ಜಿಪಂ ನಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ
ವಿಜಯಪುರ 23: ಜುಲೈ 2ನೇ ವಾರದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಆದಾಗ್ಯೂ ಮಳೆ ಅಭಾವದಿಂದ ಜಿಲ್ಲೆಯಾದ್ಯಂತ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜವಾಬ್ದಾರಿ ಅರಿತು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಡಾ. ಎಂ.ಬಿ. ಪಾಟೀಲ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆ ಸೇರಿದಂತೆ ಗ್ರಾಮೀಣ, ನಗರ, ಸ್ಥಳೀಯ ಸಂಸ್ಥೆ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಆಯಾ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ವಿದ್ಯುತ್ ಪರಿವರ್ತಕಗಳ ಸಮಸ್ಯೆಯಿದ್ದಲ್ಲಿ ಸ್ಪೀಡ್ ಅಪ್ ಮಾಡಿ ಕುಡಿಯುವ ನೀರಿಗೆ ತಕ್ಷಣಕ್ಕೆ ವಿದ್ಯುತ್ ಪೂರೈಕೆಯಾಗುವಂತೆ ಹೆಸ್ಕಾಂ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಖಾಸಗಿ ಬೋರ್ ವೆಲ್ ಗುರುತಿಸಿ: ಎಲ್ಲೆಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಬಹುದೋ,ಮುಂಚಿತವಾಗಿ ಮಾಹಿತಿ ಪಡೆದುಕೊಂಡು ಅಂತಹ ಸ್ಥಳದಲ್ಲಿ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅದಕ್ಕೆಂದೇ ಖಾಸಗಿ ಬೋರವೆಲ್ ಗಳನ್ನು ಗುರುತಿಸಿ, ಅತಿ ಅವಶ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ವಹಿಸಬೇಕು ಎಂದರು. ಮಳೆ ಬರುವವರೆಗೆ ಮುಂಚಿತವಾಗಿ ಯೋಜನೆ ರೂಪಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದರು.