ಭಕ್ತಿಯಂಬುದ ಬಣ್ಣಿಸಲಾಗದು
ಹರಿವ ನದಿಯ ತೆರನ ಹೋಲಬಲ್ಲಢೆ ಭಕ್ತಿ
ಕೂಡೀ ಸುಯಿದಾನವ ನೀಡಬಲ್ಲಡೆ ಭಕ್ತಿ
ನೀಡಿಮಿಕ್ಕುದ. ಕಾಯ್ದುಕೊಂಡಿರಬಲ್ಲಡೆ
ಕೂಡಿಕೊಂಡಿಪ್ಪ ನಮ್ಮ. ಕೂಡಲ ಸಂಗಮದೇವ
ಬಸವಣ್ಣನವರ ವೈಚಾರಿಕ ಚಿಂತನೆಯ ಫಲ ಹಲವಾರು ಸಮಾಜೋಪಯೋಗಿ.. ನಿತ್ಯೋಪಯೋಗಿ ವಚನಗಳನ್ನು ಮೂಡಿಸಿತು. ಅಂಥ ಮಹತ್ವದ ವಚನಗಳಲ್ಲಿ ಮೇಲಿನ ವಚನವೂ ಒಂದು. ಸಾವಿರಾರು ವರ್ಷಗಳಿಂದ ಶಾಸ್ತ್ರದ ಗೂಡಾರದಲಿ ಭಕ್ತಿ ಸಿದ್ಧಾಂತ ವನ್ನು ವಿವರಿಸುತ್ತಾ ಬಂದಿರುವ ಸಾಂಪ್ರದಾಯಿಕತೆ ಯನ್ನು ಮುರಿದ ಬಸವಣ್ಣನವರು ಭಕ್ತಿಯನ್ನು ಹೊಸ ಅರ್ಥದಲ್ಲಿ ಇಲ್ಲಿ ಹೊಳೆಯಿಸಿ ಕೊಡುತ್ತಾರೆ.
ಭಕ್ತಿ ಎಂದರೆ ಏನು? ಎಂಬ ಪ್ರಶ್ನೆ ಗೆ "ಭಕ್ತಿ ಎಂದರೆ ಪರಮ ಪ್ರೀತಿ" ಎಂಭ ಆರ್ಥದಿಂದ ಹಿಡಿದು, ತನ್ನ. ದೈವಕ್ಕೆ ಆತ್ಯಂತಿಕವಾಗಿ ಶರಣು ಬರುವದು ಎಂಬ ಅರ್ಥಗಳೂ ಇವೆ. ಆದರಿಲ್ಕಿ ಬಸವಣ್ಣನವರು ಅಂತಹ ಅರ್ಥಗಳನ್ನು ಹೇಳಲು ಹೋಗುವದಿಲ್ಲ.
ಭಕ್ತಿಯನ್ನು ಹರಿವ ನೀರಿಗೆ, ಹಸಿದವರಿಗೆ ಅನ್ನವೀಇಯುವದಕ್ಕೆ,ಉಂಡು ಉಳಿದುದನ್ನು ಕೂಡಿಟ್ಟು ಕಾಪಾಡುವದಕ್ಕೆ ಹೋಲಿಸುತ್ತಾರೆ.
