ಲೇಖನಗಳು

ಸಂಸ್ಕೃತ-ಭಾರತದ ದೇವಭಾಷೆ-ಶಾಸ್ತ್ರೀಯ ಭಾಷೆ

ಸಂಸ್ಕೃತ-ಭಾರತದ ದೇವಭಾಷೆ-ಶಾಸ್ತ್ರೀಯ ಭಾಷೆ

ದೇವಭಾಷಾ, ಗೀರ್ವಾಣವಾಣೀ, ಅಮೃತವಾಣೀ, ಸುರಭಾರತೀ ಎಂದೆಲ್ಲಾ ಕರೆಸಿಕೊಳ್ಳುವ ಸಂಸ್ಕೃತವು ಎಲ್ಲ ವಿಷಯಗಳ ಮೂಲಾಧಾರವಾಗಿದೆ.ಸಂಸ್ಕೃತ ಅದೊಂದು ಗುಣವಾಚಕ ಪದವಾಗಿದ್ದು,ವೇದ-ವೇದಾಂಗ, ಉಪನಿಷತ್, ಪುರಾಣ, ರಾಮಾಯಣ, ಮಹಾಭಾರತ, ಪಂಚತಂತ್ರ ಇವೆಲ್ಲವು ಇರುವದು ಸಂಸ್ಕೃತದಲ್ಲಿಯೇ.ಅರ್ಥಶಾಸ್ತ್ರ, ವೇದಗಣಿತ, ನೀತಿಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ನ್ಯಾಯ, ಧರ್ಮ, ರಾಜನೀತಿ, ವ್ಯವಹಾರ, ನಾಟ್ಯ, ಕಲೆ ಇವುಗಳ ತವರೂರು ಸಂಸ್ಕೃತವಾಗಿದೆ. ಯಾವುದೇ ವಿಷಯವನ್ನಾಗಲಿ ಆಳವಾಗಿ ತಿಳಿಯಬೇಕೆಂದರೆ ಅದಕ್ಕೆ  ಸಂಸ್ಕೃತ ಬೇಕು.
        ಭಾರತದ ಶಾಸ್ತ್ರೀಯ ಭಾಷೆಯಾಗಿರುವ ಸಂಸ್ಕೃತವು ಇಂಡೋ ಯುರೋಪಿಯನ್ ಭಾಷಾ ಬಳಗಕ್ಕೆ ಸೇರಿದ್ದು,ಅತಿ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ.ಭಾರತದಲ್ಲಿ ಸಂಸ್ಕೃತ ಭಾಷೆಗಿರುವ ಸ್ಥಾನಮಾನವು ಯುರೋಪಿನಲ್ಲಿ ಲ್ಯಾಟಿನ್ ಹಾಗೂ ಗ್ರೀಕ್ ಭಾಷೆಗಳಿದೆ. ಭಾರತದ ಅಧಿಕೃತ ಭಾಷೆಗಳಲ್ಲಿ ಇದು ಒಂದಾಗಿದ್ದು,ಪುರಾತನ ಭಾರತೀಯ ಸಂಸ್ಕೃತಿ, ಸಾಹಿತ್ಯ,ವಿಜ್ಞಾನ, ತತ್ವಶಾಸ್ತ್ರಗಳಲ್ಲಿ ಬಹು ವ್ಯಾಪಕವಾಗಿ ಬಳಕೆಯಾಗಿರುವದನ್ನು ಕಾಣುತ್ತೇವೆ. ಹಿಂದೂ,ಜೈನ, ಬೌದ್ಧ ಧರ್ಮಶಾಸ್ತ್ರಗಳ ಪಾರಂಪರಿಕ ಭಾಷೆಯಾಗಿಯೂ ಸ್ಥಾನ ಪಡೆದಿದೆ. ಸಂಸ್ಕೃತದ ಪ್ರಥಮ ಕೃತಿ ಹಿಂದೂ ಧರ್ಮದ 'ವೇದ'ಗಳಲ್ಲಿ ಒಂದಾದ ಋಗ್ವೇದವಾಗಿದೆ.ಸರ್ವಸ್ವವನ್ನೂ ತನ್ನಲ್ಲಿ ಇಟ್ಟುಕೊಂಡ ವಿಶ್ವಕೋಶ. ಇದು ಎಲ್ಲ ಭಾಷೆಗಳ ಜನನಿ. ಸಂಸ್ಕೃತವು ವಿಶಿಷ್ಟವಾದ, ಸುಲಲಿತವಾದ ಭಾಷೆ.
