ಒಗ್ಗಟ್ಟಿನಿಂದಲೇ ಸಮಾಜದ ಅಭಿವೃದ್ಧಿ ಸಾಧ್ಯ: ರಾಮಲಿಂಗಯ್ಯ ಶ್ರೀ
ತಾಳಿಕೋಟಿ: ಜಂಗಮ ಸಮಾಜವು ಅಭಿವೃದ್ಧಿಯನ್ನು ಕಾಣಬೇಕಾದರೆ ಎಲ್ಲರೂ ಒಂದಾಗಿ ಸಮಾಜದ ಏಳಿಗೆಗಾಗಿ ದುಡಿಯಬೇಕಾಗಿದೆ. ಇದು ಸ್ವಾರ್ಥವನ್ನು ಬದಿಗೊತ್ತಿ ನಿಸ್ವಾರ್ಥ ಭಾವನೆಯಿಂದ ಕೆಲಸಮಾಡಿದಾಗ ಮಾತ್ರ ಸಾಧ್ಯ ಎಂದು ಜೋತಿಷ್ಯ ರತ್ನ ಚಬನೂರು ಹಿರೇಮಠದ ಪೀಠಾಧಿಪತಿ ಪರಮಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು.
ಜಂಗಮ ಜಾಗೃತಿ ಅಭಿಯಾನದ ಅಂಗವಾಗಿ ತಾಲೂಕಿನ ಮೂಕೀಹಾಳ, ಹಗರಗುಂಡ, ಶಿವಪೂರ, ನಾಗೂರ, ಬಾವೂರ, ಕೂಚಬಾಳ, ವನಹಳ್ಳಿ ಹಾಗೂ ಲಿಂಗದಳ್ಳಿ ಗ್ರಾಮಗಳಲ್ಲಿ ಸಮಾಜ ಬಾಂಧವರ ಸಭೆಗಳನ್ನು ನಡೆಸಿ ಅವರು ಮಾತನಾಡಿದರು.
ಜಂಗಮ ಸಮಾಜ ಗುರುವಿನ ಸ್ಥಾನವನ್ನು ಹೊಂದಿರುವ ಸಮಾಜವಾಗಿದೆ ಈ ಸ್ಥಾನದ ಪವಿತ್ರತೆ ಹಾಗೂ ಶ್ರೇಷ್ಟತೆಯನ್ನು ನಾವು ರಕ್ಷಿಸಿಕೊಂಡು ಹೋಗಬೇಕಾಗಿದೆ, ಜಂಗಮ ಆಚಾರ ಹಾಗೂ ಸಂಸ್ಕಾರಗಳನ್ನು ಅಳವಡಿಸಿಕೊಂಡು ಬದಕಲು ಪ್ರಯತ್ನಿಸಬೇಕು.
ಯಾವ ಕಾರಣಕ್ಕೂ ಸಮಾಜದ ಯುವಕರು ದುಶ್ಚಟಗಳ ದಾಸರಗಬಾರದು, ಸಮಾಜದಲ್ಲಿರುವ ಎಲ್ಲ ಜಾತಿ ಜನಾಂಗದವರೊಂದಿಗೆ ಪ್ರೀತಿಯಿಂದ ಬದುಕಲು ಪ್ರಯತ್ನಿಸಬೇಕು. ಯಾವ ಕಾರಣಕ್ಕೂ ಜಗಳ-ಕಲಹಗಳನ್ನು ಮಾಡಬೇಡಿ ಏನಾದರೂ ಸಮಸ್ಯೆಗಳು ಇದ್ದಲ್ಲಿ ಸಮಾಜದ ಹಿರಿಯರನ್ನು ಕರಸಿಕೊಂಡು ಬಗೆಹರಿಸಿಕೊಳ್ಳಿ, ಈ ಉದ್ದೇಶಕ್ಕಾಗಿ ನಾನು ಈ ಅಭಿಯಾನವನ್ನು ಹಮ್ಮಿಕೊಂಡಿದ್ದೇನೆ ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ ಇದೊಂದು ಸಾಮಾಜಿಕ ವೇದಿಕೆಯಾಗಿದೆ ಇದಕ್ಕೆ ನಿಮ್ಮೆಲ್ಲರ ಸಹಕಾರ ನನಗೆ ಬೇಕು ಎಂದರು.
ಪ್ರತಿ ಗ್ರಾಮದಲ್ಲೂ ಸಮಾಜದ ಅಧ್ಯಕ್ಷರನ್ನು ಆಯ್ಕೆಯನ್ನು ಶ್ರೀಗಳ ನೇತೃತ್ವದಲ್ಲಿಯೇ ಮಾಡಲಾಯಿತು ಎಲ್ಲರೂ ಶ್ರೀಗಳ ಆದೇಶದಂತೆ ಕೆಲಸ ಮಾಡುವ ಪ್ರತಿಜ್ಞೆಗೈದರು.
ಈ ಸಮಾಜದಲ್ಲಿ ಸಮಾಜದ ಬಾಂಧವರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.