ವಚನದ ಮೊದಲ ಸಾಲು ಹರಿವ ನದಿಯ ತೆರನ ಹೋಲಬಲ್ಲಡೆ ಭಕ್ತಿ- ಎಂದಿದೆ. ಹರಿಯುವಿಕೆ ನೀರಿನ ಗುಣ. ಆದರಲ್ಲಯೂ ನದಿ ಸದಾ ಸಮುದ್ರದ ಕಢೆ ಹರಿಯೋದೆ ಅದರ ಗುಣ.ಹಾಗೆ ಹರಿಯುವ ಮೂಲಕ ತನ್ನ ಹರಿವಿನುದ್ದಕ್ಕು ದೊರಕುವ ಎಲ್ಲರಿಗೂ ಜೀವಜಲ ವಾಗಿ ಕಾಪಾಡುತ್ತದೆ. ಅನೇಕ ಸಂಸ್ಕೃತಿ, ನಾಗರಿತೆಗಳಿಗೆ ಆಸರೆ ನೀಡುತ್ತದೆ. ಭಕ್ತನೂ ಹೀಗೆ ತನ್ನ ಆರಾಧ್ಯ ದೈವದ ಕಡೆಗೆ ಹರಿಯುತ್ತಲೇ ಇರಬೇಕು.ಜೊತೆಗೆ ತನ್ನ ಆಶ್ರಯ ಬಯಸಿ ಬಂದವರನ್ನು ಆಸರೆ ನೀಡಿ ಕಾಪಾಡಭೇಕು ಹಾಗೆ ಅಸರೆ ನೀಡಿ ಕಾಪಾಡಿದರೆ ಮಾತ್ರ ಅದು ಭಕ್ತಿ ಎನ್ನುತ್ತಾರೆ.
ಎಡನೆಯ ಸಾಲು - ಕೂಡಿ ಸುಯಿದಾನವ ನೀಡಬಲ್ಲಡೆ ಭಕ್ತಿ- ಎಂದಿದೆ ಇಲ್ಲಿ ಕೂಡಿ, ಸುಯಿದಾನ, ನೀಡು ಎಂಬ ಮೂರು ಪದಗಳಿವೆ. ಕೂಡಿ - ಎಂದರೆ ಕೂಡಿಸು, ಗಳಿಸು ಎಂಬ ಅರ್ಥವಿದೆ. ಶರಣ ಅಥವಾ ಭಕ್ತನಾದವನು ದುಡಿದು ಕೂಡಿಸಿಡಬೇಕು. (ಇದು ನಾಳೆಗೆಂದು ನಾಡದಿಗೆಂದು ಕೂಡಿ ಇಡುವ ಆಶೆ ಅಲ್ಲ. ಅಂದು ಪ್ರಸಾದಕ್ಕೆ ಬರುವ ಜಂಗಮಕ್ಕೆಂದು ಕೂಡಿಡುವ ಸೇವೆ. ಹಾಗೆ ಕೂಡಿಟ್ಠ ಸುಯಿದಾನವನ್ನು ನೀಡಬಲ್ಲಡೆ ಮಾತ್ರ ಭಕ್ತಿ ಎನ್ನುವ ಬಸವಣ್ಣನವರು ಭಕ್ತಿಯನ್ನೂ ಕೇವಲ ಆಚರಣೆಯ ಹಂತದಲ್ಲಿ ಮಾತ್ರ ನಿಲ್ಲಿಸದೇ ಅದನ್ನು ಕ್ರಿಯೆಯ ಹಂತಕ್ಕೆ ತರುತ್ತಾರೆ. ನೀಡಬಲ್ಲಡೆ ಮಾತ್ರ ಭಕ್ತ ಎನ್ನುತ್ತಾರೆ.
