ಲೇಖನಗಳು

ಕಣ್ಮರೆಯಾಗುತ್ತಿರುವ ಮಾನವೀಯ ಮೌಲ್ಯಗಳು

ಕಣ್ಮರೆಯಾಗುತ್ತಿರುವ ಮಾನವೀಯ ಮೌಲ್ಯಗಳು

ಕರುಣಾಳು ಬಾ ಬೆಳಕೇ 

ಮುಸುಕುದೀ ಮಬ್ಬಿನಲಿ 

ಕೈ ಹಿಡಿದು ನಡೆಸೆನ್ನನು 

ಇರುಳು ಕತ್ತಲೆಯ ಗವಿ 

ದಾರಿ ಬಲು ದೂರ 

ಕನಿಕರಿಸಿ ಕೈ ಹಿಡಿದು ನಡೆಸೆನ್ನನು 

ಎಂದರು ಕವಿ ಬಿ.ಎಂ.ಶ್ರೀಕಂಠಯ್ಯನವರು. ಇಂದು ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಕತ್ತಲಲ್ಲಿ ಮುಳುಗಿರುವ ಲೋಕಜನಕ್ಕೆ ಬೆಳಕಾಗುವಂಥ ಮನುಷ್ಯಪ್ರೀತಿಯ ಸೌಜನ್ಯದ ಮೌಲ್ಯಗಳು ಅವಶ್ಯಕವೆನಿಸಿವೆ. ಮನುಷ್ಯನಲ್ಲಿರಬೇಕಾದ ಅಗತ್ಯ ಗುಣಗಳನ್ನು ಮಾನವೀಯ ಮೌಲ್ಯಗಳೆನ್ನುತ್ತೇವೆ. ಪ್ರೀತಿ, ವಿಶ್ವಾಸ, ನಂಬಿಕೆ, ಕರುಣೆ, ದಯೆ, ಅನುಕಂಪ, ನಿಸ್ವಾರ್ಥ, ಸಹಾಯ ಮಾಡುವ ಗುಣ, ಸ್ನೇಹಪರತೆ, ಸೇವಾ ಮನೋಭಾವನೆ, ತಂದೆ-ತಾಯಿ, ಗುರು-ಹಿರಿಯರಲ್ಲಿ ಗೌರವ, ವಿಧೇಯತೆ, ಸಹೋದರತೆ ಎಲ್ಲವೂ ಮೌಲ್ಯಗಳ ಒಂದು ಮುಖಗಳೇ. “ಇಂದು ನಮಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ಜನಾಂಗದ ಬಗ್ಗೆ ಚಿಂತಿಸುವ ರಾಜಕಾರಣಿಗಳು, ಧಾರ್ಮಿಕ ನೇತಾರರು, ಆಧ್ಯಾತ್ಮವಾದಿಗಳು ಬೇಕಾಗಿದ್ದಾರೆ” ಎಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ನುಡಿದಿದ್ದಾರೆ. ನೈತಿಕತೆ, ಮೌಲ್ಯಗಳೇ ಇಲ್ಲದ ನೇತಾರರು ದೇಶವನ್ನು ಅಧಃಪತನದ ಹಾದಿಗೆ ತಳ್ಳುತ್ತಾರೆ. 

ಇಂದಿನ ವಿಚಿತ್ರ ಸನ್ನಿವೇಶವನ್ನು ಎಸ್‌. ಷಡಕ್ಷರಿ ಅವರು ತಮ್ಮ ‘ಕ್ಷಣ ಹೊತ್ತು ಆಣಿಮುತ್ತು’ ಪುಸ್ತಕದಲ್ಲಿ ಹೀಗೆ ದಾಖಲಿಸುತ್ತಾರೆ. ನಮ್ಮ ಮನೆಗಳು ದೊಡ್ಡದಾಗುತ್ತಿವೆ, ಆದರೆ ಕುಟುಂಬಗಳು ಚಿಕ್ಕದಾಗುತ್ತಿವೆ. ಜೊತೆಗೆ ಮನಸ್ಸುಗಳೂ ಕೂಡ. ಅನುಕೂಲಗಳು ಹೆಚ್ಚಿವೆ ಆದರೆ ಅನುಭವಿಸಲು ಸಮಯವೇ ಇಲ್ಲ. ಅಸಾಮಾನ್ಯ ವಿದ್ಯಾರ್ಹತೆಗಳಿವೆ ಆದರೆ ಸಾಮಾನ್ಯ ಜ್ಞಾನ ಕಡಿಮೆಯಾಗಿದೆ. ನಮ್ಮ ಆಸ್ತಿ-ಪಾಸ್ತಿಯ ಬೆಲೆ ಏರಿದೆ ಆದರೆ ನಮ್ಮ ಮೌಲ್ಯಗಳೇ ಇಳಿದಿವೆ. ನಮ್ಮ ಜೀವನಕ್ಕೆ ವರ್ಷಗಳನ್ನು ತುಂಬುತ್ತಿದ್ದೇವೆ ಆದರೆ ವರ್ಷಗಳಿಗೆ ಜೀವ ತುಂಬುತ್ತಿಲ್ಲ. ನಾವು ಚಂದ್ರಲೋಕವನ್ನು ಮುಟ್ಟಿ ಬಂದಿದ್ದೇವೆ. ಆದರೆ ನಮ್ಮ ಕಂಪೌಂಡ್ ದಾಟಿ ನೆರೆಯವರನ್ನು ಭೇಟಿಯಾಗಲು ಹೋಗಿಲ್ಲ. ಬರವಣಿಗೆ ಹೆಚ್ಚಾಗಿದೆ, ಅರಿವು ಕಡಿಮೆಯಾಗಿದೆ. ನಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದೆ, ಆದರೆ ನೈತಿಕತೆ ಕುಸಿದಿದೆ. ಗಂಡ-ಹೆಂಡಿರಿಬ್ಬರ ದುಡಿಮೆ ಹೆಚ್ಚಾಗಿದೆ, ವಿಚ್ಛೇದನಗಳು ಹೆಚ್ಚಾಗಿವೆ. ವಿಶ್ವಶಾಂತಿಯ ಬಗ್ಗೆ ಮಾತಾಡುತ್ತೇವೆ, ಮನೆಯವರೊಂದಿಗೆ ಕಾದಾಡುತ್ತೇವೆ. ಇವನ್ನೆಲ್ಲ ಗಮನಿಸಿದರೆ ಮನುಷ್ಯ ತನ್ನ ಅಂತಃಸತ್ವವನ್ನು ಮರೆತು, ಮೌಲ್ಯಗಳನ್ನು ಕಡೆಗಣಿಸಿ ಕ್ಷಣಿಕ ಆಕರ್ಷಣೆ, ಖುಷಿ, ಅಗ್ಗದ ಪ್ರಚಾರಕ್ಕೆ ಜೋತು ಬಿದ್ದಿದ್ದಾನೆ ಎಂದೆನಿಸಿದೆ ಇರದು. ಎಷ್ಟೆಲ್ಲಾ ಸಾಧನೆಗಳ ಒಡೆಯರು ನಾವಾಗಿದ್ದೇವೆ ಅಲ್ಲವೇ? ಚುಕ್ಕಿ ಚಂದ್ರಮರ ನಾಡಿಗೆ ಲಗ್ಗೆಯಿಟ್ಟಿದ್ದೇವೆ. ಸಾಗರದಾಳಕ್ಕೂ ಭೇಟಿ ಕೊಟ್ಟಿದ್ದೇವೆ. ಗಗನಚುಂಬಿ ಶಿಖರಗಳ ನೆತ್ತಿಗೆ ಮುತ್ತಿಟ್ಟಿದ್ದೇವೆ. ಸಕಲ ಜೀವಿಗಳ ಜನ್ಮ ಜಾಲಾಡಿಬಿಟ್ಟಿದ್ದೇವೆ. ದುರ್ದೈವ ಎಂದರೆ ಮಾನವೀಯತೆಯನ್ನು ಮಾತ್ರ ಮರೆತುಬಿಟ್ಟಿದ್ದೇವೆ. 

