ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಜ್ಜು : ಜಿಲ್ಲಾ ಚುನಾವಣಾಧಿಕಾರಿ ಡಿಸಿ ಮಾಲಪಾಟಿ
ಬಳ್ಳಾರಿ: ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ 5 ವಿಧಾನಸಭಾ ಮತಕ್ಷೇತ್ರಗಳಿಗೆ ಮೇ 10 ರಂದು ಬೆಳಿಗ್ಗೆ 07 ರಿಂದ ಸಂಜೆ 06 ಗಂಟೆಯವರೆಗೆ ಶಾಂತಿಯುತವಾಗಿ ಮತದಾನ ಜರುಗಿಸಲು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ತಿಳಿಸಿದರು.
ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ವಿಧಾನಸಭೆ ಚುನಾವಣೆ ಸಂಬಂಧ ವಿವಿಧ ಮಾಹಿತಿ ನೀಡುವ ಸಲುವಾಗಿ ಏರಿ್ಡಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು 11,52,411 ಜನ ಮತದಾರರು ತಮ್ಮ ಮತದಾನ ಹಕ್ಕು ಚಲಾಯಿಸಲಿದ್ದು, 1,222 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಮತ್ತು ಚುನಾವಣಾ ಕರ್ತವ್ಯಕ್ಕಾಗಿ 5,815 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಗತ್ಯ ತರಬೇತಿ ನೀಡಿ ನಿಯೋಜಿಸಲಾಗಿದೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, ಮೇ 10 ರ ಬುಧವಾರದಂದು ಮತದಾನ ಮತ್ತು ಮೇ 13 ರ ಶನಿವಾರದಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಈಗಾಗಲೇ ಮತದಾರರ ಅಂತಿಮ ಪಟ್ಟಿಯಲ್ಲಿರುವಂತೆ ಜಿಲ್ಲೆಯಲ್ಲಿ 5,67,319 ಪುರುಷ ಮತದಾರರು ಮತ್ತು 5,84,920 ಮಹಿಳಾ ಮತದಾರರು, 172 ತೃತೀಯ ಲಿಂಗಿ ಮತದಾರರು ಸೇರಿ ಒಟ್ಟು 11,52,411 ಮತದಾರರು ಮತದಾನದ ಹಕ್ಕು ಚಲಾಯಿಸಲಿದ್ದಾರೆ. ಇದರಲ್ಲಿ 39,359 ಯುವ ಮತದಾರರು ಪ್ರಥಮ ಬಾರಿಗೆ ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಯುವ ಮತದಾರರನ್ನು ನೋಂದಾಯಿಸಿದ ಕೀರ್ತಿ ಜಿಲ್ಲೆಯದಾಗಿದೆ ಎಂದರು.ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ 1,222 ಮತಗಟ್ಟೆಗಳಿಗೆ 2445 (ಬ್ಯಾಲೆಟ್ ಯುನಿಟ್), 1716 (ಕಂಟ್ರೋಲ್ ಯುನಿಟ್) ಮತ್ತು 1857 (ವಿ.ವಿ.ಪ್ಯಾಟ್)ಗಳನ್ನು ಬಳಸಲಾಗುತ್ತಿದೆ ಎಂದರು.