ವಚನದ ಮೂರನೆಯ ಸಾಲು ಮಹತ್ವದ್ದು.- ನೀಡಿ ಮಿಕ್ಕುದ ಕಾಯ್ದುಕೊಂಡಿರಬಲ್ಲಡೆ- ಭಕ್ತಿ ಏನ್ನುತ್ತಾರೆ. ಸಾಮಾನ್ಯವಾಗಿ ಶರಣರು ನಾಳೆಗೆಂದು ತಗೆದಿಡುವದನ್ನು ಒಪ್ಪುವದಿಲ್ಲ. ಆದರೆ ಇಲ್ಲಿ ಕೂಡಿಡಲು ಹೇಳುವದು ಮಿಕ್ಕುದನ್ನು. ಒಳ್ಳೆಯ ಅರ್ಥಶಾಸ್ತ್ರಜ್ಞರಾದ ಬಸವಣ್ಣನವರು ದುಡಿದು ತಂದುದನ್ನು ಜಂಗಮಕಿಕ್ಕಿ ತಾನೂ ಸೇವಿಸಿ, ಇನ್ನು ಉಳಿದರೆ (ಮಿಕ್ಕುದು) ಏನು ಮಾಡುವದು? ಅದನ್ನು ಹಾಳು ಮಾಡುವದೇ? ಅದಕ್ಕೆ ಅವರು ಹೇಳುವದು-
ನೀಡಿ ಮಿಕ್ಕುದ ಕಾಯ್ದುಕೊಂಡಿರಬಲ್ಲಡೆ ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವ - ಎಂಬುದನ್ನು. ಅಂದರೆ ಉಳಿದುದನ್ನು ಕೂಡಿಸಿಟ್ಟು ನಾಳೆಗೆ ಅದನ್ನು ಬಳಸಬೇಕು, ಹಾಗೆ ಮಾಡಿದರೆ ಅದು ಭಕ್ತಿಯೂ ಹೌದು, ಕೂಡಲಸಂಗಮದೇವ ರನೊಪ್ಪಿ ಸುವದೂ ಹೌದು - ಎನ್ನುತ್ತಾರೆ.
ಹದಿನಾರನೆಯ ಶತಮಾನದಲ್ಲಿ ಬಂದ ಬಸವೋತ್ತರ ಯುಗದ ವಚನಕಾರ ಕಾಡಸಿದ್ದೇಶ್ವರರು ಇದೆ ವಿಚಾರವನ್ನು ಇನ್ನಷ್ಟು ವಿಸ್ತರಿಸುತ್ತಾರೆ ಭಕ್ತರು ಯಾರು? ಎಂದರೆ-
ಹಳೆಯ ರಗಟೆಯ ಹೋಲಬಲ್ಲಡೆ ಭಕ್ತರೆಂಬೆ
ಹರಿವ ನೀರ ಹೋಲಬಲ್ಲರೆ ಭಕ್ತರೆಂಬೆ
ಭೂಮಿ ಹೋಲಬಲ್ಲರೆ ಭಕ್ತರೆಂಬೆ
ಇಷ್ಟುಳ್ಳಾತನೆ ಶಿವನಲ್ಲಿ ಸಮರಸವನುಳ್ಳ ಸದ್ಭಕ್ತನೆಂಬೆ
ಕಾಡಿನೊಳಗಾದ ಶಂಕರೀ್ರಯ ಚನ್ನಕದಂಬ ಲಿಂಗ ನಿರ್ಮಾಯ ಪ್ರಭುವೆ
ಎನ್ನುವ ವಚನಕಾರ ಭಕ್ತನನ್ನು ಹಳೆಯ ರಗಟೆಗೆ, ಹರಿವ ನೀರಿಗೆ, ಬೆಳೆವ ಭೂಮಿಗೆ ಹೋಲಿಸುತ್ತಾನೆ. ಮೂರೂ
ಎಂದೂ ಮೇಲು ಕೀಳು ಎನ್ನುವದಿಲ್ಲ ಎಲ್ಲರನ್ನು ಸಮಾನವಾಗಿ ಕಾಣುತ್ತವೆ. ಸದಾ ಉಪಯುಕ್ತ ಮತ್ತು ಆಸರೆ ಕೊಡುವ ಗುಣ ಹೊಂದಿವೆ.ಭಕ್ತನ ಗುಣವೂ ಹೀಗೆಯೇ ಇರಬೇಕು. ಅಂದರೆ ಆತ ಭಕ್ತ ಎನ್ನುತ್ತಾನೆ.
ವಚನಗಳ ಒಳಾರ್ಥ ತಿಳಿಯುವದು ಇಂದಿನ ವ್ಯವಹಾರಿಕ ಲೋಕದ ಬಹು ದೊಡ್ಡ ಅಗತ್ಯವಾಗಿದೆ.
- ಯಾಕೊಳ್ಳಿ. ಯ.ಮಾ