ಪ್ರತಿಯೊಬ್ಬ ತಂದೆ-ತಾಯಂದಿರನ್ನು ಮಾತನಾಡಿಸಿ ನೋಡಿ, ಅವರು ತಮ್ಮ ಮಕ್ಕಳ ಬಗ್ಗೆ, ಅವರು ತಮ್ಮನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ದೂರು ಹೇಳುತ್ತಾರೆ. ಅಗೌರವ, ಅವಿಧೇಯತೆ, ಹೆತ್ತವರ ಬಗ್ಗೆ ಅನಾದರ, ನಿಷ್ಕಾಳಜಿ ಇಂದು ಮಕ್ಕಳಲ್ಲಿ ಎದ್ದು ಕಾಣುತ್ತಿದೆ. ಪಿತೃವಾಕ್ಯ ಪರಿಪಾಲನೆಗಾಗಿ ರಾಜವೈಭೋಗಗಳ ತೊರೆದು ವನವಾಸಕ್ಕೆ ನಡೆದ ತ್ರೇತಾಯುಗದ ರಾಮನೆಲ್ಲಿ? ಪತ್ನಿವಾಕ್ಯ ಪರಿಪಾಲನೆಗಾಗಿ ಇದ್ದಬದ್ದ ಆಸ್ತಿ ಕಸಿದು ಹೆತ್ತವರನ್ನು ಅನಾಥಾಲಯಕ್ಕೆ ದೂಡುವ ಕಲಿಯುಗದ ರಾಮನೆಲ್ಲಿ? ದೊಡ್ಡ ವಿಪರ್ಯಾಸದ ಸಂದರ್ಭದಲ್ಲಿದ್ದೇವೆ. ಅಶೋಕ ಚಕ್ರವರ್ತಿ ತನಗೆ ನಮಸ್ಕರಿಸುತ್ತಿದ್ದ ಸಾಮಾನ್ಯ ಪ್ರಜೆಗೂ ತಲೆಬಾಗಿ ನಮಸ್ಕರಿಸುತ್ತಿದ್ದನಂತೆ. ಇಂದು ಕಟ್ಟಕಡೆಯ ಸಾಮಾನ್ಯ ಮನುಷ್ಯನಿಗೆ ಸಿಗುವ ಗೌರವ ನಮಗೆ ಗೊತ್ತೇ ಇದೆ. ತುಂಬಿದ ಜೇಬಿಗೆ, ಹೊಂದಿದ ಪದವಿಗೆ, ಎದ್ದು ನಿಂತ ಮುಗಿಲೆತ್ತರದ ಮಹಲಿಗೆ ತಲೆಬಾಗಿ ನಮಸ್ಕರಿಸುವ ಪರಿಪಾಠ ಬೆಳೆದಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವವರನ್ನು ನಿಜವಾದ ದೇವರಿಗೆ ಹೋಲಿಸುವ ಸಂಸ್ಕೃತಿ ನಮ್ಮದು. ಆದರಿಂದು  ಅಪಘಾತ ಸಂಭವಿಸಿ ವಾಹನ ಸವಾರ ನರಳುತ್ತಿದ್ದರೂ ಅವನನ್ನು ಆಸ್ಪತ್ರೆಗೆ ಸಾಗಿಸದೆ ವೀಡಿಯೋ ಮಾಡುವ ಜನರನ್ನು ಕಾಣುತ್ತಿದ್ದೇವೆ. ಯಾವುದಾದರೊಂದು ಅಪೇಕ್ಷೆಯಿಂದಲೇ ಇನ್ನೊಬ್ಬರಿಗೆ ಸಹಾಯ ಮಾಡುವ ಸ್ವಾರ್ಥ ಮನೋಭಾವನೆ ಹೆಚ್ಚಾಗುತ್ತಿದೆ. ನಿಸರ್ಗದಲ್ಲಿ ಅದೆಷ್ಟೊಂದು ವಸ್ತುಗಳು ಕೊಂಚವೂ ಪ್ರತಿಫಲವಿಲ್ಲದೆ ನಿಸ್ವಾರ್ಥ ಸೇವೆ ಮಾಡುತ್ತಿವೆ. ಅದಕ್ಕೆಂದೇ ಕವಿ ಜರಗನಹಳ್ಳಿ ಶಿವಶಂಕರ ಅವರು ತಮ್ಮ ಕವಿತೆಯಲ್ಲಿ ಮನುಷ್ಯ ಬದುಕಿನ ಕ್ಷಣಿಕತೆ, ನಿಸರ್ಗದ ಶಾಶ್ವತ ಸತ್ಯವನ್ನು ಹೀಗೆ ಹೇಳುತ್ತಾರೆ.  