*ಮತಗಟ್ಟೆಗಳ ವಿವರ:* ಜಿಲ್ಲೆಯಲ್ಲಿ ಗ್ರಾಮೀಣ ವ್ಯಾಪ್ತಿಯಲ್ಲಿ 676 ಮತಗಟ್ಟೆ ಕೇಂದ್ರ, ನಗರ, ಪಟ್ಟಣ ಪ್ರದೇಶದಲ್ಲಿ 515 ಮತಗಟ್ಟೆ ಕೇಂದ್ರಗಳು ಸೇರಿ ಒಟ್ಟು 1,222 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕಂಪ್ಲಿ-240, ಸಿರಗುಪ್ಪ-227, ಬಳ್ಳಾರಿ ಗ್ರಾಮೀಣ-242, ಬಳ್ಳಾರಿ ನಗರ-262 ಹಾಗೂ ಸಂಡೂರು ಕ್ಷೇತ್ರದಲ್ಲಿ 251 ಮತಗಟ್ಟೆಗಳಿವೆ. ಜಿಲ್ಲೆಯ 5 ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 295 ಸೂಕ್ಷ್ಮ ಹಾಗೂ 73 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ. ಮತದಾನ ಪ್ರಮಾಣ ಕುಸಿತಕ್ಕೆ ಮೂಲ ಸೌಕರ್ಯದ ಕೊರತೆಯೂ ಒಂದು ಕಾರಣವಾಗಿದೆ ಎಂಬ ಅಂಶಗಳು ಕೇಳಿಬಂದ ಹಿನ್ನೆಲೆಯಲ್ಲಿ, ಈ ಬಾರಿ ಎಲ್ಲ ಮತಗಟ್ಟೆಗಳಿಗೆ ಅವಶ್ಯಕ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಕುಳಿತುಕೊಳ್ಳಲು ಬೆಂಚ್ ವ್ಯವಸ್ಥೆ ಹಾಗೂ ನೆರಳಿಗೆ ಶ್ಯಾಮಿಯಾನ ವ್ಯವಸ್ಥೆಯನ್ನೂ ಮಾಡಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಮತಗಟ್ಟೆಯ ಸಿಬ್ಬಂದಿಗಳಿಗೆ ಈಗಾಗಲೆ ಎರಡು ಬಾರಿ ತರಬೇತಿ ನೀಡಿದ್ದು, ಮೇ. 09 ರಂದು ಕೂಡ ಅಗತ್ಯ ಮಾಹಿತಿ ನೀಡಿ ತರಬೇತಿ ನೀಡಲಾಗುವುದು. ಮತ ಎಣಿಕೆ ಸಿಬ್ಬಂದಿ, ಅಧಿಕಾರಿಗಳಿಗೆ ಮೇ. 07 ರಂದು ಮತ್ತು ಮೇ. 12 ರಂದು ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್:* ಈ ಹಿಂದಿನ ಚುನಾವಣೆಗಳಲ್ಲಿ ಒಟ್ಟಾರೆ ಮತಗಟ್ಟೆಯ ಶೇ. 10 ರಷ್ಟು ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ಬಾರಿ ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯ ಒಟ್ಟು 1,222 ಮತಗಟ್ಟೆಗಳ ಪೈಕಿ 700 ಮತಗಟ್ಟೆಗಳಿಗೆ ಅಂದರೆ ಶೇ. 50 ಕ್ಕಿಂತ ಹೆಚ್ಚು ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಿ, ಸಿಸಿ ಟಿವಿ ಕ್ಯಾಮೆರಾ ಮೂಲಕ ನೇರವಾಗಿ ಲೈವ್ ವಿಡಿಯೋ ನೋಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಚುನಾವಣಾ ಕಾರ್ಯದ ಮೇಲುಸ್ತುವಾರಿಗೆ ಕೇಂದ್ರ ಸರ್ಕಾರಿ ಇಲಾಖೆ, ಬ್ಯಾಂಕ್ಗಳಿಗೆ ಸಂಬಂಧಿಸಿದ ಒಟ್ಟು 184 ಮೈಕ್ರೋ ಆಬ್ಸರ್ವರ್ಗಳನ್ನು ಮತಗಟ್ಟೆಗಳಿಗೆ ನಿಯೋಜಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲಾಗುತ್ತದೆ ಎಂದರು.
