ವಿಜಯಪುರ

ವಿಶೇಷಚೇತನರಿಗೆ 191 ಸಹಾಯಕ ಸಾಧನ ವಿತರಣೆ

ವಿಶೇಷಚೇತನರಿಗೆ 191 ಸಹಾಯಕ ಸಾಧನ ವಿತರಣೆ


ಕೊಲ್ಹಾರ 21: ವಿಶೇಷಚೇತನರ ಸ್ವಾವಲಂಬನೆ ಹಾಗೂ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಕೂಡಗಿ ಎನ್‌ಟಿಪಿಸಿ ವತಿಯಿಂದ ಸಿಎಸ್‌ಆರ್ ಯೋಜನೆಯಡಿ ಸಹಾಯಕ ಸಾಧನಗಳನ್ನು ವಿತರಿಸಲಾಯಿತು.  

ಕೂಡಗಿ ಎನ್‌ಟಿಪಿಸಿ ಹಾಗೂ ಬೆಂಗಳೂರಿನ ಭಾರತೀಯ ಕೃತಕ ಅಂಗ ತಯಾರಿಕಾ ನಿಗಮ (ಎಎಲ್‌ಐಎಂಸಿಒ) ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೂಡಗಿ, ಮುತ್ಥಗಿ, ಮಸೂತಿ, ತೆಲಗಿ ಹಾಗೂ ಗೋಳಸಂಗಿ ಸುತ್ತಮುತ್ತಲಿನ ಗ್ರಾಮಗಳ 109 ವಿಶೇಷಚೇತನ ಫಲಾನುಭವಿಗಳಿಗೆ ಒಟ್ಟು 191 ಸಹಾಯಕ ಸಾಧನಗಳನ್ನು ವಿತರಿಸಲಾಯಿತು. ಸಾಧನಗಳ ಒಟ್ಟು ಮೌಲ್ಯ ಸುಮಾರು ?30 ಲಕ್ಷ.  

ಮೋಟಾರ್ ಚಾಲಿತ ತ್ರಿಚಕ್ರ ವಾಹನ, ಗಾಲಿಕುರ್ಚಿ, ಶ್ರವಣ ಸಾಧನ, ಊರುಗೋಲು, ವಿವಿಧ ವಾಕಿಂಗ್ ಏಡ್ಸ್‌, ಶೈಕ್ಷಣಿಕ ಕಿಟ್, ಸ್ಮಾರ್ಟ್‌ಫೋನ್, ಕೃತಕ ಅಂಗ ಹಾಗೂ ಕ್ಯಾಲಿಪರ್‌ಗಳು ಸೇರಿದಂತೆ ವಿವಿಧ ಸಾಧನಗಳನ್ನು ಫಲಾನುಭವಿಗಳಿಗೆ ನೀಡಲಾಯಿತು.  

ಈ ಸಾಧನಗಳು ವಿಶೇಷಚೇತನರ ಚಲನವಲನ, ಸಂವಹನ, ಶಿಕ್ಷಣ ಹಾಗೂ ದೈನಂದಿನ ಚಟುವಟಿಕೆಗಳಿಗೆ ನೆರವಾಗುವುದರ ಜೊತೆಗೆ ಸ್ವಾವಲಂಬನೆ, ಆತ್ಮವಿಶ್ವಾಸ ಮತ್ತು ಗೌರವಯುತ ಜೀವನಕ್ಕೆ ಉತ್ತೇಜನ ನೀಡಲಿವೆ. ಸಮಾಜದ ಮುಖ್ಯವಾಹಿನಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅಗತ್ಯವಾದ ಪೂರಕ ವಾತಾವರಣ ಕಲ್ಪಿಸುವುದು ಈ ಸಿಎಸ್‌ಆರ್ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.  

ಕಾರ್ಯಕ್ರಮದಲ್ಲಿ ಕೂಡಗಿ ಎನ್‌ಟಿಪಿಸಿ ಯೋಜನಾ ಮುಖ್ಯಸ್ಥ ಸಂತೋಷ್ ತಿವಾರಿ, ಎಸ್‌.ಯು. ಹರಿದಾಸ್, ಸಂಜಿತ್ ದತ್ತಾ, ಎಸ್‌.ವಿ.ಡಿ. ರವಿಕುಮಾರ್, ಮುಖ್ಯ ವೈದ್ಯಾಧಿಕಾರಿ ಡಾ. ರಾಜ್ ಬೋರಾವಂಕರ್, ಕಾರ್ಮಿಕ ಸಂಘಟನೆಗಳು ಹಾಗೂ ಅಸೋಸಿಯೇಷನ್‌ಗಳ ಪ್ರತಿನಿಧಿಗಳು ಮತ್ತು ಎನ್‌ಟಿಪಿಸಿ ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