ದೇವದಾಸಿ ಮಹಿಳೆಯರಿಗೆ ಸೌಲಭ್ಯ ಒದಗಿಸಲು ಆಗ್ರಹ
ಬಳ್ಳಾರಿ 07: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ 12600ಕ್ಕೂ ಅಧಿಕ ದೇವದಾಸಿಯರಿದ್ದು ಸರ್ಕಾರದಿಂದ ಇದುವರೆಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಅರೋಪಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಕ್ಷೇಮಾಭಿವೃದ್ಧಿ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಒಕ್ಕೂಟದ ಜಿಲ್ಲಾ ಸಂಚಾಲಕ ಕಟ್ಟೆ ಬಸಪ್ಪ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ದೇವದಾಸಿಯರ ಬಾಕಿ ಇರುವ ಪಿಂಚಣಿ ಜಮಾ ಮಾಡಬೇಕು, ದೇವದಾಸಿಯರ ಮಕ್ಕಳಿಗೆ ಪುನರ್ವಸತಿ ರೂಪಿಸಬೇಕು, ಭೂಮಿ, ಮನೆ, ನಿವೇಶನ, ಶೇ 75ರ ಸಹಾಯಧನದಲ್ಲಿ ಸಾಲ ಮತ್ತು ಮದುವೆಯ ಸಹಾಯಧನ ಸೌಲಭ್ಯ ಒದಗಿಸಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸಿದರು. ಹೊಸ ಆರ್ಥಿಕ ನೀತಿಯಿಂದ ಎಲ್ಲ ರಂಗಗಳಲ್ಲಿ ಯಂತ್ರಗಳ ಬಳಕೆ ಆಗುತ್ತಿದೆ. ಹೀಗಾಗಿ ದೇವದಾಸಿ ಮಕ್ಕಳಿಗೆ ಉದ್ಯೋಗ ಸಿಗುತ್ತಿಲ್ಲ. ದೇವದಾಸಿಯರ ಕನಿಷ್ಟ 5ಲಕ್ಷ. ನೀಡಿ ತಲಾ 5ಎಕರೆ ಜಮೀನು ಒದಗಿಸಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.ಸರ್ಕಾರಿ, ಅರೆ ಸರ್ಕಾರಿ ಉದ್ಯೋಗಗಳಲ್ಲಿ ಪ್ರತ್ಯೇಕ ಮೀಸಲಾತಿ ನೀಡಬೇಕು. ಸಮಾಜದಲ್ಲಿ ಅವಮಾನ, ಅಪಮಾನಗಳಿಂದ ಬದುಕು ಸಾಗಿಸುವ ದೇವದಾಸಿಯರಿಗೆ ಬಜೆಟ್ ನಲ್ಲಿ ಹಣ ಮೀಸಲಿಡಬೇಕೆಂದೂ ಆಗ್ರಹಿಸಿದರು. ಒಕ್ಕೂಟದ ಅಡಿವೆಪ್ಪ, ರೇಣುಕಾ, ಹೊನ್ನೂರಮ್ಮ, ಗೌರಮ್ಮ, ಈರಮ್ಮ, ನಾಗಮ್ಮ, ತಾಯಮ್ಮ, ಕೆಂಚಮ್ಮ, ಮರಮ್ಮ, ಗಾದೆಮ್ಮ, ಶಿವರುದ್ರಮ್ಮ ಇನ್ನಿತರರು ಇದ್ದರು.