*ಮತಗಟ್ಟೆಗಳಿಗೆ 5,815 ಸಿಬ್ಬಂದಿ ನೇಮಕ:* ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ಚುನಾವಣಾ ಆಯೋಗದ ನಿಯಮಾನುಸಾರ ಮತದಾನ ಜರುಗಿಸಲು ಅಗತ್ಯ ಕ್ರಮ ವಹಿಸಲಾಗಿದೆ. ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲು 1,457 ಪಿ.ಆರ್.ಒ, 1,483 ಎ.ಪಿ.ಆರ್.ಒ, 2,875 ಪಿ.ಓ ಹಾಗೂ ಹೆಚ್ಚುವರಿಯಾಗಿ 99 ಸಿಬ್ಬಂದಿ ಸೇರಿ ಒಟ್ಟು 5,815 ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಮತ್ತು ಪ್ರತಿ ಮತಗಟ್ಟೆಗಳಿಗೆ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಕಂಪ್ಲಿ ಕ್ಷೇತ್ರಕ್ಕೆ 1137, ಸಿರಗುಪ್ಪ-1093, ಬಳ್ಳಾರಿ ಗ್ರಾಮೀಣ-1172, ಬಳ್ಳಾರಿ ನಗರ-1226 ಹಾಗೂ ಸಂಡೂರು ಕ್ಷೇತ್ರಕ್ಕೆ 1187 ಸಿಬ್ಬಂದಿಗಳನ್ನು ಮತದಾನ ದಿನದ ಕಾರ್ಯಕ್ಕೆ ನಿಯೋಜಿಸಲಾಗಿದೆ.
*ಮತದಾನ ದಿನದಂದು 316 ವಾಹನಗಳ ಬಳಕೆ:* ಮೇ. 10 ರಂದು ಜರುಗುವ ಮತದಾನ ಕಾರ್ಯಕ್ಕಾಗಿ ಬಸ್ಸುಗಳು, ಮಿನಿ ಬಸ್ಸು, ಟ್ರ್ಯಾಕ್ಸ್ ಸೇರಿದಂತೆ ಒಟ್ಟು 316 ವಾಹನಗಳನ್ನು ಬಳಸಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಪೈಕಿ 184 ಬಸ್ಸುಗಳು, 62 ಮಿನಿ ಬಸ್ಸುಗಳು, 60 ಟ್ರ್ಯಾಕ್ಸ್ ಮತ್ತು ಇತರೆ ವಾಹನ ಬಳಸಲಾಗುತ್ತಿದ್ದು, ಇವಿಎಂ ಗಳನ್ನು ಸಾಗಿಸಲು ಒಟ್ಟು 10 ಬಸ್ ಗಳನ್ನು ಒದಗಿಸಲಾಗುತ್ತಿದೆ.
*ಮನೆಯಿಂದ ಮತದಾನ:* ಏ.29 ರಿಂದ ಮೇ.01 ರವರೆಗೆ 80 ವರ್ಷ ಮೇಲ್ಪಟ್ಟ ಮತದಾರರು ಹಾಗೂ ವಿಕಲಚೇತನ ಮತದಾರರ ಮನೆ ಮನೆಗೆ ತೆರಳಿ ಮತದಾನ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಮನೆಯಿಂದಲೇ ಮತದಾನ ಮಾಡಲು ನೊಂದಾಯಿಸಿಕೊಂಡಿದ್ದ 80 ವರ್ಷ ಮೇಲ್ಪಟ್ಟ ವಯಸ್ಕರು ಹಾಗೂ ವಿಶೇಷ ಚೇತನರ 277 ಮತದಾರರ ಪೈಕಿ 254 ಮತದಾರರು ಮತದಾನ ಮಾಡಿದ್ದಾರೆ ಎಂದು ತಿಳಿಸಿದರು.
*ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್:* ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯವನ್ನು ಆಯಾ ವಿಧಾನಸಭಾ ಮತಕ್ಷೇತ್ರಗಳ ಕೇಂದ್ರ ಸ್ಥಾನಗಳಲ್ಲಿ ಮಾಡಲಾಗುತ್ತದೆ. 91-ಕಂಪ್ಲಿ ವಿಧಾನಸಭಾ ಮತಕ್ಷೇತ್ರದ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯವನ್ನು ನಗರದ ಸುಧಾಕ್ರಾಸ್ನ ಸೆಂಟ್ ಫಿಲೊಮೀನಾಸ್ ಹೈಸ್ಕೂಲ್, 92-ಸಿರುಗುಪ್ಪ ವಿಧಾನಸಭಾ ಮತಕ್ಷೇತ್ರದಲ್ಲಿ ಸಿರುಗುಪ್ಪದ ಬಳ್ಳಾರಿ ರಸ್ತೆಯ ವಿವೇಕಾನಂದ ಪಬ್ಲಿಕ್ ಶಾಲೆ, 93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರ- ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್, 94-ಬಳ್ಳಾರಿ ನಗರ ವಿಧಾನಸಭಾ ಮತಕ್ಷೇತ್ರ-ನಗರದ ಕೋಟೆ ಪ್ರದೇಶದ ಸೆಂಟ್ ಜಾನ್ಸ್ ಕಂಪೋಸಿಟ್ ಜ್ಯೂನಿಯರ್ ಕಾಲೇಜ್, 95-ಸಂಡೂರು ವಿಧಾನಸಭಾ ಮತಕ್ಷೇತ್ರದ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯವನ್ನು ಸಂಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು.
