ಧೃವ ನಾರಾಯಣ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ: ಶಾಸಕ ನಾಗೇಂದ್ರ
ಬಳ್ಳಾರಿ: ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗು ಮಾಜಿ ಸಂಸದ ಆರ್. ಧೃವ ನಾರಾಯಣ ಅವರ ನಿಧನದಿಂದಾಗಿ ದಲಿತ ಲೋಕ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಬಳ್ಳಾರಿ ಗ್ರಮೀಣ ಶಾಸಕ ಬಿ. ನಾಗೇಂದ್ರ ಹೇಳಿದರು.
ನಗರದ ಬಳ್ಳಾರಿ ಜಿಲ್ಲಾ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಕಚೇರಿಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಹಮ್ಮಿಕೊಂಡಿದ್ದ ಆರ್ ಧೃವ ನಾರಾಯಣ ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಡೀ ದಲಿತ ಸಮುದಾಯಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಧ್ರವನಾರಾಯಣ ಅವರ ಕೊಡುಗೆ ಅಪಾರವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ದಲಿತ ಸಮುದಾಯಕ್ಕೆ ಮತ್ತು ಕಾಂಗ್ರೆಸ್ ಪಕ್ಣಕ್ಕೆ ಹೆಚ್ಚಿನ ಸೇವೆ ಮಾಡುವವರಿದ್ದರು. ಆದರೆ, ಹೃದಯಾಘಾತದಿಂದ ಅವರು ನಿಧನರಾಗಿರುವುದು ನಮ್ಮೆಲ್ಲರಿಗೆ ನೋವು ತಂದಿದೆ. ಇದು ಇಡೀ ದಲಿತ ಸಮುದಾಯಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದಂತಹ ನಷ್ಟ ಉಂಟಾಗಿದೆ ಎಂದರು.
ಮಾಜಿ ಜಿಪಂ ಸದಸ್ಯರು ಹಾಗು ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಡಿ.ಜಿ.ಸಾಗರ ಬಣ) ರಾಜ್ಯ ಸಂಘಟನಾ ಸಂಚಾಲಕ ಎ. ಮಾನಯ್ಯ, ಮಾಜಿ ಜಿಪಂ ಸದಸ್ಯ ಮುಂಡ್ರಿಗಿ ನಾಗರಾಜ ಸೇರಿದಂತೆ ಮತ್ತಿತರರು ಮಾತನಾಡಿದರು.
ಎ. ಮಾನಯ್ಯ ಅವರು ನೇತೃತ್ವ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಹುಮಾಯೂನ್ ಖಾನ್, ಬೆಣಕಲ್ಲು ಬಸವರಾಜಗೌಡ, ಕಮೇಲಾಸೂರಿ, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ನರಸಪ್ಪ, ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಅನಂತಕುಮಾರ್, ಮುಖಂಡರಾದ ಹೆಚ್. ಸಿದ್ದೇಶ್, ನಾಗಲಕೆರೆ ಗೋವಿಂದ, ಜಗನ್ ಗುಮ್ಮನೂರು, ಸೋಮು, ಚಿಕ್ಕಗಾದಿಲಿಂಗಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.