     ಭಾರತದ ಪ್ರತಿಷ್ಠೆ ಎರಡು- ಸಂಸ್ಕೃತ ಮತ್ತು ಸಂಸ್ಕೃತಿ. ಸನಾತನ ಸಂಸ್ಕೃತಿಯ ತಾಯಿಬೇರು ಸಂಸ್ಕೃತ. ಪ್ರಾಚೀನ ಕಾಲದಿಂದ ಇಂದಿನವರೆಗೂ ನಮ್ಮ ಭಾರತೀಯ ಸಂಸ್ಕೃತಿ ಅವಿಚ್ಛಿನ್ನವಾಗಿ, ಅವ್ಯಾಹತವಾಗಿ ಹರಿದು ಬರಲು ಕಾರಣ ಸಂಸ್ಕೃತವೇ. ಒಬ್ಬ ವ್ಯಕ್ತಿ ಮಾನಸಿಕವಾಗಿ, ಬೌದ್ಧಿಕವಾಗಿ, ನಿಷ್ಠಾವಂತನಾಗಿ, ಸರ್ವಗುಣ ಸಂಪನ್ನನಾಗಲು ಸಂಸ್ಕೃತ ಬೇಕು. ಯಾಕೆಂದರೆ ಸಂಸ್ಕೃತದಲ್ಲಿ  ಸಂಸ್ಕೃತಿ ಅಡಗಿದೆ. ಮಣ್ಣಿನ ಮುದ್ದೆಯಂತಿರುವ ಮಾನವನನ್ನು ಉತ್ತಮ ಮೂರ್ತಿಯನ್ನಾಗಿ ರೂಪಿಸುವ ಸಾಮರ್ಥ್ಯ ಸಂಸ್ಕೃತಕ್ಕಿದೆ. ಸಂಸ್ಕೃತ ಶ್ಲೋಕಗಳ ಓದುವಿಕೆಯಿಂದ ಮೆದುಳು ಚುರುಕಾಗುತ್ತದೆ ಎಂದು ಇತ್ತೀಚಿನ ವರದಿ ಹೇಳಿದೆ. ಇದು ಕಂಪ್ಯೂಟರ್ ಗೆ  ಸೂಕ್ತವಾಗುವ ಭಾಷೆಯೂ ಹೌದು.
              ವೇದ-ರಾಮಾಯಣ-ಮಹಾಭಾರತ-ಹದಿನೆಂಟು ಪುರಾಣ-ಉಪಪುರಾಣಗಳು,ಕಾಳಿದಾಸ-ಬಾಣ-ಭಾರವಿ-ಭರ್ತೃಹರಿ ಮುಂತಾದ ಶ್ರೇಷ್ಠ ಕವಿಗಳ ಗದ್ಯ-ಪದ್ಯ-ಚಂಪೂ-ನಾಟಕ-ಸುಭಾಷಿತ-ಸ್ತೋತ್ರ ಮುಂತಾದ ಸಾಹಿತ್ಯಗಳು, ಆನಂದವರ್ಧನ-ದಂಡಿ-ಕುಂತಕ-ಭಾಮಹ-ವಿಶ್ವನಾಥ-ಅಭಿನವಗುಪ್ತ-ರಾಜಶೇಖರ ಮುಂತಾದ ಕಾವ್ಯ ವಿಮಾಂಸಕರು ತಮ್ಮ ಗ್ರಂಥಗಳಲ್ಲಿ ನಡೆಸಿದ ಸೂಕ್ಷ್ಮಕಾವ್ಯಚರ್ಚೆ, ಗಣಿತಶಾಸ್ತ್ರ-ಖಗೋಳಶಾಸ್ತ್ರ-ರಾಜ್ಯಶಾಸ್ತ್ರ-ಅರ್ಥಶಾಸ್ತ್ರ-
ಧರ್ಮಶಾಸ್ತ್ರ-ಶಿಲ್ಪಶಾಸ್ತ್ರ-ನಾಟ್ಯಶಾಸ್ತ್ರ-ಸಂಗೀತಶಾಸ್ತ್ರ-ವೈದ್ಯವಿಜ್ಞಾನ-ಪ್ರಾಣಿಶಾಸ್ತ್ರ-ವಾಸ್ತುಶಾಸ್ತ್ರ-ತತ್ವಶಾಸ್ತ್ರ ಮುಂತಾದ ಶಾಸ್ತ್ರಗ್ರಂಥಗಳು, ಯೋಗ-ಆಯುರ್ವೇದ ಗ್ರಂಥಗಳು ಪ್ರಾಚೀನ ಭಾಷೆಯಾದ ಸಂಸ್ಕೃತದಲ್ಲಿದ್ದು,ಎಂದೆಂದಿಗೂ ಸಂಸ್ಕೃತ ಭಾಷೆ ವಿಶ್ವ ಮರ್ಯಾದಿತ ಭಾಷೆಯಾಗಿದೆ.ಅದರ ಮೂಲಕ ಸೃಷ್ಟಿಯಾದ ಜ್ಞಾನ ನಮ್ಮದೇಶದ ಅಮೂಲ್ಯ ಆಸ್ತಿ. ಅದನ್ನು ಅಧ್ಯಯನದ ಮೂಲಕ ಕಾಪಾಡಿಕೊಂಡು ಬರುವುದು, ತನ್ಮೂಲಕ ಉಳಿಸಿಕೊಳ್ಳುವುದು ಎಲ್ಲಾ ಕಾಲಕ್ಕೂ ಈ ರಾಷ್ಟ್ರದ ವಿದ್ಯಾವಂತರ-ಪ್ರಜ್ಞಾವಂತರ ಕರ್ತವ್ಯವಾಗಿದೆ.