*ಆರ್.ವೈ.ಎಂ.ಇ. ಕಾಲೇಜ್ನಲ್ಲಿ ಮತ ಎಣಿಕಾ ಕೇಂದ್ರ:* ಮತದಾನ ಪೂರ್ಣಗೊಂಡ ನಂತರ ಮತದಾನವಾದ ವಿದ್ಯುನ್ಮಾನ ಮತಯಂತ್ರಗಳನ್ನು ಹಾಗೂ ಮಹತ್ವದ ದಾಖಲೆಗಳನ್ನು ಪೊಲೀಸ್ ಭದ್ರತೆಯೊಂದಿಗೆ ಮತ ಎಣಿಕೆ ಕೇಂದ್ರವಾದ ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರ್ಪ ಇಂಜಿನಿಯರಿಂಗ್ ಕಾಲೇಜ್ನಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದ್ದು, ಮೇ 13 ರಂದು ಮತ ಎಣಿಕೆ ಕಾರ್ಯ ಇದೇ ಕಾಲೇಜಿನಲ್ಲಿ ನಡೆಯಲಿದೆ.
*ಈ ದಾಖಲೆಯಿದ್ದರೆ ಮತ ಚಲಾಯಿಸಬಹುದು:* ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ಇಲ್ಲದಿದ್ದಲ್ಲಿ, ಮತ ಚಲಾಯಿಸಲು ಈ ಕೆಳಕಂಡ ಪರ್ಯಾಯ ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆ ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ. ಮತದಾರ ಆಧಾರ ಕಾರ್ಡ್, ಎಂ.ಎನ್.ಆರ್.ಇ.ಜಿ.ಎ. ಜಾಬ್ ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಕಚೇರಿ ನೀಡಿರುವ ಭಾವಚಿತ್ರ ಇರುವ ಪಾಸ್ ಬುಕ್, ಕಾರ್ಮಿಕ ಸಚಿವಾಲಯದಿಂದ ನೀಡಿರುವ ಆರೋಗ್ಯ ವಿಮೆ ಕಾರ್ಡ್, ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್), ಪ್ಯಾನ್ ಕಾರ್ಡ್, ಎನ್.ಪಿ.ಆರ್ ನ ಅಡಿಯಲ್ಲಿ ಆರ್.ಜಿ.ಐ. ನೀಡಿರುವ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್ಪೋರ್ಟ್, ಭಾವಚಿತ್ರ ಇರುವ ಪಿಂಚಣಿ ದಾಖಲೆ, ಸೇವಾ ಗುರುತಿನ ಚೀಟಿ (ಕೇಂದ್ರ, ರಾಜ್ಯ ಸರ್ಕಾರ, ಪಿಎಸ್ಯು ಗಳ ಗುರುತಿನ ಚೀಟಿ) ಎಂ.ಪಿ, ಎಂ.ಎಲ್.ಎ, ಎಂ.ಎಲ್.ಸಿ. ಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ ದಾಖಲೆ.
