ಸಂಚಾರಿ ವ್ಯಾಪಾರಕ್ಕಾಗಿ ನೇರ ಸಾಲ ಒದಗಿಸಿದೆ: ದಿವಾಕರ
ಲೋಕದರ್ಶನ ವರದಿ
ಕಂಪ್ಲಿ 11: ಪ್ರತಿಯೊಬ್ಬರು ಕರಕುಶಲತೆಯನ್ನು ವೃದ್ಧಿಸಿಕೊಂಡು ವ್ಯಾಪಾರದ ಜೊತೆಗೆ ವ್ಯವಹಾರ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಿ ಎಂದು ಬಳ್ಳಾರಿಯ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಕೆ.ಎಸ್.ದಿವಾಕರ ಹೇಳಿದರು.
ಇಲ್ಲಿನ ಸುಡುಗಾಡು ಸಿದ್ಧರ ಕಾಲನಿಗೆ ಸೋಮವಾರ ಭೇಟಿ ನೀಡಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಲೆಮಾರಿ ಕೋಶದಿಂದ ಸಾಲ ಪಡೆದ ಫಲಾನುಭವಿಗಳನ್ನು ಭೇಟಿ ಮಾಡಿ ಅರ್ಥಿಕವಾಗಿ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯ ಇದನ್ನು ಉಪಯೋಗಿಸಿ ಮಕ್ಕಳಿಗೆ ಶಿಕ್ಷಣ ಕೂಡಿಸಲು ಮುಂದಾಗಬೇಕು ಎಂದರು.
ಕಂಪ್ಲಿ ತಾಲೂಕಿನ 33ಜನ ಸುಡುಗಾಡು ಸಿದ್ಧರಿಗೆ, 32ಜನ ಸಿಂಧೋಳ್ಳು, 20 ಬುಡ್ಗ ಜಂಗಮ, 8 ಕೊರಮ, 30 ಚನ್ನಸಾಸರು 6 ಜನ ಶಿಳ್ಳೆಕ್ಯಾತರು ಸೇರಿ ಇತರೆ ಎಸ್ಸಿ ಅಲೆಮಾರಿ ಬುಡಕಟ್ಟು ಫಲಾನುಭವಿಗಳಿಗೆ ಸಂಚಾರಿ ವ್ಯಾಪಾರಕ್ಕಾಗಿ ತಲಾ 50ಸಾವಿರ ರೂಪಾಯಿಗಳ ನೇರ ಸಾಲ ಒದಗಿಸಿದೆ. ಇದರಲ್ಲಿ 25ಸಾವಿರ ರೂಪಾಯಿ ಸಹಾಯಧನ ಒಳಗೊಂಡಿದೆ ಎಂದು ಹೇಳಿದರು. ಫಲಾನುಭವಿಗಳಾದ ಹಂಪಮ್ಮ, ಚಿಟ್ಟೆಮ್ಮ, ಮಂಜಪ್ಪ, ಗಾಳೆಪಪ, ಮಂಜುಳಮ್ಮ ಇವರ ಸಣ್ಣ ವ್ಯಾಪಾರಕ್ಕಾಗಿ ಖರೀದಿಸಿದ ಸ್ಟೇಷನರಿ ಸಾಮಾನುಗಳನ್ನು, ರಿಪೇರಿಗೆ ಬಂದ ಮಿಕ್ಸರ್‌ಗಳನ್ನು ಪರೀಶೀಲಿಸಿದರು. ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿಗಳಾದ ಡಿ.ರಮೇಶ್ ನಾಯಕ್, ಎ.ಎಂ.ಸಿದ್ದಿಕಿ, ಅಲೆಮಾರಿ ಅರೆ ಅಲೆಮಾರಿ ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯ ಎಚ್.ಪಿ.ಶಿಕಾರಿರಾಮು, ಪ್ರಮುಖರಾದ ರಾವುಲ್ ನಾಗಪ್ಪ, ಸಣ್ಣ ಹುಲುಗಪ್ಪ, ಎಚ್.ಪರಮೇಶಿ ಸೇರಿ ಬುಡಕಟ್ಟು ಜನಾಂಗದವರಿದ್ದರು.