ಬಳ್ಳಾರಿಯ ಹಳೇ ಬಸ್ ನಿಲ್ದಾಣಕ್ಕೆ ದಿ. ಪುನೀತ್ ರಾಜ್ಕುಮಾರ್ ನಾಮಕರಣಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿ
ಲೋಕದರ್ಶನ ವರದಿ
ಬಳ್ಳಾರಿ 09: ಬಳ್ಳಾರಿಯ ಹಳೇ ಬಸ್ನಿಲ್ದಾಣಕ್ಕೆ ದಿ. ಪುನೀತ್ ರಾಜ್ಕುಮಾರ್ ನಾಮಕರಣ ಮಾಡುವ ಒತ್ತಾಯಿಸಿ ಅಖಿಲ ಕರ್ನಾಟಕ ಅಪ್ಪು ಸೇವಾ ಸಮಿತಿ, ಬಳ್ಳಾರಿ ಜಿಲ್ಲಾ ಘಟಕವು ಬಳ್ಳಾರಿಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದೆ.
ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ, ಈ ನಾಡು ಕಂಡು ಕನ್ನಡ ಚಲನಚಿತ್ರ ನಟ, ಪವರ್ ಸ್ಟಾರ್ ಎಂದೇ ಬಿರುದಾಂಕಿತರಾದ ದಿ. ಪುನೀತ್ ರಾಜ್ಕುಮಾರ್ ಅವರು ದಿ. 29ರಂದು ಹೃದಯಾಘಾತದಿಂದ ನಿಧನರಾಗಿದ್ದು, ಪುನೀತ್ ರಾಜ್ಕುಮಾರ್ ಬಾಲ್ಯದಿಂದಲೇ ಕನ್ನಡ ಚಲನಚಿತ್ರಗಳಲ್ಲಿ ತಂದೆಯವರಾದ ಡಾ.ರಾಜ್ಕುಮಾರ್ ಅವರ ಜೊತೆಯಲ್ಲಿ ನಟಿಸಿದ್ದಲ್ಲದೆ, ಸ್ವತಂತ್ರವಾಗಿ ‘ಬೆಟ್ಟದ ಹೂ’ ಎಂಬ ಬಾಲ ನಟರಾಗಿ ಅಭಿನಯಿಸಿ ರಾಷ್ಟ್ರ್ರಶಸ್ತಿಯನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಪುನೀತ್ ಅವರು ಯುವ ನಟರಾಗಿ ತಂದೆಯವರ ಮಾರ್ಗದರ್ಶನದಂತೆ ಯುವಕರಿಗೆ ಮಾದರಿಯಾಗುವಂತಹ, ಸಾಮಾಜಿಕ ಕಳಕಳಿಯ ಸಂದೇಶ ನೀಡುವಂತಹ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆ, ಶಕ್ತಿಧಾಮ, 45 ಉಚಿತ ಶಾಲೆ, 1800, ಬಾಲಕಿಯರಿಗೆ ಉಚಿತ ಶಿಕ್ಷಣ ವ್ಯವಸ್ಥೆ, ಸೇರಿದಂತೆ ಅನಾರೋಗ್ಯದಲ್ಲಿರುವವರಿಗೆ ಧನಸಹಾಯ ಮಾಡುವ ಮೂಲಕ ತಮ್ಮ ಮಾನವೀಯ ಮೌಲ್ಯವನ್ನು ಮೆರೆದಿದ್ದಾರೆ. ಅವರು ನೇತ್ರದಾನವನ್ನು ಮಾಡುವ ಮೂಲಕ ಮಾದರಿ ವ್ಯಕ್ತಿಯಾಗಿದ್ದಾರೆ. ಇಂತಹ ಆದರ್ಶ ವ್ಯಕ್ತಿತ್ವವನ್ನು ಹೊಂದಿರುವ ಪುನೀತ್ ಅವರ ಹೆಸರನ್ನು ಬಳ್ಳಾರಿಯ ಹಳೆ ಬಸ್ನಿಲ್ದಾಣಕ್ಕೆ ನಾಮಕರಣ ಮಾಡಿದರೆ ಅವರ ಹೆಸರನ್ನು ಸದಾ ಸ್ಮರಿಸಿದಂತಾಗುತ್ತದೆ. ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಿದಂತಾಗುತ್ತದೆ. ಮುಂದಿನ ಪೀಳಿಗೆಗೂ ಅವರ ಉತ್ತಮ ಗುಣಗಳನ್ನು ಪರಿಚಯಿಸಿದಂತಾಗುತ್ತದೆ. ಆದ್ದರಿಂದ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಹಳೇ ಬಸ್ ನಿಲ್ದಾಣಕ್ಕೆ ನಾಮಕರಣ ಮಾಡಿ ಬಳ್ಳಾರಿಯ ಹಿರಿಮೆಯನ್ನು ಎತ್ತಿಹಿಡಿಯಬೇಕೆಂದು ಸಮಿತಿಯ ಅಧ್ಯಕ್ಷರಾದ ಹೆಚ್.ರವಿಕುಮಾರ ಕೋರಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಜೆ.ಪಿ.ಮಂಜುನಾಥ, ಸಿದ್ಮಲ್ ಮಂಜುನಾಥ, ಚಂದ್ರಶೇಖರ ಆಚಾರ್, ಕೆ.ರಮೇಶ್, ಮುಂಡಾಸದ ಮಲ್ಲಿಕಾರ್ಜುನ, ಹುಂಡೇಕರ್ ರಾಜೇಶ್, ಕುಮಾರಸ್ವಾಮಿ, ಪ್ರವೀಣ್ ಗಟ್ಟೀನ್, ಪಂಪಾಪತಿ ಸೂರಜ್, ಚಿರಂಜೀವಿ, ಗಾದಿಲಿಂಗ, ನಾಗರಾಜ, ವೆಂಕಟೇಶ್, ರಾಜಶೇಖರ್, ದಸ್ತಗಿರಿ ಮುಂತಾದವರು ಹಾಜರಿದ್ದರು.
ನಂತರ ಇದೇ ನಿಯೋಗವು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೂ ಮನವಿ ಪತ್ರವನ್ನು ಸಲ್ಲಿಸಿತು.