ಜಿಲ್ಲೆಯಲ್ಲಿ ಮತದಾರನ ಹೆಸರು, ಕ್ರಮಸಂಖ್ಯೆ, ಮತಗಟ್ಟೆ ವಿವರ ಇರುವ ವೋಟರ್ ಸ್ಲೀಪ್ಗಳನ್ನು ಮತ್ತು ಮತದಾನದ ಸ್ಥಳ ಹಾಗೂ ಇತರ ವಿವರ ಇರುವ ವೋಟರ್ ಗೈಡ್ಗಳನ್ನು ಸಂಬಂಧಪಟ್ಟ ಮತದಾರರ ಮನೆ ಮನೆಗೆ ವಿತರಿಸುವ ಕಾರ್ಯವನ್ನು ಬೂತ್ ಮಟ್ಟದ ಅಧಿಕಾರಿಗಳು ಕೈಗೊಂಡಿದ್ದು, ಈಗಾಗಲೆ ಶೇ. 96 ರಷ್ಟು ವಿತರಣೆಯಾಗಿದೆ, ಉಳಿದ ಶೇ. 04 ಕೂಡ ಇನ್ನೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು. ವೋಟರ್ ಸ್ಲಿಪ್ ಅನ್ನು ಮತದಾರರ ಗುರುತಿನ ಪತ್ರವೆಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ ಮತದಾರರು ವೋಟರ್ ಸ್ಲಿಪ್ ಜೊತೆಗೆ ಎಪಿಕ್ ಕಾರ್ಡ್ ಅಥವಾ ಮೇಲೆ ತಿಳಿಸಿದ ಪರ್ಯಾಯ ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಕಡ್ಡಾಯವಾಗಿ ಮತಗಟ್ಟೆಯಲ್ಲಿ ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು ಅವರು ಮಾತನಾಡಿ, ಜಿಲ್ಲೆಯಲ್ಲಿ ಮತದಾನ ದಿನದಂದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲು ಹಾಗೂ ಭದ್ರತೆಗೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 1,738 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಭದ್ರತಾ ಕಾರ್ಯಕ್ಕೆಂದೇ ಸುಮಾರು 3500 ಸಿಬ್ಬಂದಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
*ಭದ್ರತಾ ಸಿಬ್ಬಂದಿಗಳ ವಿವರ:* ಮತದಾನ ದಿನದಂದು ಮತಗಟ್ಟೆಗಳಿಗೆ ಭದ್ರತೆಯನ್ನು ಒದಗಿಸಲು, 1 ಎಸ್ಪಿ, 1 ಡಿವೈಎಸ್ಪಿ, 22 ಸಿಪಿಐ/ಪಿಐ, 44 ಪಿಎಸ್ಐ, 116 ಎಎಸ್ಐ, 952 ಹೆಚ್ಸಿ ಮತ್ತು ಪಿಸಿ, 591 ಗೃಹ ರಕ್ಷಕ ದಳ ಸಿಬ್ಬಂದಿ, 4 ಜನ ಅರಣ್ಯ ಸಿಬ್ಬಂದಿ ಸೇರಿ ಒಟ್ಟು 1,738 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅದರಲ್ಲಿ ಜಿಲ್ಲೆಯವರು 741, ಹೊರಗಿನವರು 922, ಡಿಎಆರ್ ಸಿಬ್ಬಂದಿ 75, ಸಿಎಪಿಎಫ್ 12, ಕೆಎಸ್ಆರ್ಪಿ 5 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
*ಮತ ಎಣಿಕೆ ದಿನದ ಭದ್ರತಾ ಸಿಬ್ಬಂದಿ:* ಮತ ಎಣಿಕೆ ದಿನವಾದ ಮೇ 13 ರಂದು ಮತ ಎಣಿಕೆ ಕೇಂದ್ರವಾದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರ್ಪ ಇಂಜಿನಿಯರಿಂಗ್ ಕಾಲೇಜ್ನಲ್ಲಿ ಬಿಗಿ ಭದ್ರತೆ ಒದಗಿಸಲು 4 ಡಿಎಸ್ಪಿ, 12 ಪಿಐ, 23 ಪಿಎಸ್ಐ, 90 ಎಎಸ್ಐ, 484 ಹೆಡ್ ಕಾನ್ಸ್ಟೇಬಲ್ ಮತ್ತು ಪೊಲೀಸ್ ಕಾನ್ಸ್ಸ್ಟೇಬಲ್, 20 ಡಬ್ಲ್ಯೂ ಸ್ಟಾಫ್, 4 ಡಿಎಆರ್, 3 ಕೆಎಸ್ಆರ್ಪಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
*ವಶಪಡಿಸಿಕೊಂಡ ಸಾಮಗ್ರಿಗಳ ವಿವರ:* ಚುನಾವಣೆ ನೀತಿ ಸಂಹಿತೆ ಘೊಷಣೆಯ ಬಳಿಕ ಈವರೆಗೆ ಜಿಲ್ಲೆಯಲ್ಲಿ ರೂ.1.33 ಕೋಟಿ ನಗದು, 54.01 ಲಕ್ಷ ರೂ. ಮೌಲ್ಯದ 16,057 ಲೀ. ಮದ್ಯ, 2.8 ಕೆ.ಜಿ ಮಾದಕವಸ್ತು, 7.50 ಲಕ್ಷ ರೂ. ನಷ್ಟು ಸೀರೆ, ಹಾಗೂ 33 ಲಕ್ಷ ಮೌಲ್ಯದ ಬಂಗಾರ, ರೂ.3 ಲಕ್ಷ ಮೌಲ್ಯದ 4 ಕೆಜಿಯಷ್ಟು ಬೆಳ್ಳಿ ಹಾಗೂ 4 ವಾಹನಗಳನ್ನು ಪೊಲೀಸ್ ಇಲಾಖೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಉಪಸ್ಥಿತರಿದ್ದರು.
