ಶಾಂತಿಯಿಂದಲೇ ದೇಶದ ಅಭಿವೃದ್ಧಿ ಸಾಧ್ಯ: ಡಾ. ಪ್ರಭುಗೌಡ ಲಿಂಗದಳ್ಳಿ
ಬಳಗಾನೂರ ಗ್ರಾಮದಲ್ಲಿ ಹಜರತ್ ನಬಿಶ್ಯಾವಲಿ ಉರುಸು- ಮಾನವ ಏಕತಾ ಶಾಂತಿ ಸಮ್ಮೇಳನ
ತಾಳಿಕೋಟಿ13: ಅಶಾಂತಿಪೂರ್ಣವಾದ ವಾತಾವರಣದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ದೇಶ ಅಭಿವೃದ್ಧಿಯನ್ನು ಸಾಧಿಸಬೇಕಾದರೆ ಶಾಂತಿ ನೆಲಸಬೇಕಾಗಿರುವುದು ಅನಿವಾರ್ಯ ಆಗಿದೆ ಎಂದು ನಾಡಿನ ಖ್ಯಾತ ನೇತ್ರ ತಜ್ಞ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಪ್ರಭುಗೌಡ ಲಿಂಗದಳ್ಳಿ(ಚಬನೂರ) ಹೇಳಿದರು.
ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಗುರುವಾರ ಹಜರತ್ ನಬಿಶ್ಯಾವಲಿ ದರ್ಗಾದ ಉರುಸು ಪ್ರಯುಕ್ತ ಹಮ್ಮಿಕೊಂಡ 3ನೇಯ ಮಾನವ ಏಕತಾ ಶಾಂತಿ ಸಮ್ಮೇಳನದಲ್ಲಿ ಉದ್ಘಾಟಕರಾಗಿ ಆಗಮಿಸಿ ಅವರು ಮಾತನಾಡಿದರು.
ಇಂದು ಕೆಲವು ಸ್ವಾರ್ಥಿಗಳು ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ಜನರ ಮಧ್ಯೆ ದ್ವೇಶವನ್ನು ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅಂಥಹ ಶಕ್ತಿಗಳನ್ನು ನಿಯಂತ್ರಿಸುವ ಕೆಲಸ ಎಲ್ಲರೂ ಒಂದಾಗಿ ಮಾಡಬೇಕಾಗಿದೆ. ಎಲ್ಲ ಧರ್ಮಗಳ ಮೂಲಮಂತ್ರ ಶಾಂತಿಯೇ ಆಗಿದೆ ಎಂದು ತಿಳಿಸಿದರು.
ಸಮಾಜಸೇವಕ ಶಾಂತಗೌಡ ಪಾಟೀಲ(ನಡಹಳ್ಳಿ) ಅವರು ಮಾತನಾಡಿ ಭಾರತ ವಿವಿಧ ಧರ್ಮ, ಭಾಷೆ ಹಾಗೂ ಸಂಸ್ಕೃತಿಗಳ ಬೀಡಾಗಿದೆ. ಇಲ್ಲಿ ನಾವೇಲ್ಲರೂ ಪರಸ್ಪರ ಅರಿತು ಬಾಳಬೇಕಾಗಿದೆ. ಇಲ್ಲಿ ಬಂದು ಹೋದ ಮಹಾತ್ಮರು ಹಾಗೂ ಶರಣರು ನಮಗೆ ಶಾಂತಿ ಹಾಗೂ ಸಹಬಾಳ್ವೆಯ ಮಾರ್ಗವನ್ನು ತೊರಿಸಿಕೊಟ್ಟು ಹೋಗಿದ್ದಾರೆ. ನಾವು ಅದರಂತೆ ಬಾಳಿದಾಗ ಶಾಂತಿ ಬರಲು ಸಾಧ್ಯವಿದೆ ಎಂದರು.