          ಸಂಸ್ಕೃತ ಭಾಷೆ  ಇಂದು ವಾಕ್ಯರೂಪದಲ್ಲಿ ಎಲ್ಲಾ ಕಡೆ ಬಳಕೆಯಲ್ಲಿ ಇಲ್ಲದಿರಬಹುದು. ಸಂಸ್ಕೃತ  ಭಾಷೆಯ ಪದಗಳು ಭಾರತದ ಎಲ್ಲಾ ಭಾಷೆಯಲ್ಲಿಯೂ ಹಾಸು
ಹೊಕ್ಕಾಗಿದೆ,ನಮ್ಮ ಕನ್ನಡಭಾಷೆಯನ್ನೇ ತೆಗೆದುಕೊಂಡರೆ, ಕನ್ನಡ ಭಾಷೆಯಲ್ಲಿರುವ ನೂರಕ್ಕೆ ಅರವತ್ತಾರಷ್ಟು ಪದಗಳು ಸಂಸ್ಕೃತದಿಂದ ನೇರವಾಗಿ ಬಂದವುಗಳು ಅಥವಾ ನಿಷ್ಪನ್ನಗಳಾಗಿವೆ. ಸ್ನಾನ-ವಸ್ತ್ರ-ಅನ್ನ-
ಆಹಾರ-ಶಾಲೆ-ವಿದ್ಯೆ-ವಿದ್ಯಾರ್ಥಿ-ಪುಸ್ತಕ-ಪ್ರಶ್ನೆ-ಉತ್ತರ-
ಭೂಮಿ-ಸೂರ್ಯ-ದಕ್ಷಿಣ-ಉತ್ತರ-ಪೂರ್ವ-ಪಶ್ಚಿಮ ಹೀಗೆ ಸಂಸ್ಕೃತದ ಸಾವಿರಾರು ಪದಗಳು ಕನ್ನಡಭಾಷೆಯಲ್ಲಿ ಕನ್ನಡದೇ ಎಂಬಂತೆ ಬೆರೆತುಹೋಗಿವೆ.                 
                   ಅರಸ-ಏಣಿ-ಅಜ್ಜ-ಕಂಬ ಮುಂತಾದ ಶಬ್ದಗಳು ದೇಶಿ ಕನ್ನಡಪದಗಳೆಂಬಂತೆ ತೋರಿದರೂ ಅವು ಸಂಸ್ಕೃತ ಮೂಲವಾಗಿದ್ದು, ರೂಪ ಮಾರ್ಪಡಿಸಿಕೊಂಡು ಬಂದ ಪದಗಳಾಗಿವೆ. ನಡುಗನ್ನಡವೂ ಸೇರಿದಂತೆ, ಪ್ರಾಚೀನ ಕನ್ನಡ ಸಾಹಿತ್ಯವು, ಸಂಸ್ಕೃತ  ಪರಿಚಯವಿಲ್ಲದಿದ್ದರೆ ಅವು ತಮ್ಮ ಅತಿಶಯ ಅರ್ಥವನ್ನು ಬಿಟ್ಟುಕೊಡಲಾರವು. ಕನ್ನಡದ ಶಬ್ದಕೋಶ-ವ್ಯಾಕರಣ ಎರಡಕ್ಕೂ ಸಂಸ್ಕೃತ  ಬೇಕೆಬೇಕು.  ಕನ್ನಡ ಹಾಗೂ ಸಂಸ್ಕೃತ ಎರಡೂ ಪರಸ್ಪರ ವಿರುದ್ಧವಾದ ಧ್ರುವಗಳಲ್ಲ. ಅವು ಪೂರಕವಾದ ಭಾಷೆಯಾಗಿವೆ ಎಂಬುದನ್ನು ನಾವು ಮರೆಯಬಾರದು.