------
ಮುದ್ರಣ ಜಾಹೀರಾತಿಗೆ ಅನುಮತಿ ಕಡ್ಡಾಯ
ಬಳ್ಳಾರಿ 06: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ 10 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾನ ಮುಕ್ತಾಯ ಸಮಯದ ಪೂರ್ವ 48 ಗಂಟೆ ಅವಧಿಯಲ್ಲಿ ಅಂದರೆ (ಮೇ 09 ಮತ್ತು ಮೇ 10 ರಂದು) ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿ, ಸಂಘ-ಸಂಸ್ಥೆ, ವ್ಯಕ್ತಿಗತವಾಗಿ ಮುದ್ರಣ ಮಾಧ್ಯಮದಲ್ಲಿ ಚುನಾವಣೆಗೆ ಸಂಬಂಧಿಸಿದ ಜಾಹೀರಾತು ಪ್ರಕಟಿಸಬೇಕಾದಲ್ಲಿ ಸಂಬಂಧಿಸಿದ ಜಿಲ್ಲಾ ಅಥವಾ ರಾಜ್ಯ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಜಾಹೀರಾತು ಪ್ರಕಟಿಸಲು ಪೂರ್ವಾನುಮತಿಗೆ ಮುಖ್ಯ ಚುನಾವಣಾಧಿಕಾರಿಗಳು, ನಿರ್ವಾಚನ ನಿಲಯ, ಶೇಷಾದ್ರಿ ರಸ್ತೆ, ಬೆಂಗಳೂರು ಇಲ್ಲಿ ಸ್ಥಾಪಿಸಲಾಗಿರುವ ರಾಜ್ಯ ಮಟ್ಟದ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಗೆ ಹಾಗೂ ಅದೇ ರೀತಿ ಜಿಲ್ಲೆಯ ಚುನಾವಣಾ ಕಣದಲ್ಲಿರುವ ಅಭ್ಯೃರ್ಥಿಗಳು ತಮ್ಮ ಚುನಾವಣಾ ಜಾಹೀರಾತನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ವಾರ್ತಾ ಇಲಾಖೆ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಗೆ ಮೇ 07ರೊಳಗೆ ಅನುಬಂಧ-ಸಿ ನಿಗಧಿತ ಅರ್ಜಿ ನಮೂನೆಯೊಂದಿಗೆ ಸ್ವಯಂ ದೃಢೀಕೃತ ಎರಡು ಜಾಹೀರಾತು ಪ್ರತಿಯನ್ನು ಸಲ್ಲಿಸಿ ಪೂರ್ವಾನುಮತಿ ಪಡೆದು ಜಾಹೀರಾತು ಪ್ರಕಟಿಸುವುದು ಕಡ್ಡಾಯವಾಗಿರುತ್ತದೆ.
