ ಗುಣಮಟ್ಟದ ಮಾನದಂಡಗಳನ್ನು ಎಲ್ಲ ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅಳವಡಿಸಿ ಗುಣಮಟ್ಟದ ಹೆರಿಗೆ ಸೇವೆಗಳನ್ನು ಒದಗಿಸಲು ಸಿಬ್ಬಂದಿಯವರಿಗೆ ತರಬೇತಿಯನ್ನು ನೀಡಿ ಕ್ರಮವಹಿಸಲಾಗುತ್ತಿದೆ. 

*ಸುಮನ್ ಕಾರ್ಯಕ್ರಮ:* 

ಸುರಕ್ಷಿತ ಮಾತೃತ್ವ ಅಭಿಯಾನದಡಿಯಲ್ಲಿ ತಾಯಿ ಮತ್ತು ನವಜಾತ ಶಿಶುವಿನ ಮರಣ ಸೊನ್ನೆಗೆ ತರಲು ಗ್ರಾಮೀಣ ಭಾಗದ ಉಪಕೇಂದ್ರಗಳು ಸೇರಿದಂತೆ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಸಿಬ್ಬಂದಿಯವರಿಗೆ ತರಬೇತಿ ನೀಡಿ ಕನಿಷ್ಟ 04 ಪ್ರಸವಪೂರ್ವ ಪರೀಕ್ಷೆ, ಎಲ್ಲ ಪ್ರಯೋಗಾಲಯ ಪರೀಕ್ಷೆ, ಓಷಧ ಸೇವೆಗಳು ಹಾಗೂ ಕುಟುಂಬ ಕಲ್ಯಾಣ ವಿಧಾನಗಳ ಅಳವಡಿಕೆಯ ಉಚಿತವಾಗಿ ನೀಡುವ ಜೋತೆಗೆ ಆದರದ ಗೌರವಗಳೊಂದಿಗೆ ಚಿಕಿತ್ಸೆ ನೀಡುವಿಕೆಗೆ ಕ್ರಮವಹಿಸಲಾಗಿದೆ. 

*ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ:* 

ತಾಯ್ತನದ ಗೌರವ ಪೂರ್ವಕವಾಗಿ ಪ್ರತಿ ತಿಂಗಳು ಒಂಬತ್ತನೆಯ ದಿನಾಂಕದಂದು ಎಲ್ಲ ಗರ್ಭಿಣಿಯರನ್ನು ತಪ್ಪದೆ ತಪಾಸಣೆ ಕೈಗೊಳ್ಳಲು ಮತ್ತು ಗಂಡಾಂತರಕಾರಿ ಗರ್ಭಿಣಿಯರನ್ನು ಪುನಃ 24 ನೇ ತಾರೀಖಿನಂದು ವೈದ್ಯರು ತಪ್ಪದೇ  ಪರೀಕ್ಷೆಯನ್ನು ಕೈಗೊಳ್ಳುವರು. ಅಲ್ಲದೇ ಪ್ರಸೂತಿ ತಜ್ಞರಿಂದ ತಪಾಸಣೆಗೆ ಅವಶ್ಯಕತೆ ಇರುವ ಗರ್ಭಿಣಿಯರನ್ನು ಕರೆದುಕೊಂಡು ಹೋಗಿ ಬರಲಾಗುವುದು. ಉಚಿತ ಸೇವೆ ನೀಡಲು ನೊಂದಣಿ ಮಾಡಕೊಂಡ ಖಾಸಗಿ ಆಸ್ಪತ್ರೆಗಳಲ್ಲಿಯೂ ಅಲ್ಲಿಯ ವೈದ್ಯರು ಈ ದಿವಸ ಉಚಿತ ಸೇವೆಗಳನ್ನು ಒದಗಿಸುತ್ತಾರೆ. 

ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಸಂಡೂರು, ಸಿರಗುಪ್ಪ, ಕುರುಗೋಡು, ಕಂಪ್ಲಿ ತಾಲೂಕಿನ ಎಲ್ಲ 139 ಉಪಕೇಂದ್ರಗಳು (ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು), 29 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಗರ ವ್ಯಾಪ್ತಿಯ 09 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 07 ಸರಕಾರಿ ಡಿಸ್ಪೇನ್ಸ್‌ರಿಗಳಲ್ಲಿ ಮತ್ತು 06 ಸಮುದಾಯ ಅರೋಗ್ಯ ಕೇಂದ್ರಗಳು, 02 ತಾಲೂಕು ಸಾರ್ವಜನಿಕ ಆಸ್ಪತ್ರೆಗಳು ಹಾಗೂ ಜಿಲ್ಲಾ ಆಸ್ಪತ್ರೆ ಮತ್ತು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಓಪಿಡಿ) ಯಲ್ಲಿ ತಪಾಸಣೆ, ಸೇವೆಗಳು ಹಾಗೂ ಸೌಲಭ್ಯಗಳನ್ನು ನಿರಂತರವಾಗಿ ನೀಡಲಾಗುತ್ತಿದೆ. 

ಸಾರ್ವಜನಿಕರು ಈ ಸೇವೆಗಳನ್ನು ಪಡೆದುಕೊಂಡು ಹೆರಿಗೆಯನ್ನು ಮನೆಯಲ್ಲಿಯೇ ಮಾಡಿಕೊಳ್ಳದೇ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡು ತಾಯಿ ಮತ್ತು ಮಗುವಿನ ಸುರಕ್ಷತೆಗೆ ಮಹತ್ವ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ರಮೇಶ್‌ಬಾಬು ಅವರು ತಿಳಿಸಿದ್ದಾರೆ. 


ಸುದ್ದಿ ಓದಿ