             ಸಾಮಾಜಿಕ ಜಾಲತಾಣಗಳಲ್ಲಿ ಸಂಸ್ಕೃತದ ಕುರಿತು ಶಿಕ್ಷಣ, ಶಿಬಿರ, ಲೇಖನ ಬರಹದಂತಹ ಅದೆಷ್ಟೋ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡು, ಸಂಸ್ಕೃತವನ್ನು ಬೆಳೆಸುವಲ್ಲಿ ಹೆಜ್ಜೆ ಹಾಕೋಣ. ಸಂಸ್ಕೃತವನ್ನು ಈ ದಿನಕ್ಕಷ್ಟೇ ಮೀಸಲಾಗಿರಿಸದೆ, ಎಲ್ಲ ದಿನವನ್ನು 
ಸಂಸ್ಕೃತಮಯವಾಗಿಸೋಣ."ಗ್ರೀಕ್ ಭಾಷೆಗಿಂತಲೂ ಹೆಚ್ಚು ಪರಿಪೂರ್ಣವಾದ, ಲ್ಯಾಟಿನ್‍ಗಿಂತಲೂ ಹೆಚ್ಚು ವ್ಯಾಪಕವಾದ, ಇವೆರಡು ಭಾಷೆಗಳಿಗಿಂತಲೂ ಹೆಚ್ಚು ಪರಿಷ್ಕೃತವಾದ ಸಂಸ್ಕೃತ ಭಾಷೆಯ ಸಂರಚನೆ ಬೆರಗುಗೊಳಿಸುವಂತದ್ದು. ಸಂಸ್ಕೃತ ಸಾಹಿತ್ಯದ ಸಮಗ್ರಭಾಗದ ಪರಿಚಯ ಪಡೆಯಲು ಒಂದು ಜೀವನ ಏತಕ್ಕೂ ಸಾಲದು” ಎಂದು ಪ್ರಸಿದ್ಧ ಆಂಗ್ಲಭಾಷಾವಿದ್ವಾಂಸ, ಆಂಗ್ಲಭಾಷಾಶಾಸ್ತ್ರಿ, ಸರ್. ವಿಲಿಯಂ ಜೋನ್ಸ್ ಭಾರತಕ್ಕೆ ಬಂದು ಸಂಸ್ಕೃತ  ಅಧ್ಯಯನ ಕೈಗೊಂಡು ಯುರೋಪಕ್ಕೆ ತೆರಳಿ ಅಲ್ಲಿಯ ವಿದ್ವಾಂಸರ ಎದುರು ಸಂಸ್ಕೃತ ಭಾಷೆಯ ಹಿರಿಮೆ-ಗರಿಮೆಯನ್ನು ವರ್ಣಿಸುತ್ತಾ ಉದ್ಘರಿಸಿದ ಮಾತಿದು.
        ಸಂಸ್ಕೃತ ಮರೆಯಾಗುತ್ತಿರುವ ಈ ದಿನಗಳಲ್ಲಿ, ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ‘ನೂತನ ಶಿಕ್ಷಣ ನೀತಿ’ ಯಲ್ಲಿ ಸಂಸ್ಕೃತ ಭಾಷೆಗೆ ಮಹತ್ವ  ಕೊಟ್ಟಿರುವುದು ನಿಜಕ್ಕೂ ಶ್ಲಾಘನೀಯ. ಸಂಸ್ಕೃತವನ್ನು ಆರಿಸಿಕೊಂಡ ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗಾಗಿ ಓದದೆ, ಸಂಸ್ಕೃತ ಕಲಿಯುವಲ್ಲಿ ಮನಸ್ಸು ಮಾಡಬೇಕು. ವಿದೇಶೀಯರು ಸಂಸ್ಕೃತ ಕಲಿಯುವತ್ತ ಮುಖ ಮಾಡಿದ್ದು, ಸಂಸ್ಕೃತವೆಂದರೆ ಮೂಗು ಮುರಿಯುವ ಭಾರತೀಯರಿಗೆ ಆದರ್ಶವಾಗಬೇಕು. ಸಂಸ್ಕೃತವೆಂದರೆ ‘ಕಬ್ಬಿಣದ ಕಡಲೆ’ ಎಂಬ ಭಾವನೆಯನ್ನು ತೊಡೆದು ಹಾಕಬೇಕು.


ಸಂತೋಷ ಎಸ್ ಬಂಡೆ
ಶಿಕ್ಷಕರು,ನಾಗಠಾಣ.
ವಿಜಯಪುರ

ಸುದ್ದಿ ಓದಿ