ಇನ್ನು ಚುನಾವಣಾ ಬಹಿರಂಗ ಪ್ರಚಾರ ಮೇ 08 ರಂದು ಸಂಜೆ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಎಂದಿನಂತೆ ಜಿಲ್ಲಾ ಎಂ.ಸಿ.ಎಂ.ಸಿ ಸಮಿತಿಯಿಂದ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗೆ ಮೇ 08 ರ ಸಂಜೆ 5 ಗಂಟೆವರೆಗಿನ ಅವಧಿಗೆ ಮಾತ್ರ ಸುದ್ದಿ ವಾಹಿನಿ, ಕೇಬಲ್ ಟಿ.ವಿ., ರೇಡಿಯೋ, ಸಾಮಾಜಿಕ ಜಾಲತಾಣ, ಇತರೆ ಸಾರ್ವಜನಿಕ ಡಿಸ್ಪ್ಲೆ ಗಳಲ್ಲಿ ಚುನಾವಣಾ ಜಾಹೀರಾತು ಬಿತ್ತರಿಸಲು ಸಮಿತಿಯಿಂದ ಪೂರ್ವಾನುಮತಿ ನೀಡಲಾಗುತ್ತದೆ.
*ಪೂರ್ವಾನುಮತಿ ಇಲ್ಲದೆ ಜಾಹೀರಾತು ಪ್ರಕಟಿಸುವಂತಿಲ್ಲ:*
ಇನ್ನು ಎಲ್ಲ ಪತ್ರಿಕೆಗಳು ಮೇ 09 ಮತ್ತು 10 ರಂದು ಯಾವುದೇ ಚುನಾವಣಾ ಜಾಹಿರಾತುಗಳನ್ನು ಪ್ರಕಟಿಸುವ ಮುನ್ನ ಎಂ.ಸಿ.ಎಂ.ಸಿ ಸಮತಿಯಿಂದ ಪೂರ್ವಾನುಮತಿ ಪಡೆಯಲಾಗಿದಿಯೇ ಎಂಬುದನ್ನು ಖಾತ್ರಿಪಡಿಸಿಕೊಂಡ ಬಳಿಕವೇ ಜಾಹೀರಾತು ಪ್ರಕಟಿಸಬೇಕು, ಅನುಮತಿ ಇಲ್ಲದೆ ಹೋದಲ್ಲಿ ಜಾಹೀರಾತು ಪ್ರಕಟಿಸುವಂತಿಲ್ಲ.
ಮತದಾನದ ಪೂರ್ವ 72 ಗಂಟೆ ಅವಧಿಯಲ್ಲಿ ಬಿತ್ತರಿಸುವ ಸುದ್ದಿ, ಪ್ರಸಾರಗಳ ಮೇಲೆ ಚುನಾವಣ ಆಯೋಗ ತೀವ್ರ ನಿಗಾವಹಿಸಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
------
ಮತದಾನದ 48 ಗಂಟೆ ಮುನ್ನ ಚುನಾವಣಾ ಚರ್ಚೆ, ಸಂವಾದ, ಸಮೀಕ್ಷೆಗಳಿಗೆ ನಿಬಂರ್ಧ
ಬಳ್ಳಾರಿ 06:ಕರ್ನಾಟಕ ವಿಧಾನಸಭಾ ಚುನಾವಾಣೆಗೆ ಮೇ 10 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾನ ಮುಕ್ತಾಯ ಸಮಯದ ಪೂರ್ವ 48 ಗಂಟೆ ಅವಧಿಯಲ್ಲಿ ಅಂದರೆ (ಮೇ 08ರ ಸಾಯಂಕಾಲ 6 ಗಂಟೆಯಿಂದ ಮೇ 10ರ ಸಾಯಂಕಾಲ 6.30 ರವರೆಗೆ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಮೇಲೆ ಪ್ರಭಾವ ಬೀರುವ ರೀತಿ, ಟಿ.ವಿ. ವಾಹಿನಿಗಳಲ್ಲಿ ಸಿನಿಮಾಟೋಗ್ರಾಫಿ, ಚರ್ಚೆ, ಸಂವಾದ, ವಿಶ್ಲೇಷಣೆ, ಚುನಾವಣೋತ್ತರ ಸಮೀಕ್ಷೆ, ಹೀಗೆ ಯಾವುದೇ ಜಾಹೀರಾತು ಹಾಗೂ ಸುದ್ದಿಯನ್ನು ವಿದ್ಯುನ್ಮಾನ ವಾಹಿನಿ, ಕೇಬಲ್ ಟಿ.ವಿ., ರೇಡಿಯೋ, ಸಾಮಾಜಿಕ ಜಾಲತಾಣ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದಾಗಲಿ ಅಥವಾ ಬಿತ್ತರಿಸುವುದನ್ನು ಪ್ರಜಾ ಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್ 125 ರಂತೆ ನಿಬಂರ್ಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪವನ್ಕುಮಾರ ಮಾಲಪಾಟಿ ಅವರು ತಿಳಿಸಿದ್ದಾರೆ.