ಹತ್ತಾರು ವರುಷ 

ನೆರಳಾಗಿ ನಿಂತ ಮರ 

ತೊಲೆಯಾಗಿ ಉಳಿಯಿತು 

ನೂರಾರು ವರುಷ 

ನೂರು ವರ್ಷ ಆಳಿದ ಅರಸ 

ಹೆಣವಾಗಿ ಉಳಿಯಲಿಲ್ಲ 

ಮೂರು ದಿವಸ! 

ಈ ದೇಶ ಹೆಣ್ಣನ್ನು ದೇವತೆಯ ಸ್ಥಾನದಲ್ಲಿಟ್ಟು ಪೂಜಿಸುತ್ತದೆ. ನದಿ, ಭೂಮಿ, ದೇಶಕ್ಕೆಲ್ಲ ಆಕೆಯ ಹೆಸರಿಟ್ಟು ಆರಾಧಿಸುತ್ತದೆ. ಆದರೆ ಅದೇ ಮಾತೃ ಸ್ವರೂಪಿ ಹೆಣ್ಣನ್ನು ಚಿತ್ರಹಿಂಸೆಗೆ ಗುರಿ ಮಾಡುವ, ದೌಜನ್ಯ ನೀಡುವ ಅಮಾನುಷ ವರ್ತನೆ ಹೆಚ್ಚುತ್ತಿದೆ. ‘ಇಲ್ಲಿ ಈ ನೆಲದಲ್ಲಿ ಗುಡಿಸಲಲ್ಲಿ ಜೀವ ಸುಟ್ಟವರು ಗ್ರಹ ನಕ್ಷತ್ರಗಳಲ್ಲಿ ಜೀವ ಹುಡುಕಲು ಹಾರಿದರು’ ಎಂದು ಕವಿ ಜಂಬಣ್ಣ ಅಮರಚಿಂತ ಅವರು ಈ ನಾಡಿನ ಮನುಷ್ಯದ್ವೇಷಿಗಳ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾರೆ. 

ಯಾಕೆ ಹೀಗಾಗುತ್ತಿದೆ? ಎಂದು ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಂಡರೆ ಇದಕ್ಕೆ ಉತ್ತರಗಳು ಹಲವಾರು. ಅವಿಭಕ್ತ ಕುಟುಂಬ ಪದ್ಧತಿಯ ಕಣ್ಮರೆ, ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ, ಸದಾ ಒತ್ತಡದ ಮತ್ತು ವ್ಯಸ್ತ ಜೀವನ, ಆಧುನಿಕ ಜೀವನಶೈಲಿ, ಮಾಧ್ಯಮಗಳ, ಮೊಬೈಲ್ ಪ್ರಭಾವ. ಮಾನವೀಯ ಮೌಲ್ಯಗಳನ್ನು ಇಂದಿನ ಯುವಜನತೆಯ ಆಂತರ್ಯದಲ್ಲಿ ಬೆಳೆಸುವುದು ಹೇಗೆ ಎಂದು ಚಿಂತಿಸಿದಾಗ ಒಂದಷ್ಟು ಪರಿಹಾರಗಳು ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತವೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು, ಹಣ ಸಂಪಾದನೆಯೇ ಪರಮ ಗುರಿಯಲ್ಲ ಎಂಬುದನ್ನು ತಿಳಿ ಹೇಳಬೇಕು, ಮನಸ್ಸನ್ನು ಅರಳಿಸುವ ಸಾಹಿತ್ಯ ಕೃತಿಗಳನ್ನು ಓದಲು ಪ್ರೇರೇಪಿಸಬೇಕು. ಸಂತ್ಸಂಗದ ಸಹವಾಸ ಕಲಿಸಬೇಕು. ಅರಳುವ ಮೊಗ್ಗನ್ನು ಜತನದಿಂದ ಕಾಪಾಡಿದಾಗಲೇ ಅದು ಅರಳಿ ಸುತ್ತ ಪರಿಮಳ ಚೆಲ್ಲಲು ಸಾಧ್ಯ. ಹಾಗೆಯೇ ಮಕ್ಕಳಿಗೆ ಚಿಕ್ಕವರಿರುವಾಗಲೇ ಮಾನವೀಯ ಮೌಲ್ಯಗಳ ಅರಿವು ನೀಡಿ ಸುಸಂಸ್ಕೃತರನ್ನಾಗಿಸುವುದು ಇಂದಿನ ಆದ್ಯ ಕರ್ತವ್ಯ. 

- * * * - 


ಸುದ್ದಿ ಓದಿ