ವಿಜಯಪೂರದ ಉಪನ್ಯಾಸಕ ಯು. ಎನ್. ಕುಂಟೋಜಿ ಮಾತನಾಡಿ ನಮ್ಮೇಲ್ಲರ ದೇವನು ಒಬ್ಬನೆ ಆಗಿದ್ದಾನೆ ಅವನು ನಮಗೆಲ್ಲರಿಗೂ ಬದುಕುವ ಮಾರ್ಗವನ್ನು ತೊರಿಸಿಕೊಟ್ಟಿದ್ದಾನೆ ಜಗತ್ತಿಗೆ ಬಂದ ಪ್ರವಾದಿಗಳು, ದಾರ್ಶನಿಕರು, ಮಹಾಪುರುಷರು ಹಾಗೂ ಶರಣರು ನಮಗೆ ಮಾನವೀಯ ಮೌಲ್ಯಗಳನ್ನು ತಿಳಿಸಿಕೊಟ್ಟು ಹೊಗಿದ್ದಾರೆ. ಅವುಗಳನ್ನು ಅರಿತು ನಾವೇಲ್ಲರೂ ಭಾರತೀಯರು ಎಂಬ ಭಾವದೊಂದಿಗೆ ಬದುಕಬೇಕಾಗಿದೆ ಎಂದರು. ಪತ್ರಕರ್ತ ಅಬ್ದುಲಗನಿ ಮಕಾನದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥಾನ ವಿರಕ್ತಮಠ ಪಡೆಕನೂರದ ಮ. ನಿ. ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಹಜರತ್ ಹುಸೇನಪೀರ ಆಶ್ರಮ ಮನಗೂಳಿಯ ಪರಮ ಪೂಜ್ಯ ಡಾ. ಸೈಯದ್ ಫೈರೋಜ ಹುಸೇನಿ, ಕೊಡೇಕಲ್ಲ ಅನಾಥ ಆಶ್ರಮದ ಪರಮ ಪೂಜ್ಯ ದಾವಲಮಲಿಕ ಅಜ್ಜನವರು ಆಶೀರ್ವಚನ ನೀಡಿದರು.
ಗಣ್ಯರಾದ ನಿಂಗನಗೌಡ ಪಾಟೀಲ, ಮಲ್ಲಣ್ಣ ದೋರನಹಳ್ಳಿ, ಕಾಶೀಮ ಪಟೇಲ ಪಾಟೀಲ,(ಮೂಕೀಹಾಳ) ಬಿ. ಎಸ್. ಇಸಾಂಪೂರ, ಬಾಬುಗೌಡ ಬಿರಾದಾರ, ಅಲ್ಲಾಬಕ್ಷ ಬಿದರಿ, ಮಕ್ತುಮಸಾಬ ವಾಲಿಕಾರ, ಬಂದಗಿಶ್ಯಾ ಮಕಾನದಾರ, ಸೈದುಸಾಬ ವಾಲಿಕಾರ, ಗ್ರಾ.ಪಂ.ಸದಸ್ಯ ಎ. ಎಸ್. ಪಾಟೀಲ, ಸುಭಾಷ ಗುಡಿಮನಿ, ಚಂದ್ರಶೇಖರ ಅಲದಿ, ಪತ್ರಕರ್ತ ಆಸೀಪ ಬಾಗವಾನ, ಹಿರಗಪ್ಪ ಅರಳಿಕಟ್ಟಿ, ಖಾಜೇಸಾಬ ಬಾಗವಾನ ಪ್ರಭು ಪತ್ತೇಪೂರ, ಬಸವರಾಜ ತಳವಾರ, ಶಿಕ್ಷಕ ರಮಜಾನ ವಾಲಿಕಾರ ಇದ್ದರು.
ವಿಶೇಷ ಸನ್ಮಾನ: ಇತ್ತೀಚೆಗೆ ಸೈನ್ಯದಲ್ಲಿ ಸೇವೆ ಸಲ್ಲಿಸಿ ಗ್ರಾಮಕ್ಕೆ ಆಗಮಿಸಿದ ದೇವೆಂದ್ರ ಅರಳಿಕಟ್ಟಿ, ಹಾಗೂ ಎಸ್.ಎಸ್.ಎಲ್.ಸಿ ಪರಿಕ್ಷೆಯಲ್ಲಿ ಈ ಬಾರಿ ರಾಜ್ಯಕ್ಕೆ 3ನೇ ಸ್ಥಾನ ಪಡೆದ ಗ್ರಾಮದ ಕುಮಾರಿ ಬಿಸ್ಮೀಲ್ಲಾ ನದಾಫ್ ಹಾಗೂ ವಿಜ್ಞಾನ ಪ್ರದರ್ಶನದಲ್ಲಿ ತಾಲೂಕಾ ಮಟ್ಟಕ್ಕೆ ಆಯ್ಕೆಯಾದ ಕುಮಾರಿ ಆಸ್ಮಾ ಮಕಾನದಾರ ಇವರನ್ನು ಸನ್ಮಾನಿಸಲಾಯಿತು.