ಒಂದು ವೇಳೆ ನಿಯಮ ಉಲ್ಲಂಘಿಸಿ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸುದ್ದಿ ಬಿತ್ತರಿಸಿದಲ್ಲಿ ಅಂತಹವರ ವಿರುದ್ಧ ಪ್ರಜಾ ಪ್ರಾತಿನಿಧ್ಯ ಕಾಯ್ದೆ-1951ರ ಕಲಂ 126ರ ಅನ್ವಯ 2 ವರ್ಷಗಳ ಶಿಕ್ಷೆ ಅಥವಾ ದಂಡ, ಇಲ್ಲವೆ ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಮತದಾನ ಪೂರ್ವ 48 ಗಂಟೆ ಅವಧಿಯಲ್ಲಿ ಮಾಧ್ಯಮಗಳು ವಿದ್ಯುನ್ಮಾನ ವಾಹಿನಿ, ಕೇಬಲ್ ಟಿ.ವಿ, ರೇಡಿಯೋ, ಸಾಮಾಜಿಕ ಜಾಲತಾಣ ಹಾಗೂ ಡಿಜಿಟಲ್ ಮಾಧ್ಯಮ ಸಂಸ್ಥೆಗಳು ಬಿತ್ತರಿಸುವ ಚುನಾವಣಾ ಸುದ್ದಿಯಲ್ಲಿ ಯಾವುದೇ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದ ಪರವಾಗಿರುವ ಮತ್ತು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವಂತಹ ಪ್ಯಾನಲಿಸ್ಟ್ ಅಭಿಪ್ರಾಯಗಳು, ಮನವಿಗಳು ಇಲ್ಲದಿರುವುದುನ್ನು ಖಚಿತಪಡಿಸಿಕೊಳ್ಳಬೇಕು. ಇದಲ್ಲದೆ ಯಾವುದೇ ಅಭಿಪ್ರಾಯ ಸಂಗ್ರಹದ ಫಲಿತಾಂಶ ಪ್ರಕಟ, ವಿಶ್ಲೇಷಣೆ, ಪ್ರದರ್ಶನ ಮಾಡುವುದನ್ನು ಸಹ ನಿಬಂರ್ಧಿಸಲಾಗಿದೆ.
ಎಕ್ಸಿಟ್ ಪೋಲ್ ನಿಷೇಧ:
ಮತದಾನದ ಪೂರ್ವ 48 ಗಂಟೆ ಮತ್ತು ಮತದಾನದ ಸಮಯ ಮುಗಿದ ನಂತರದ ಅರ್ಧ ಗಂಟೆ ವರೆಗೂ ಯಾವುದೇ ಸುದ್ದಿ ವಾಹಿನಿ, ಕೇಬಲ್ ಟಿ.ವಿ. ಸೇರಿದಂತೆ ಇನ್ನಿತರ ಡಿಜಿಟಲ್ ಮಾಧ್ಯಮಗಳು ಎಕ್ಸಿಟ್ ಪೋಲ್ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಎಲ್ಲಾ ಮಾಧ್ಯಮ ಸಂಸ್ಥೆಗಳು ಚುನಾವಣಾ ಆಯೋಗವು ಕಾಲ ಕಾಲಕ್ಕೆ ಹೊರಡಿಸುವ ಎಲ್ಲಾ ಮಾರ್ಗದರ್ಶನಗಳನ್ನು ಪಾಲಿಸಬೇಕೆಂದು ಅವರು ತಿಳಿಸಿದ್ದಾರೆ.
------